ವ್ಯಕ್ತಿ ಮಣ್ಣು ಮಾಡಲು ಹೊರಟಾಗ ಎದ್ದು ಕುಳಿತ ; ಸಾವಿನ ಷರಾ ಬರೆದಿದ್ದು ಸರ್ಕಾರಿ ವೈದ್ಯ

news18
Updated:July 12, 2018, 8:24 PM IST
ವ್ಯಕ್ತಿ ಮಣ್ಣು ಮಾಡಲು ಹೊರಟಾಗ ಎದ್ದು ಕುಳಿತ ; ಸಾವಿನ ಷರಾ ಬರೆದಿದ್ದು ಸರ್ಕಾರಿ ವೈದ್ಯ
news18
Updated: July 12, 2018, 8:24 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಜುಲೈ 12) :  ಇದೊಂದು ವಿಚಿತ್ರ ಘಟನೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಹೇಳಿದ ಮಾತನ್ನೇ ನಂಬಿ ಸತ್ತ ಶವದ ಅಂತ್ಯಕ್ರಿಯೆ ಮಾಡಲು ಹೋದವರು ಬೇಸ್ತುಬಿದ್ದ ಘಟನೆ. ಸತ್ತ ವ್ಯಕ್ತಿ ಬದುಕಿದ್ದಾನೆ ಎಂಬ ಸಂಗತಿ ತಿಳಿದು ಮೊದಲು ಗಾಬರಿಯಾದರೂ, ನಂತರ ಜೀವಂತವಿರುವ ಖುಷಿಯಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಇಂಥದ್ದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾದ್ದು ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ. ಹಾಗೆ ಸತ್ತು ಬದುಕಿದ ವ್ಯಕ್ತಿ ಈಶ್ವರ್ ವಾವಡೆ.

ನಡೆದಿರುವುದಿಷ್ಟೇ.. ಮುಂಬೈಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ್, ಕೆಲವು ದಿನಗಳ ಹಿಂದೆ ಸ್ಟೇಷನ್ ಗಾಣಗಾಪುರಕ್ಕೆ ಬಂದಿದ್ದಾನೆ. ಈತ ಇಲ್ಲಿದ್ದಾಗಲೇ ಕರುಳುಬೇನೆ ಖಾಯಿಲೆಯಿಂದ ತುತ್ತಾಗಿದ್ದಾನೆ. ತಕ್ಷಣ ಈತನನ್ನು ಸೋಲಾಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿನ ವೈದ್ಯರು ಇಲ್ಲ ಆಗಲ್ಲ  ಅಂತಾ ಹೇಳಿ 1 ಲಕ್ಷ ರೂ ಬಿಲ್ ಮಾಡಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಂತಾ ಹೇಳಿದ್ದಾರೆ.

ಸೋಲಾಪುರ ಸರ್ಕಾರಿ ಆಸ್ಪತ್ರೆಗೆ  ಸೇರಿಸಲಾಯಿತು. ಆದರೆ ಈ ವೇಳೆ ರೋಗಿಯನ್ನು ಪರೀಕ್ಷಿಸಿದ್ದ ಸರ್ಕಾರಿ ಆಸ್ಪತ್ರೆ ವೈದ್ಯರು, ಪರಿಶೀಲಿಸಿ ರೋಗಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ವೈದ್ಯರೇ ಸತ್ತಿದ್ದಾನೆ ಎಂದು ಹೇಳಿದ ಮೇಲೆ ಸಂಬಂಧಿಕರು ಶವವನ್ನು ತಂದು ಸ್ಟೇಷನ್ ಗಾಣಗಾಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದಾರೆ.

ಈಶ್ವರ್ ಸಂಬಂಧಿಕರು ಎಲ್ಲರೂ ಬಂದು ಶವದ ಮೇಲೆ ಬಿದ್ದು ಬಿದ್ದು ಅತ್ತಾಗ ಆತನ ದೇಹದಲ್ಲಿ ಉಸಿರಿರುವುದು ಗೊತ್ತಾಗಿದೆ. ಗಲಿಬಿಲಿಗೊಂಡು ನಾಡಿ ಪರೀಕ್ಷೆ ಮಾಡಿದಾಗ ಈಶ್ವರ್ ಜೀವಂತವಿರುವುದು ಖಾತ್ರಿಯಾಗಿದೆ. ಕೂಡಲೇ ಈಶ್ವರನನ್ನು ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಲಾಪುರ ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದರಿಂದ ಸತ್ತಿದ್ದಾನೆಂದು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದೆವು. ಈಗ ಬದುಕಿದ್ದಾನೆ ಎಂಬುದು ಖಾತ್ರಿಯಾಗಿ ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಈಶ್ವರ್ ಪತ್ನಿ ಮಂಗಲಾ ಸ್ಪಷ್ಟಪಡಿಸಿದ್ದಾರೆ.

ಸತ್ತ ವ್ಯಕ್ತಿ ಬದುಕಿದ್ದಾನೆ ಎಂಬ ಸುದ್ದಿ ಕೇಳಿ ನಾಗರೀಕರು ಅಚ್ಚರಿ ವ್ಯಕ್ತಪಡಿಸಿದ್ದು, ಸುದ್ದಿ ತಿಳಿದು ಕೆಲವರು ಜಿಲ್ಲಾ ಆಸ್ಪತ್ರೆಗೆ ಬಂದು ಈಶ್ವರ್ ನನ್ನು ನೋಡಿ ವಾಪಸ್ಸಾಗುತ್ತಿದ್ದಾರೆ. ಬದುಕಿದ್ದ ವ್ಯಕ್ತಿಯನ್ನೇ ಸತ್ತಿದ್ದಾನೆ ಎಂದು ತಿಳಿಸಿದ ಸೋಲಾಪುರ ಸರ್ಕಾರಿ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ. ಬದುಕಿ ಬಂದಿರುವ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಸ್ಥಳೀಯರು ಮನವಿ ಮಾಡಿದ್ದಾರೆ.
Loading...

ಸತ್ತ ಸುದ್ದಿ ಏನೇ ಇರಲಿ ಸತ್ತ ವ್ಯಕ್ತಿ ಬದುಕಿದ್ದಾನೆ ಎಂಬ ಸುದ್ದಿ ಸಂಬಂಧಿಕರದಲ್ಲಿ ಸಂತಸ ಮೂಡಿಸಿದೆ. ಸತ್ತಿದ್ದಾನೆಂದು ಭಾವಿಸಿ ಮಣ್ಣು ಮಾಡಲು ಹೋದಾಗ ವ್ಯಕ್ತಿ ಬದುಕಿರುವ ಸುದ್ದಿ ಕೇಳಿ ಸಂಬಂಧಿಕರೂ ಖುಷಿಗೊಂಡಿದ್ದಾರೆ. ಈಶ್ವರ್ ಅಂತ್ಯಕ್ರಿಯೆಗೆಂದು ಬಂದವರು ಆತ ಮತ್ತಷ್ಟು ದಿನ ಬಾಳಿ ಬೆಳಗಲಿ ಎಂದು ಹಾರೈಸಿ ಆಸ್ಪತ್ರೆಗೆ ಸೇರಿಸಿದ ನಂತರ ತಮ್ಮ ಊರುಗಳಿಗೆ ವಾಪಸ್ಸಾಗಿದ್ದಾರೆ.

ವೈದ್ಯರ ಅಚಾತುರ್ಯದಿಂದಾಗಿ ಬದುಕಿದ್ದಾತ ಸತ್ತ ಶವವಾಗಿ ಮಾರ್ಪಟ್ಟಿದ್ದ. ಅಂತ್ಯಕ್ರಿಯೆ ವೇಳೆ ಎಚ್ಚೆತ್ತ ಪರಿಣಾಮ ಪ್ರಕರಣ ಸುಖಾಂತ್ಯ ಕಂಡಿದೆ. ಈಶ್ವರ್ ಗೆ ಮರುಜನ್ಮ ಸಿಕ್ಕಂತಾಗಿದ್ದು, ಕಲಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...