• Home
  • »
  • News
  • »
  • state
  • »
  • Male Mahadeshwara Temple: ಮಲೆ ಮಹದೇಶ್ವರನಿಗೆ ಹಾಲರುವೆ ಸೇವೆ; ಬಾಲಕಿಯರು ಹೊತ್ತು ತಂದ ನೀರಲ್ಲಿ ಮಾದಪ್ಪನಿಗೆ ಅಭಿಷೇಕ

Male Mahadeshwara Temple: ಮಲೆ ಮಹದೇಶ್ವರನಿಗೆ ಹಾಲರುವೆ ಸೇವೆ; ಬಾಲಕಿಯರು ಹೊತ್ತು ತಂದ ನೀರಲ್ಲಿ ಮಾದಪ್ಪನಿಗೆ ಅಭಿಷೇಕ

ಮಾದಪ್ಪನಿಗೆ ಹಾಲರುವೆ ಸೇವೆ

ಮಾದಪ್ಪನಿಗೆ ಹಾಲರುವೆ ಸೇವೆ

ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಿಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತೆ ಎಂಬ ನಂಬಿಕೆಯು ಇದೆ. ಹಾಗಾಗಿ ಅಂತಹ ತಾಯಿಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

  • Share this:

ಚಾಮರಾಜನಗರ (ನ.25) ದೇಶದೆಲ್ಲೆಡೆ ದೀಪಾವಳಿ (Deepavali) ಸಂಭ್ರಮ ಮನೆ ಮಾಡಿದೆ.  ಒಂದೊಂದು ಕಡೆ ಒಂದೊಂದು ಸಂಪ್ರದಾಯದಂತೆ ದೀಪಾವಳಿ ಆಚರಿಸುವುದು ಸಾಮಾನ್ಯ.  ಇತಿಹಾಸ ಪ್ರಸಿದ್ದ ಮಲೆಮಹದೇಶ್ವರ ಬೆಟ್ಟದಲ್ಲಂತೂ (Male Mahadeshwara Temple) ದೀಪಾವಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲಿ ಹಾಲರುವೆ ಉತ್ಸವವೂ ಒಂದು. ಬೇಡಗಂಪಣ ಜನಾಂಗಕ್ಕೆ ಸೇರಿದ 101  ಮಂದಿ ಬಾಲಕಿಯರು 9 ಕಿಲೋ ಮೀಟರ್ ದೂರದ ಹಾಲರೆಹಳ್ಳದಿಂದ ಬರಿಗಾಲಲ್ಲಿ  ಹೊತ್ತು ತರುವ ನೀರಿನಿಂದ  ಮಹದೇಶ್ವರನಿಗೆ ಅಭಿಷೇಕ (Abhisheka) ಮಾಡುವುದು ಹಾಲರುವೆ ಉತ್ಸವದ ವಿಶೇಷ.


ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ.  ಮೊದಲ ದಿನ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ, ಎರಡನೇ ದಿನ ಹಾಲರುವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ. ಎರಡನೇ ದಿನ ನಡೆಯುವ ಹಾಲರುವೆ ಉತ್ಸವ ವಿಭಿನ್ನ ಹಾಗು ವಿಶೇಷವಾಗಿದೆ.


ಮಹದೇಶ್ವರನ ದೇಗುಲಕ್ಕೆ 9 ಕಿಲೋ ಮೀಟರ್ ದೂರದಲ್ಲಿ ಹಾಲರೆಹಳ್ಳ ಹರಿಯುತ್ತದೆ. ದೀಪಾವಳಿ ಜಾತ್ರೆಯ ಎರಡನೇ ದಿನ ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101  ಬಾಲಕಿಯರು ಉಪವಾಸವಿದ್ದು   ಹಾಲರೆಹಳ್ಳಕ್ಕೆ ಬಂದು ಉಟ್ಟಬಟ್ಟೆಯಲ್ಲೇ ಸ್ನಾನ ಮಾಡುತ್ತಾರೆ. ನಂತರ ಮಡಿಬಟ್ಟೆ ತೊಟ್ಟು ಹಳ್ಳದಲ್ಲಿ ಹರಿಯುವ  ನೀರು  ಹೊತ್ತು ತರುತ್ತಾರೆ. ಇದಕ್ಕು ಮೊದಲು ಕುಂಭಗಳಿಗೆ ಹಳ್ಳದ ನೀರು ತುಂಬಿ ಕಾಡುಬಾಳೆ ಎಲೆ ಮುಚ್ಚಿ  ಹೂವಿನಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ.  ಬರಿಗಾಲಲ್ಲಿ ಒಂಭತ್ತು ಕಿಲೋಮೀಟರ್ ಬೆಟ್ಟಗುಡ್ಡ ಹತ್ತಿ  ಬರುವ ಇವರನ್ನು ಸತ್ತಿಗೆ ಸೂರಿಪಾನಿ,  ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಬೇಡಗಂಪಣ ಬಾಲೆಯರು 101 ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಗುತ್ತದೆ. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿರುತ್ತಾರೆ


ಇದನ್ನೂ ಓದಿ: Male Mahadeshwara Hills: ಮಹದೇಶ್ವರಬೆಟ್ಟದಲ್ಲಿ ಡಿಜಿಟಲ್ ಹುಂಡಿ; ಕ್ಯೂಆರ್ ಕೋಡ್ ಬಳಸಿ ಕಾಣಿಕೆ ಅರ್ಪಿಸಿ


ಮಕ್ಕಳಿಗೆ ಕುಡಿಸಲು ಎದೆ ಹಾಲು ಬಾರದ ತಾಯಿಂದಿರು ಹರಕೆ ಹೊತ್ತು ಹಾಲರುವೆ ಅಭಿಷೇಕದ ತೀರ್ಥ ಸೇವಿಸಿದರೆ ಹಾಲು ಬರುತ್ತೆ ಎಂಬ ನಂಬಿಕೆಯು ಇದೆ. ಹಾಗಾಗಿ ಅಂತಹ ತಾಯಿಂದಿರು ಸಹ ಹಾಲರುವೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.  ಒಟ್ಟಾರೆ ಏಳು ಮಲೆ ಒಡೆಯನಿಗೆ ದೀಪಾವಳಿಯಲ್ಲಿ ಎಲ್ಲ ಅಭಿಷೇಕಗಳಿಗಿಂತ  ಹಾಲರುವೆ ಅಭಿಷೇಕ ವಿಶೇಷವಾದದ್ದು.


ಹಾಲರುವೆ ಉತ್ಸವದ ಹಿನ್ನಲೆ:


ಮಹದೇಶ್ವರನ ದೇಗುಲಕ್ಕೆ 9 ಕಿ.ಮೀ ದೂರದಲ್ಲಿ ಬೆಟ್ಟ ಗುಡ್ಡಗಳ ನಡುವೆ ದಟ್ಟಾರಣ್ಯದಲ್ಲಿ ಹಳ್ಳ ಹರಿಯುತ್ತದೆ.  ಇಲ್ಲಿನ  ನೀರು ಹಾಲಿನಂತೆ ಬೆಳ್ಳಗೆ ಕಾಣುವುದರಿಂದ  ಇದಕ್ಕೆ ಹಾಲರೆಹಳ್ಳ ಎಂಬ ಹೆಸರು ಇದೆ. ಪ್ರತಿವರ್ಷ ಜಾತ್ರಾ ಸಂದರ್ಭಗಳಲ್ಲಿ ಇದೇ ನೀರನ್ನು ತಂದು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ.


ಇದರ ಹಿಂದೆ ಒಂದು ಜಾನಪದ ಕಥೆಯು ಚಾಲ್ತಿಯಲ್ಲಿದೆ. ಅದೇನೆಂದರೆ  ಮಹದೇಶ್ವರರು ಒಮ್ಮೆ  ಇಲ್ಲಿ ವಿಶ್ರಾಂತಿ  ಪಡೆದು ನಿದ್ರಿಸುತ್ತಿದ್ದಾಗ, ಕಾರಯ್ಯ ಬಿಲ್ಲಯ್ಯ ಎಂಬ ಬೇಟೆಗಾರರು ಅವರಿಗಾಗಿ ಕಾಡಮ್ಮೆ ಹಾಲನ್ನು ತಂದು ಅವರ ಪಾದದ ಬಳಿ ಇಟ್ಟು ಕಾಯುತ್ತಿದ್ದರು ಮಹದೇಶ್ವರರಿಗೆ ಎಚ್ಚರವಾದಾಗ ಅವರ ಪಾದ ತಗುಲಿ ಕಾಡಮ್ಮೆ ಹಾಲು ಪಕ್ಕದ ಹಳ್ಳದಲ್ಲಿ  ಚಲ್ಲಿ ಹೋಯ್ತುತೆಂದು ಇದರಿಂದ ತಾವು ತಂದ ಕಾಡಮ್ಮೆ ಹಾಲು ಮಹದೇಶ್ವರಿಗೆ ಅರ್ಪಣೆ ಆಗಲಿಲ್ಲ ಎಂದು  ಕಾರಯ್ಯ ಬಿಲ್ಲಯ್ಯ ನೊಂದುಕೊಂಡರೆಂದೂ  ಆಗ ಮಹದೇಶ್ವರರು  ಇನ್ನು ಮುಂದೆ ಇದೇ ನೀರನ್ನು ನನ್ನ ಮಜ್ಜನಕ್ಕೆ ತರಿಸಿಕೊಳ್ಳುತ್ತೇನೆಂದು ಅಭಯನೀಡಿ ಅವರನ್ನು ಸಮಾಧಾನಪಡಿಸಿದರು ಎಂಬ ಕಥೆ ಇದೆ.


ಇದನ್ನೂ ಓದಿ: Surya Grahana: ಗ್ರಹಣದ ಬಳಿಕ ಮನೆ, ದೇಗುಲಗಳ ಶುದ್ಧೀಕಾರ್ಯ; ದೇವರಿಗೆ ವಿಶೇಷ ಪೂಜೆ


ಹಾಗಾಗಿ ಅಂದಿನಿಂದಲು ಪ್ರತಿವರ್ಷ ಹಾಲರೆಹಳ್ಳದಿಂದ ಕುಂಭಗಳಲ್ಲಿ ನೀರು ತಂದು ಮಹದೇಶ್ವರನಿಗೆ ಅಭಿಷೇಕ ಮಾಡಲಾಗುತ್ತಿದೆ ಎನ್ನುತ್ತಾರೆ ಬೇಡಗಂಪಣ ಸಮುದಾಯದ ಮುಖಂಡರು

Published by:ಪಾವನ ಎಚ್ ಎಸ್
First published: