ನೆಲಮಂಗಲ (ಜ. 20): ಇಡೀ ರಾಜ್ಯದಲ್ಲೇ ಪ್ರಪ್ರಥಮವಾಗಿ ಲಕ್ಷಾಂತರ ಜನರಿಗೆ ದಾಸೋಹ ಮಾಡುವ ಸೇವೆ ಮೊಟ್ಟಮೊದಲಿಗೆ ಕಂಡು ಬಂದಿದ್ದು ಸಿದ್ದಗಂಗಾ ಮಠದಲ್ಲಿ.ಇದಕ್ಕೆ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರೇ ಪ್ರಮುಖ ಕಾರಣ. ದಾಸೋಹವೇ ಅವರಿಗೆ ಜೀವಾಳವಾಗಿತ್ತು. ಹಾಗಾಗಿ ಅವರ ಲಿಂಗೈಕ್ಯವಾದ ದಿನವನ್ನು ಸರ್ಕಾರ ದಾಸೋಹ ದಿನ ಎಂದು ಘೋಷಣೆ ಮಾಡಬೇಕು ಎಂದು ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಮಾತನಾಡಿದ ಅವರು, ಜನವರಿ 21 ನೇ ತಾರೀಖಗೆ ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯವಾಗಿ ಎರಡು ವರ್ಷ ಆಗಲಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ ಸ್ವಾಮೀಜಿಯವರ ಸ್ಮರಣೆಗಾಗಿ ಜ. 21ನ್ನು ಸರ್ಕಾರ ದಾಸೋಹ ದಿನವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿದರು
ಲಕ್ಷಾಂತರ ವಿದ್ಯಾರ್ಥಿಗಳ ಬೆಳಕಿಗೆ ದಾರಿ ದೀಪವಾಗಿದ್ದ ಹಿಂದಿನ ಉದ್ದಾನ ಶಿವಯೋಗಿಗಳು ಆರಂಭ ಮಾಡಿದರು. ಈ ದಾಸೋಹವನ್ನು ಶ್ರೀ ಶಿವಕುಮಾರ ಸ್ವಾಮೀಜಿಯವರು ಮುಂದುವರೆಸಿ ಮಠಕ್ಕೆ ಬಂದ ಭಕ್ತಾದಿಗಳಿಗೆ, ಮಠದ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮೂರು ಬಾರಿ ದಾಸೋಹವನ್ನು ನೀಡುತ್ತಾ ಬಂದಿದ್ದರು. ಅದನ್ನು ಈಗಿನ ಸಿದ್ದಲಿಂಗ ಸ್ವಾಮೀಜಿಯವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಬರಗಾಲದಲ್ಲಿಯೂ ನಿಲ್ಲಲಿಲ್ಲ ದಾಸೋಹ:
ಬರಗಾಲದಲ್ಲಿಯೂ ಮಠದಲ್ಲಿ ಅನ್ನದಾಸೋಹವನ್ನು ನಡೆಸಿಕೊಂಡು ಬಂದು ಹಸಿದವರಿಗೆ ಅನ್ನ ನೀಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅವರ ಲಿಂಗೈಕ್ಯವಾದ ದಿನವೂ ಸಹ ಬಂದಂತಹ ಭಕ್ತಾರಿಗೆ ದಾಸೋಹ ನೀಡಿದ್ದಾರೆ. ಭಕ್ತಾದಿಗಳು ಯಾರೂ ಸಹ ಪ್ರವಾಸ ಸೇವಿಸದೆ ಮಠದಿಂದ ಹೋಗಬಾರದು ಎಂದು ಯಾವಾಗಲೂ ಹೇಳುತ್ತಲೇ ಇದ್ದರು. ಹಾಗಾಗಿ ಅವರು ಲಿಂಗೈಕ್ಯರಾದ ದಿನವನ್ನು ರಾಜ್ಯ ಸರ್ಕಾರ ದಾಸೋಹ ದಿನ ಎಂದು ಆಚರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಒತ್ತಾಯ:
ಶ್ರೀಮಠದ ಭಕ್ತಾದಿಗಳು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದಾಸೋಹ ದಿನ ಆಚರಿಸಿಲು ಒತ್ತಾಯಿಸಿದ್ದು, ಬಹಳಷ್ಟು ವೈರಲ್ ಆಗಿರುವುದಕ್ಕೆ ಸಾಕಷ್ಟು ಭಕ್ತರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿದಿದ್ದು ಆ ನೆನೆಪು ಸದಾ ಇರಬೇಕು. ಹಾಗಾಗಿ ಡಿ. 21ರ ದಿನವನ್ನು ದಾಸೋಹ ದಿನವೆಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ರುದ್ರಮುನಿ ಸ್ವಾಮೀಜಿ ಪತ್ರ ಬರೆದಿದ್ದಾರೆ.
ದಾಸೋಹ ಮಾಡುವ ಸಂಕಲ್ಪ:
ಲಿಂಗೈಕ್ಯ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳವರ ಲಿಂಗೈಕ್ಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಬೇಕೆಂದು ಹಲವಾರು ವೇದಿಕೆಗಳಲ್ಲಿ ತಿಳಿಸಲಾಗಿದೆ. ಶ್ರೀ ಮಠದ ಹಾಗೂ ಶಿವಕುಮಾರಸ್ವಾಮಿಗಳ ಭಕ್ತರು, ಅಭಿಮಾನಿಗಳು, ಹಿತೈಶಿಗಳು ಜನವರಿ 21 ರ ದಿನವನ್ನು ದಾಸೋಹ ದಿನವೆಂದು ಪರಿಗಣಿಸಿ ಮನೆಮನೆಯಲ್ಲಿ ಒಬ್ಬರಿಗಾದರೂ ದಾಸೋಹ ಮಾಡುವ ಸಂಕಲ್ಪವನ್ನು ಮಾಡಬೇಕು. ಅದರ ಮೂಲಕ ಪೂಜ್ಯರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ