ರಾಮನಗರ: ಜೆಡಿಎಸ್ (JDS) ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಇಂದು ರಾಮನಗರಕ್ಕೆ (Ramanagara) ಭೇಟಿ ನೀಡಿದ್ದರು. ಇದೇ ವೇಳೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿರು. ನಂತರ ಚುನಾವಣೆಗೆ (Assembly Election) ಸ್ಪರ್ಧಿಸುವ ಬಗ್ಗೆ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. ನಂತರ ದೊಡ್ಡಗೌಡ್ರು ಕುಟುಂಬ ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಹಾಗಾಗಿ ಜನರಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿಸುತ್ತಿದ್ದೇವೆ. ಆದರೆ ಸಿಎಂ ಸ್ಥಾನಕ್ಕಾಗಿ ಪೂಜೆ ಮಾಡಿಸುತ್ತಿಲ್ಲ ಎಂದು ತಿಳಿಸಿದರು.
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿ
ಡಿಸೆಂಬರ್ 16 ರಂದು ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ ಹಿನ್ನೆಲೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕಾಗಿ ರಾಮನಗರದಲ್ಲಿ ಅದ್ದೂರಿ ವೇದಿಕೆ ನಿರ್ಮಾಣವಾಗುತ್ತಿದೆ. ಹೀಗಾಗಿ ವೇದಿಕೆ ವೀಕ್ಷಣೆ ಮಾಡಿದ ಬಳಿಕ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.
ರಾಮನಗರದ ಪ್ರಮುಖ ಬೀದಿಗಳಲ್ಲಿ ಮೂಲದೇವರ ವಿಗ್ರಹ ಮೆರವಣಿಗೆ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೂಲದೇವರ ವಿಗ್ರಹವನ್ನು 11 ಕಲಾತಂಡಗಳೊಂದಿಗೆ ರಾಮನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಇದು ರಾಮನಗರದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿದೆ. ಪಕ್ಷಾತೀತವಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಹಾಗಾಗಿ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸುತ್ತೇವೆ ಎಂದಿದ್ದಾರೆ.
ದೇವರನ್ನು ತಂದು ನಗರದ ಮುಖ್ಯರಸ್ತೆಯಲ್ಲಿ ಸಂಚಾರ ಮಾಡಿಸಲಾಗುತ್ತದೆ. ಹೀಗಾಗಿ ಅತಿಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ದೇವೇಗೌಡರು, ಚೆನ್ನಮ್ಮ, ನನ್ನ ತಂದೆ ಕುಮಾರಸ್ವಾಮಿ ಅವರು, ನಾನು, ನಮ್ಮ ತಾಯಿ ಅನಿತಾಕುಮಾರಸ್ವಾಮಿ ಹೊರತಾಗಿ ಬೇರಾರು ವೇದಿಕೆಯಲ್ಲಿ ಇರುವುದಿಲ್ಲ. ಕಾರಣ ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಪಂಚರತ್ನ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ
ಇದೇ ವೇಳೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಂಚರತ್ನ ಶಿಕ್ಷಣ ಆರೋಗ್ಯ ರೈತಪರ ಕಾರ್ಯಕ್ರಮವಾಗಿದೆ. ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿ, ವಸತಿ ಯೋಜನೆ ಉದ್ದೇಶದಿಂದ ನಡೆಸಲಾಗುತ್ತಿದೆ. ಅಲ್ಲದೇ ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದ್ದಾರೆ.
ತಡರಾತ್ರಿ ಮೂರುಗಂಟೆ ಆದರೂ ಜನತೆ ನಿರೀಕ್ಷೆ ಮೀರಿ ಸ್ವಾಗತಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಪಂಚರತ್ನ ಯೋಜನೆ ಸಂಪೂರ್ಣಕ್ಕಾಗಿ ಜನತೆ ಸ್ಪಂದಿಸುತ್ತಿದ್ದಾರೆ. ಆದರೆ ಮಳೆ ಹಿನ್ನೆಲೆ ಕೆಲವೆಡೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Nikhil Kumaraswamy: ವಿಧಾನಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ; ಹೆಚ್ಡಿಕೆ ಸುಳಿವು
15 ರಂದು ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಗಡಿ, ನಂತರ ರಾಮನಗರ ಕನಕಪುರ, ಚನ್ನಪಟ್ಟಣ ನಂತರ ಮಂಡ್ಯ ಪ್ರವೇಶೀಸಲಿದೆ. ತಿರುಪತಿ ತಿಮ್ಮಪ್ಪ ನಮಗೆ ಶಕ್ತಿ ನೀಡಿದ್ದು ಐತಿಹಾಸಿಕ ಕಾರ್ಯಕ್ರಮದ ಮೂಲಕ ಮುನ್ನಡೆಯುತ್ತೇವೆ. ಕುಮಾರಣ್ಣ ಹೋರಾಟಕ್ಕೆ ಕೈ ಜೋಡೊಸುವ ಅನಿವಾರ್ಯತೆ ಇದೆ. ಜನತೆ ನಿರೀಕ್ಷೆಗೆ ತಕ್ಕಂತೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ
ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ನಾನು ಸ್ವಾರ್ಥಿ ಆಗುವುದಿಲ್ಲ. ಮುಂದೆ ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಪಕ್ಷ ಸಂಘಟನೆಗೆ ಮೊದಲು ಆದ್ಯತೆ ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಸ್ಥಾನಕ್ಕಾಗಿ ನಾವು ಪೂಜೆ ಮಾಡುತ್ತಿಲ್ಲ
ಒತ್ತಡದಲ್ಲಿ ಸರ್ಕಾರ ನಡೆಸಿದ ಕುಮಾರಸ್ವಾಮಿ ಅವರ ಆಡಳಿತ ವೈಖರಿ ಕಣ್ಣ ಮುಂದಿದೆ. ಅದಕ್ಕಾಗಿ ಸ್ವತಂತ್ರ ಸರ್ಕಾರ ರಚನೆಯಾದರೆ ಎಲ್ಲವೂ ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ದೇವರನ್ನು ನಮ್ಮ ಕುಟುಂಬ ತುಂಬಾ ನಂಬುತ್ತದೆ. ಎಲ್ಲಾ ಧರ್ಮದ ಮೇಲೆ ಪ್ರೀತಿ ಗೌರವ ಇದೆ ವಿಶೇಷವಾಗಿ ರಾಜ್ಯದ ಅಭಿವೃದ್ಧಿಗೆ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಪೂಜೆ ನಡೆಸುತ್ತಿದ್ದೇವೆ. ಆದರೆ ಸಿಎಂ ಸ್ಥಾನಕ್ಕಾಗಿ ನಾವು ಪೂಜೆ ಮಾಡುತ್ತಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ