ಬೆಂಗಳೂರು (ನ. 13): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಹಸಿರು ಪಟಾಕಿ ಕುರಿತು ಆದೇಶ ಹೊರಡಿಸಲಾಗಿದೆ. ಹಸಿರು ಪಟಾಕಿ ಎಂದರೇನು? ಎಂಬ ಬಗ್ಗೆ ಕೊಳ್ಳುವವರಲ್ಲಿ ಮಾತ್ರವಲ್ಲದೆ ಮಾರಾಟ ಮಾಡುವವರಿಗೂ ಗೊಂದಲಗಳು ಇರುವುದರಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವರ್ಷ ಕೇವಲ ಹಸಿರು ಪಟಾಕಿಯನ್ನು ಮಾತ್ರ ಖರೀದಿಸಿ ದೀಪಾವಳಿ ಆಚರಿಸಲು ಸರ್ಕಾರದಿಂದ ಸೂಚನೆ ನೀಡಲಾಗಿದೆ. ಹಸಿರು ಪಟಾಕಿಗಳು ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ. ಹೀಗಾಗಿ ಈ ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಾಗಾದರೆ, ಹಸಿರು ಪಟಾಕಿಯನ್ನು ಪತ್ತೆ ಹಚ್ಚುವುದು ಹೇಗೆ? ಎಂಬುದಕ್ಕೆ ಇಲ್ಲಿದೆ ಮಾಹಿತಿ...
ಹಸಿರು ಪಟಾಕಿಯನ್ನು NEERI ಲ್ಯಾಬ್ ಫಾರ್ಮುಲಾದ ಪ್ರಕಾರ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದೆ. ಗ್ರಾಹಕರು ಹಸಿರು ಪಟಾಕಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹಸಿರು ಪಟಾಕಿ ಬಾಕ್ಸ್ ಮೇಲೆ NEERI ಮತ್ತು PESO ಲಾಂಛನ ಇರುತ್ತದೆ. ನಿಮ್ಮ ಮೊಬೈಲ್ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹಸಿರು ಪಟಾಕಿ ಎಂದರೇನು?:
ಹಸಿರು ಪಟಾಕಿ ಎಂದರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿ. CSIR ಮತ್ತು NEERI ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿಯನ್ನು ಅಭಿವೃದ್ದಿ ಪಡಿಸಿವೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ 2018ರಲ್ಲಿ ಹಸಿರು ಪಟಾಕಿಗಳನ್ನು ಅಭಿವೃದ್ಧಿ ಮಾಡಲಾಯಿತು. ಲಿಥಿಯಂ, ಲೆಡ್ (ಸೀಸ), ಆರ್ಸೆನಿಕ್ ಮತ್ತು ಬೇರಿಯಂನಂಥ ಹಾನಿಕಾರಕ ಕಮಿಕಲ್ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ