ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರನ್ನು ಮರುವಿನ್ಯಾಸಗೊಳಿಸಲು ಡಿಸಿಎಂ ಸೂಚನೆ

ಬಾನಂದೂರಿನ ಪಾರಂಪರಿಕ ಕೇಂದ್ರದ ಪರಿಕಲ್ಪನೆ, ವಿನ್ಯಾಸ ಮಾಡುತ್ತಿರುವ ಆರ್‌ಆರ್‌ ಇನ್ಫ್ರಾಸ್ಟ್ರಕ್ಚರ್‌ ಸಂಸ್ಥೆಯ ವರದಿ ಪರಿಶೀಲಿಸಿದ ಡಿಸಿಎಂ ಡಾ. ಅಶ್ವತ್ಥನಾರಾಯಣ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಹಾಗೂ ಸಾರ್ವಜನಿಕರ ಜೊತೆ ಈ ಸಂಬಂಧ ಸಮಾಲೋಚನೆ ನಡೆಸಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದರು.

G Hareeshkumar | news18-kannada
Updated:March 9, 2020, 10:25 PM IST
ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರನ್ನು ಮರುವಿನ್ಯಾಸಗೊಳಿಸಲು ಡಿಸಿಎಂ ಸೂಚನೆ
ವಿಧಾನಸೌಧದಲ್ಲಿ ನಡೆದ ಸಭೆ
  • Share this:
ರಾಮನಗರ(ಮಾ.09) : ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು ಬಿಡದಿ ಹೋಬಳಿಯ ಬಾನಂದೂರನ್ನು ಪ್ರೇಕ್ಷಣೀಯ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ಮರುವಿನ್ಯಾಸಗೊಳಿಸುವಂತೆ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ.

ಬಾನಂದೂರನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿರುವ ಸಂಸ್ಥೆಯ ಮುಖ್ಯಸ್ಥರ ಜೊತೆಗೆ ಇಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸುದೀರ್ಘ ಚರ್ಚೆ ನಡೆಸಿದರು.

ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಅಭಿವೃದ್ಧಿ ಪಡಿಸುವ ಕುರಿತು ಮತ್ತು ವೀರಾಪುರದಲ್ಲಿ ನಿರ್ಮಾಣಗೊಳ್ಳಲಿರುವ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ, ಮ್ಯೂಸಿಯಂ ನಿರ್ಮಾಣ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.

ಬಾನಂದೂರಿನ ಪಾರಂಪರಿಕ ಕೇಂದ್ರದ ಪರಿಕಲ್ಪನೆ, ವಿನ್ಯಾಸ ಮಾಡುತ್ತಿರುವ ಆರ್‌ಆರ್‌ ಇನ್ಫ್ರಾಸ್ಟ್ರಕ್ಚರ್‌ ಸಂಸ್ಥೆಯ ವರದಿ ಪರಿಶೀಲಿಸಿದ ಡಿಸಿಎಂ ಡಾ. ಅಶ್ವತ್ಥನಾರಾಯಣ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಹಾಗೂ ಸಾರ್ವಜನಿಕರ ಜೊತೆ ಈ ಸಂಬಂಧ ಸಮಾಲೋಚನೆ ನಡೆಸಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದರು.

ರಾಜ್ಯದ ಎಲ್ಲಾ ಭಾಗಗಳ ಜನರು ಭೇಟಿ ನೀಡುವ ತಾಣವಾಗಿ ಬಾನಂದೂರು ಅಭಿವೃದ್ಧಿ ಆಗಬೇಕು. ಗ್ರಂಥಾಲಯ, ಸಭಾಂಗಣ, ಮ್ಯೂಸಿಯಂ ಸೇರಿದಂತೆ ಹಲವು ಆಕರ್ಷಣೆಗಳು ಅಲ್ಲಿರಬೇಕು. ಬಾಲಗಂಗಾಧರನಾಥ ಸ್ವಾಮೀಜಿಯವರ ಪೂರ್ವಜರ ಮನೆಯ ಮೂಲ ಸ್ವರೂಪ ಮರುಸೃಷ್ಟಿ ಮುಂತಾದ ಯೋಜನೆಗಳ ಮೂಲಕ ಬಾನಂದೂರನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಆರ್‌ಆರ್‌ ಇನ್ಫ್ರಾಸ್ಟ್ರಕ್ಚರ್‌ನ ಮುಖ್ಯಸ್ಥರಿಗೆ ಸಚಿವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ರಾಮನಗರದಲ್ಲಿ ಡಿಕೆಶಿ, ಹೆಚ್​​ಡಿಕೆ ಮುಂದೆ ಮಂಕಾದರಾ ಉಸ್ತುವಾರಿ ಸಚಿವರು? ಮಾಗಡಿಗೆ ಮಾತ್ರ ಸೀಮಿತವಾದ ಅಶ್ವತ್ಥನಾರಾಯಣ

ಮಠದ ಜಾಗದಲ್ಲಿ ನಿರ್ಮಾಣವಾಗಲಿರುವ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರಕ್ಕೆ ನಿಗದಿಪಡಿಸಿರುವ 25 ಕೋಟಿ ರೂಪಾಯಿಯನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಊರಿನಲ್ಲಿ ಇತರ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮಗಳಿಗೆ ಇಲಾಖೆಗಳ ಹಣ ಬಳಸಿಕೊಳ್ಳಬಹುದು ಎಂದು ಡಾ. ಅಶ್ವತ್ಥನಾರಾಯಣ ಸಭೆಯಲ್ಲಿ ಸೂಚಿಸಿದರು.ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮಾಗಡಿ ಶಾಸಕ ಎ.ಮಂಜು,ಆದಿಚುಂಚನಗಿರಿಯ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ವಿಧಾನಪರಿಷತ್‌ ಸದಸ್ಯ ಅ. ದೇವೇಗೌಡ ಉಪಸ್ಥಿತರಿದ್ದರು.

( ವರದಿ : ಎ.ಟಿ.ವೆಂಕಟೇಶ್)
First published: March 9, 2020, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading