International Tiger Day: ಮುಖ್ಯಮಂತ್ರಿಗಳೇ ಮಹದೇಶ್ವರ ಬೆಟ್ಟ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಪ್ರಸ್ತುತ 25ರಿಂದ 30 ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದ್ದು ಈ ವನ್ಯಧಾಮವನ್ನು ಸಹ ಹುಲಿ ಸಂರಕ್ಷಿತ ಪ್ರದೇಶ  ಎಂದು ಘೋಷಿಸುವ ಪ್ರಸ್ತಾವನೆಗೆ ಈಗಾಗಲೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಸಿರು ನಿಶಾನೆ ತೋರಿಸಿದೆ.  ಆದರೆ ರಾಜ್ಯ ಸರ್ಕಾರ  ಮಾತ್ರ ಇನ್ನು ಒಪ್ಪಿಗೆ ನೀಡಿಲ್ಲ.

ಮಲೆಮಹದೇಶ್ವರ ವನ್ಯಧಾಮ

ಮಲೆಮಹದೇಶ್ವರ ವನ್ಯಧಾಮ

  • Share this:
ಚಾಮರಾಜನಗರ (ಜು.29 ): ಇಂದು ಅಂತರಾಷ್ಟ್ರೀಯ ಹುಲಿ ದಿನ (International Tiger Day). ಆಹಾರ ಸರಪಳಿಯ ಮೇಲುಸ್ತರದಲ್ಲಿರುವ ಹುಲಿಯನ್ನು ಸಂರಕ್ಷಿಸಿದರೆ  ಜೀವವೈವಿಧ್ಯತೆಯ  ಉಳಿವಿಗೆ ಕಾರಣವಾಗಲಿದೆ. ವನ್ಯಸಂಪತ್ತು ಸಂರಕ್ಷಣೆಯಾಗಲಿದೆ (Forest Conservation). ಈ ಹಿನ್ನಲೆಯಲ್ಲಿ ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ (Awareness) ಮೂಡಿಸುವುದು ಮತ್ತು  ಹುಲಿಗಳ ನೈಸರ್ಗಿಕ  ಆವಾಸಸ್ಥಾನಗಳನ್ನು ಕಾಪಾಡುವ ದೃಷ್ಟಿಯಿಂದ 2010ರ ಜುಲೈ 29 ರಂದು ರಷ್ಯಾದ ಪೀಟರ್ಸ್ ಬರ್ಗ್ ನಡೆದ ಶೃಂಗಸಭೆಯಲ್ಲಿ ಹಲವು ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. 2022 ರ ಅಂತ್ಯದ ವೇಳೆಗೆ  ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವುದಾಗಿ ಈ ದೇಶಗಳು ಘೋಷಿಸಿದ್ದವು. ಅಂದಿನಿಂದ ಪ್ರತಿವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನ  ಆಚರಿಸಿಕೊಂಡು ಬರಲಾಗುತ್ತಿದೆ.

ಕರ್ನಾಟಕದಲ್ಲಿ 524 ಹುಲಿಗಳಿವೆ

ನಮ್ಮ ರಾಷ್ಟ್ರೀಯ ಪ್ರಾಣಿಯು ಆದ ಹುಲಿಗಳ ಸಂಖ್ಯೆಯಲ್ಲಿ ಪ್ರಸ್ತುತ  ಕರ್ನಾಟಕ ರಾಜ್ಯ ದೇಶದಲ್ಲೇ  ಎರಡನೇ ಸ್ಥಾನದಲ್ಲಿದೆ  2006ರಲ್ಲಿ  ಭಾರತದಲ್ಲಿ  1411 ಹುಲಿಗಳಿದ್ದವು. ಆಗ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 290 ಇತ್ತು. 2010ರಲ್ಲಿ ದೇಶದಲ್ಲಿ  1706 ಹುಲಿಗಳಿದ್ದರೆ ಈ ಪೈಕಿ  ಕರ್ನಾಟಕದಲ್ಲಿ 300 ಹುಲಿಗಳಿದ್ದವು. 2014ರಲ್ಲಿ ದೇಶದಲ್ಲಿ 2226, ಕರ್ನಾಟಕದಲ್ಲಿ 406 ಹಾಗು 2018ರಲ್ಲಿ ದೇಶದಲ್ಲಿ 2967, ಕರ್ನಾಟಕದಲ್ಲಿ 524 ಹುಲಿಗಳಿದ್ದು ಪ್ರತಿವರ್ಷ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹುಲಿ ಅಂದಾಜು ಸಮೀಕ್ಷೆ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದು ಪ್ರಸ್ತುತ ಅವಧಿಯ ಹುಲಿ ಅಂದಾಜು ಸಮೀಕ್ಷೆ  ಈಗಾಗಲೇ ಪೂರ್ಣಗೊಂಡು ಅಧಿಕೃತ ಪಟ್ಟಿ ಹೊರಬೀಳಬೇಕಿದ್ದು  ಹುಲಿಗಳ ಸಂಖ್ಯೆ ದೇಶದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎಂದು ನಿರೀಕ್ಷಿಸಲಾಗಿದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿದೆ 25ರಿಂದ 30 ಹುಲಿ

ಹುಲಿಗಳ ಸಂರಕ್ಷಣೆ ದೃಷ್ಟಿಯಿಂದ ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ, ಬಿ.ಆರ್.ಟಿ., ಹಾಗು ಅಣಶಿ-ದಾಂಡೇಲಿ ಹೀಗೆ  ಐದು ಅರಣ್ಯಗಳನ್ನು ಹುಲಿಸಂರಕ್ಷಿತ ಪ್ರದೇಶಗಳೆಂದು ಘೋಷಿಸಲಾಗಿದ್ದು ಹಲವು ಸಂರಕ್ಷಣಾ ಕ್ರಮಗಳು ಜಾರಿಯಲ್ಲಿವೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಪ್ರಸ್ತುತ 25ರಿಂದ 30 ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದ್ದು ಈ ವನ್ಯಧಾಮವನ್ನು ಸಹ ಹುಲಿ ಸಂರಕ್ಷಿತ ಪ್ರದೇಶ  ಎಂದು ಘೋಷಿಸುವ ಪ್ರಸ್ತಾವನೆಗೆ ಈಗಾಗಲೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಸಿರು ನಿಶಾನೆ ತೋರಿಸಿದೆ.  ಆದರೆ ರಾಜ್ಯ ಸರ್ಕಾರ  ಒಪ್ಪಿಗೆ ನೀಡಲು ಮೀನಾಮೇಷ  ಎಣಿಸುತ್ತಿದೆ.

ಹಲವಾರು ಸಂರಕ್ಷಣಾ ಕ್ರಮಗಳ ಫಲವಾಗಿ  ನಾಗರಹೊಳೆ  ಬಂಡೀಪುರ,  ಬಿ.ಆರ್,ಟಿ.  ಹಾಗು ತಮಿಳುನಾಡಿನ ಸತ್ಯಮಂಗಲಂ ಅರಣ್ಯಗಳಲ್ಲಿ  ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಅಲ್ಲಿಂದ  ವಲಸೆ ಬರುವ ವನ್ಯಜೀವಿಗಳು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೀಡು ಬಿಡುತ್ತಿವೆ. ವನ್ಯಜೀವಿಗಳ ವಾಸಕ್ಕೆ   ಮಲೆ ಮಹದೇಶ್ವರ ಅರಣ್ಯ ಯೋಗ್ಯವಾಗಿದ್ದು ಇತ್ತೀಚೆಗೆ  ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ ಒಂಬೈನೂರು ಚದರ ಕಿಲೋ ಮೀಟರ್ ಗೂ ಹೆಚ್ಚು ವಿಸ್ತಾರವಾಗಿರುವ ಮಲೆಮಹದೆಶ್ವರ ವನ್ಯಧಾಮ ನಾಗರಹೊಳೆಗಿಂತ  ಶೇಕಡಾ 30 ರಷ್ಟು ಬಂಡೀಪುರಕ್ಕಿಂತ  ಶೇಕಡಾ 10 ರಷ್ಟು ದೊಡ್ಡದಾಗಿದೆ, ಮಹದೇಶ್ವರ ವನ್ಯಧಾಮದಲ್ಲಿ  ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಹೆಚ್ಚಳವಾಗತೊಡಗಿದೆ



ಸರ್ಕಾರ ಇದುವರೆಗೆ ಕ್ರಮ ಕೈಗೊಂಡಿಲ್ಲ

ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿಸಂರಕ್ಷಿತ ಪ್ರದೇಶ   ಎಂದು ಘೋಷಿಸುವ ಕಡತ ಕಳೆದ ಮಾರ್ಚ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯ ಮುಂದೆ ಬಂದಿತ್ತು. ಅನುಮೋದನೆ ನೀಡಬೇಕು ಎನ್ನುವಷ್ಟರಲ್ಲಿ  ಯಾರ ಒತ್ತಡವೋ ಏನೋ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಬೇಕೋ ಬೇಡವೋ ಎಂಬ ಅಂತಿಮ ನಿರ್ಧಾರ ಕೈಗೊಳ್ಳುವುದನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿತ್ತು.  ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಇದುವರೆಗು ಯಾವುದೇ ಕ್ರಮ ವಹಿಸದೇ ಇರುವುದು ಸಹಜವಾಗಿಯೇ ನಿರಾಶೆ ಮೂಡಿಸಿದೆ

ಇದರೊಂದಿಗೆ ರಾಜ್ಯದಲ್ಲಿ 6ನೇ ಹುಲಿಸಂರಕ್ಷಿತ ಪ್ರದೇಶ  ಘೋಷಣೆ ನೆನಗುದಿಗೆ ಬಿದ್ದಿದ್ದು ಪರಿಸರ ಸಂರಕ್ಷಣೆಯ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ  ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ  ಈ ಸಂದರ್ಭದಲ್ಲಾದರೂ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ  ಎಂದು ಘೋಷಿಸಲಿ,  ಆ ಮೂಲಕ ಜಾಗತಿಕ ಹುಲಿ ದಿನಾಚರಣೆಗೆ ತಮ್ಮ ಕೊಡುಗೆ ನೀಡಿ ಹುಲಿ ದಿನಾಚರಣೆಯನ್ನು ಹೆಚ್ಚು ಅರ್ಥಪೂರ್ಣವಾಗಿಸಲಿ ಎಂಬುದು ಪರಿಸರವಾದಿಗಳು ಹಾಗು ವನ್ಯಜೀವಿಪ್ರಿಯರ  ಆಶಯವಾಗಿದೆ.

ಇಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ

ಇದು ಎರಡು ದಶಕಗಳ ಹಿಂದೆ ಕಾಡುಗಳ್ಳ ವೀರಪ್ಪನ್ ತಾಣವಾಗಿತ್ತು.. ವೀರಪ್ಪನ್ ಹತನಾದ ನಂತರ ಕಳ್ಳಭೇಟೆ ಕಡಿಮೆಯಾಗಿದೆ. ಜೊತೆಗೆ ಅರಣ್ಯ ಇಲಾಖೆಯ ಕಟ್ಟು ನಿಟ್ಟಿನ ಕ್ರಮದಿಂದಾಗಿ ಹುಲಿ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಲೆ ಮಹದೇಶ್ವರ ವನ್ಯಧಾಮದ  ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ ಮಾಡಲಾಗಿದೆ.

600 ಕಿಲೋಮೀಟರ್ ಗೇಮ್ ರೋಡ್ ನಿರ್ಮಾಣ ಮಾಡಲಾಗಿದೆ. ಬೇಟೆಗಾರರು ಮತ್ತು ದನಗಾಹಿಗಳು ಅರಣ್ಯ ಪ್ರವೇಶ ಮಾಡದಂತೆ ಸೋಲಾರ್ ಫೆನ್ಸ್ ಮತ್ತು ಕಂದಕಗಳ ನಿರ್ಮಾಣ ಮಾಡಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮಹದೇಶ್ವರ ಬೆಟ್ಟದಲ್ಲಿ  ಎವರ್ ಗ್ರೀನ್ ಮತ್ತು ಶೋಲಾ ಫಾರೆಸ್ಟ್ ಇರುವುದು  ಹುಲಿ ಸಂರಕ್ಷಣೆಗೆ ಹೇಳಿ ಮಾಡಿಸಿದಂತೆ ಇದ್ದು ಅಂತರಾಷ್ಟ್ರೀಯ ದಿನಾಚಣೆಯ  ಈ ಸಂದರ್ಭದಲ್ಲಿ ಹುಲಿಸಂರಕ್ಷಿತ ಪ್ರದೇಶ  ಎಂಬ ಮಾನ್ಯತೆ ದೊರೆತಲ್ಲಿ  ಹೆಚ್ಚು ಅರ್ಥಪೂರ್ಣವಾಗಲಿದೆ..
Published by:Pavana HS
First published: