ವಿಜಯಪುರ (ಫೆ. 27): ತೈಲ ಬೆಲೆ ಹೆಚ್ಚುತ್ತಿದ್ದರೂ ಬಸ್ ಪ್ರಯಾಣ ದರ ಹೆಚ್ಚಿಸಲ್ಲ. ವಿದ್ಯಾರ್ಥಿಗಳ ಬಸ್ ಪಾಸ್ ಮಾರ್ಚ್ ವರೆಗೆ ಯಥಾರೀತಿ ಮುಂದುವರೆಯಲಿದೆ ಎಂದು ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಪಪಡಿಸಿದ್ದಾರೆ. ನಗರದಲ್ಲಿ ಆರ್ ಟಿ ಓ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಕಳೆದ ವರ್ಷ ಈಗಾಗಲೇ ಶೇ. 12 ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಮೂರು ನಿಗಮಗಳಾದ ಕೆ ಎಸ್ ಆರ್ ಟಿ ಸಿ, ಎನ್ ಡಬ್ಲ್ಯೂ ಕೆ ಆರ್ ಟಿ ಸಿ ಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಈಗ ಸಧ್ಯಕ್ಕೆ ದರ ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳ ಬಸ್ ಪಾಸ್ ಕುರಿತು ಮಾತನಾಡಿದ ಅವರು, ತಂತ್ರಾಂಶದ ಮುಖಾಂತರ ಶಾಲಾ ಬಸ್ ಪಾಸ್ ವಿತರಣೆ ಆರಂಭವಾಗಿದೆ. ಅದು ವಿಳಂವಬವಾಗಿದೆ. ಇನ್ನೂ ಒಂದು ತಿಂಗಳು ಅಂದರೆ ಮಾರ್ಚ್ 31ರ ವರೆಗೆ ಹಿಂದಿನ ಪದ್ಧತಿ ಮುಂದುವರೆಸಲು ಸೂಚನೆ ಕೊಟ್ಟಿದ್ದೇವೆ. ಯಾವುದೇ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಜಾತಿ ರಾಜಕಾರಣ ಮಾಡಿಲ್ಲ
ಇದೇ ವೇಳೆ ಸಿಂದಗಿ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಸಿಂದಗಿ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆಯನ್ನು ಮಾಡಿಲ್ಲ. ಅಂಥ ಪ್ರಸ್ತಾವನೆಯೂ ನನ್ನ ಮುಂದಿಲ್ಲ. ಅಲ್ಲಿರುವ ಕಾರ್ಯಕರ್ತರನ್ನು ಒಗ್ಗೂಡಿಸಿ ಅಲ್ಲಿಯೇ ಸ್ಥಳೀಯರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.
ಮಾಜಿ ಸಚಿವ, ಸಿಂದಗಿ ಶಾಸಕ ದಿ. ಎಂ. ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಯಾವುದೇ ಚರ್ಚೆ ನಡೆದಿಲ್ಲ. ಇನ್ನೂ ಚುನಾವಣೆ ಘೋಷಣೆ ಆಗಿಲ್ಲ. ಇವತ್ತು, ನಾಳೆ ಹೊಸ ನೋಟಿಫಿಕೇಶನ್ ಆಗಬೇಕು. ಕರ್ನಾಟಕದಲ್ಲಿರುವ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ ಚುನಾವಣೆಗೆ ಸೋಮವಾರ ನೋಟಿಫಿಕೇಶನ್ ಆಗುವ ನಿರೀಕ್ಷೆಯಿದೆ. ಚುನಾವಣೆ ಘೋಷಣೆಯಾದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹೈಕಮಾಂಡ್ ತಮಗೆ ಸೂಚಿಸಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂಥ ಯಾವುದೇ ಪ್ರಸ್ತಾವನೆ ಇಲ್ಲ. ಹೈಕಮಾಂಡ್ ನನಗೆ ಯಾಕೆ ಈ ರೀತಿ ಸೂಚನೆ ನೀಡುತ್ತೆ ಎಂಬ ಪ್ರಶ್ನೆಯೂ ತಮ್ಮ ಮುಂದಿದೆ ಎಂದು ತಿಳಿಸಿದರು.
ಇದೇ ವೇಳೆ, ಗಾಣಿಗ ಸಮುದಾಯದ ಜನರು ತಮ್ಮನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಜೀವನದಲ್ಲಿ ಜಾತಿ ಆಧಾರದ ಮೇಲೆ ರಾಜಕಾರಣವನ್ನು ತಾವು ಮಾಡಿಲ್ಲ. ನಾನು ಯಾವತ್ತು ಬಿಜೆಪಿ ಪಕ್ಷದಲ್ಲಿ ಬಂದಿದ್ದೇನೆ. ಅಂದಿನಿಂದ ಹಿಂದುತ್ವದ ಆಧಾರದ ಮೇಲೆ ರಾಜಕಾರಣ ಮಾಡುತ್ತ ಬಂದಿದ್ದೇನೆ. ಯಾವುದೇ ಒಳಪಂಗಡವಾಗಲಿ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಪಕ್ಷದ ಸಿದ್ಧಾಂತ, ತತ್ವಗಳನ್ನು ಆಧಾರವಾಗಿಟ್ಟುಕೊಂಡು ಪಕ್ಷ ನನಗೆ ಬಯಸಿದರೆ ನೀನು ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಲ್ಲು ಎಂದರೆ ಹೋಗಿ ನಿಲ್ಲುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನು ಓದಿ: ವಿನಯ್ ಗುರೂಜಿ ಭೇಟಿ ಬಳಿಕ ವೆಂಟಿಲೇಟರ್ನಲ್ಲಿದ್ದ ಮಗ ಚೇತರಿಕೆ; ಡಿಸಿಎಂ ಗೋವಿಂದ ಕಾರಜೋಳ
ಮೀಸಲಾತಿ ಕುರಿತು ಕಲ್ಲಿನಾಥ ಸ್ವಾಮೀಜಿ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಲ್ಲಿನಾಥ ಸ್ವಾಮೀಜಿ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಈಗಾಗಲೇ ಆ ಸಮುದಾಯ 2ಎ ನಲ್ಲಿದೆ. ಇನ್ನಾವುದಕ್ಕೆ ಮತ್ತೆ ಮೀಸಲಾತಿ ಕೇಳ್ತಾರೆ ಎಂದು ಪ್ರಶ್ನಿಸಿದರು. ನಾವು ಕಲ್ಲಿನಾಥ ಸ್ವಾಮೀಜಿ ಜೊತೆ ಈ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ನಮ್ಮ ಜೊತೆ ಅವರು ಸಮಾಲೋಚನೆಯನ್ನೂ ಮಾಡಿಲ್ಲ. ಅವರ ಜೊತೆ ಸಮಾಲೋಚನೆ ಮಾಡಿದರೆ ಪರಿಶೀಲನೆ ನಡೆಸಿ ಹೇಳಿಕೆ ನೀಡುತ್ತೇನೆ ಎಂದರು.
ಲಿಂಗಾಯಿತ ಪಂಚಮಸಾಲಿಯವರು ಮೀಸಲಾತಿ ಕೇಳುತ್ತಿರುವುದು ತಪ್ಪಲ್ಲ. ಅವರನ್ನು 2ಎಗೆ ಸೇರಿಸುವುದರಿಂದ ಸಮಸ್ಯೆಯಾಗಲ್ಲ. ಆಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಗೆ ಮಾಡಬೇಕಾಗುತ್ತದೆ. ಹೆಚ್ಚಿಗೆ ಮಾಡಿದ ನಂತರ ಯಾರಿಗೂ ತೊಂದರೆಯಾಗಲ್ಲ. ಅನಾವಶ್ಯಕವಾಗಿ ಗೊಂದಲಗಳನ್ನು ಸೃಷ್ಠಿ ಮಾಡಬಾರದು. ಇಂಥ ಹೇಳಿಕೆಗಳನ್ನು ನೀಡಬಾರದು ಎಂದು ಕಲ್ಲಿನಾಥ ಸ್ವಾಮೀಜಿಗಳಿಗೆ ವಿನಂತಿ ಮಾಡುತ್ತೇನೆ. ಪಂಚಮಸಾಲಿ, ಕುರುಬ, ವಾಲ್ಮಿಕಿ ಸಮುದಾಯ ಮೀಸಲಾತಿ ಬೇಡಿಕೆ ಕುರಿತು ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿಗಳು ಕೇಳಿಕೊಂಡಿದ್ದಾರೆ. ಅವರ ವರದಿ ಬಂದ ಮೇಲೆ ಸೂಕ್ತ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತೀರ್ಮಾಮ ಮಾಡಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜನ್ಮದಿನಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಶುಭಾಷಯ ಕೋರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ