ಬೆಂಗಳೂರು(ನ. 14): ಇವತ್ತು ದೀಪಾವಳಿ ಹಬ್ಬ ರಾಜ್ಯಾದ್ಯಂತ ಸಡಗರದಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಹಬ್ಬಕ್ಕೆ ಪರಿಕರಗಳನ್ನ ಕೊಳ್ಳಲು ಇಂದು ಬೆಳಗ್ಗೆ ವಿವಿಧ ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ಇದ್ದವು. ಕೆಲವೆಡೆ ಹೊರತುಪಡಿಸಿ ಬಹುತೇಕ ಮಾರುಕಟ್ಟೆಗಳಲ್ಲಿ ಜನರು ಕೋವಿಡ್ ಭಯವಿಲ್ಲದೆ ಹಬ್ಬದ ಖರೀದಿಯ ಭರಾಟೆಯಲ್ಲಿದ್ದುದು ಕಂಡುಬಂದಿತು. ಬೆಂಗಳೂರಿನ ಬನಶಂಕರಿ, ಗಾಂಧಿ ಬಜಾರ್, ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ ಮೊದಲಾದ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ ವ್ಯಾಪಾರ ಬಲುಜೋರಾಗಿದೆ. ಮಲ್ಲೇಶ್ವರಮ್ನ ಹೂ ಮಾರುಕಟ್ಟೆ ಮಾತ್ರ ತುಸು ಬಿಕೋ ಎನ್ನುತ್ತಿದೆ. ಚಿಕ್ಕಪೇಟೆಯಲ್ಲಿ ಕಳೆದ ಒಂದು ವಾರದಿಂದಲೂ ಹಬ್ಬಕ್ಕೆ ಬಟ್ಟೆ ಖರೀದಿಸಲು ಜನರು ಮುಗಿಬಿದ್ದಿದ್ದಾರೆ.
ತುಮಕೂರಿನ ಮಾರುಕಟ್ಟೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರೂ ಕೋವಿಡ್ ನಿಯಮ ಪಾಲನೆ ಮಾತ್ರ ಕಂಡುಬರಲಿಲ್ಲ. ಆರೋಗ್ಯ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿರಲಿಲ್ಲ. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವೇ ಮಾಯವಾಗಿದೆ. ಅನೇಕ ಮಂದಿ ಮಾಸ್ಕ್ ಕೂಡ ಧರಿಸಿದೇ ಖರೀದಿ ಭರಾಟೆಯಲ್ಲಿ ತೊಡಗಿದ್ದರು.
ಇದನ್ನೂ ಓದಿ: ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ: ಡಿಸಿಎಂ ಗೋವಿಂದ ಕಾರಜೋಳ
ಮೈಸೂರು, ವಿಜಯಪುರ, ಹಾವೇರಿ, ಬೆಳಗಾವಿ, ಕಲಬುರ್ಗಿ, ರಾಮನಗರ, ರಾಯಚೂರು ಮೊದಲಾದ ಜಿಲ್ಲೆಗಳಲ್ಲೂ ಜನರು ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರಾದರೂ ಕೋವಿಡ್ ನಿಯಮ ಪಾಲನೆ ಮಾತ್ರ ಅಪರೂಪವೆಂಬಂತಾಗಿದೆ.
ಮಂಗಳೂರಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾವಿರಾರು ಭಕ್ತರು ನೆರೆದಿದ್ದಾರೆ. ಆದರೆ, ಇಲ್ಲಿ ಮಾಸ್ಕ್ ನಿಯಮವನ್ನು ಆಡಳಿತ ಮಂಡಳಿ ಬಹಳ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿದೆ. ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ವಿಶೇಷವಾಗಿ ಅಲಂಕಾರಗೊಳಿಸಲಾಗಿದೆ. ಇಂದು ಒಂದೇ ದಿನ ಧರ್ಮಸ್ಥಳಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಂದು ಹೋಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಯದುವಂಶದ ನಾಡಗೀತೆ ರಚಿಸಿದ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ ಸ್ಮಾರಕಕ್ಕೆ ಪುನರ್ಜನ್ಮ
ಚಿಕ್ಕಮಗಳೂರಿನ ಪ್ರಸಿದ್ಧ ದೇವಿರಮ್ಮ ಜಾತ್ರೆ ಕೂಡ ಇವತ್ತು ಆರಂಭಗೊಂಡಿದೆ. ವರ್ಷಕ್ಕೊಮ್ಮೆ ಮೂರು ದಿನ ದರ್ಶನ ನೀಡುವ ದೇವಿರಮ್ಮಳನ್ನ ಕಾಣಲು ಸಾವಿರಾರು ಮಂದಿ ಬೆಟ್ಟವೇರುತ್ತಿದ್ದಾರೆ. ಬಿಜೆಪಿಯಲ್ಲಿ ಉನ್ನತ ಹುದ್ದೆಗೇರಿ ಹೊಸ ಜವಾಬ್ದಾರಿಗಳನ್ನ ಹೊತ್ತಿರುವ ಸಿ.ಟಿ. ರವಿ ತಮ್ಮ ಕುಟುಂಬ ಸಮೇತ ಬೆಟ್ಟ ಹತ್ತಿ ದೇವಿರಮ್ಮಳ ದರ್ಶನ ಪಡೆದಿದ್ದಾರೆ.
ಇದೇ ವೇಳೆ, ರಾಜ್ಯಾದ್ಯಂತ ಹೂವು ಮತ್ತಿತರ ವಸ್ತುಗಳ ದರ ತುಟ್ಟಿಯಾಗಿದೆ. ಬೆಂಗಳೂರಿನಲ್ಲಿ ಮಲ್ಲಿಗೆ ಹೂವಿನ ಬೆಲೆಯಂತೂ ಒಂದು ಕಿಲೋಗೆ ಸಾವಿರ ರೂ ವರೆಗೂ ಏರಿದೆ. ಕಾಕಡ ಹೂ 1,200 ರೂ ಬೆಲೆ ಮುಟ್ಟಿದೆ. ತುಳಸಿಯ ಒಂದು ದೊಡ್ಡ ಹಾರ 500 ರೂ ಇದೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ನೇಮಕ; ಸಿಟಿ ರವಿಗೆ ಮೂರು ರಾಜ್ಯಗಳ ಹೊಣೆ
ಬೆಂಗಳೂರಿನಲ್ಲಿ ಹೂ ಹಣ್ಣುಗಳ ದರ:
ಹೂಗಳ ದರ:
ಮಲ್ಲಿಗೆ 800 ರೂ. ಕೆಜಿ
ಚೆಂಡು ಹೂ - 100 ರೂ. ಕೆಜಿ
ಸೇವಂತಿಗೆ ಹೂ - 200 ರೂ. ಕೆಜಿ
ಕಾಕಡ ಹೂ - 1200 ರೂ. ಕೆಜಿ
ಗುಲಾಬಿ ಹೂ - 300 ರೂ. ಕೆಜಿ
ತುಳಸಿ - 500 ರೂ. ಒಂದು ದೊಡ್ಡ ಹಾರ
ಇದನ್ನೂ ಓದಿ: ಇಸ್ಕಾನ್ನಲ್ಲಿ ದೀಪೋತ್ಸವದ ಸಂಭ್ರಮ; ಜ್ಯೋತಿ ಬೆಳಗಿಸುವ ಮೂಲಕ ದಾಮೋದರನ ಸ್ಮರಣೆ
ಹಣ್ಣುಗಳ ದರ:
ಸೇಬು - 120 ರೂ. ಕೆಜಿ
ಮೋಸಂಬಿ - 100 ರೂ. ಕೆಜಿ
ದಾಳಿಂಬೆ - 150-200 ರೂ. ಕೆಜಿ
ಸೀತಾಫಲ - 120 ರೂ. ಕೆಜಿ
ದ್ರಾಕ್ಷಿ - 200 ರೂ. ಕೆಜಿ
ಬಾಳೆಹಣ್ಣು 80 ರೂ. ಕೆಜಿ
ಸಪೋಟಾ - 100 ರೂ. ಕೆಜಿ
ಪೇರಲೆ 80-100 ರೂ. ಕೇಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ