‘ ಬಿ.ಎಲ್​​ ಸಂತೋಷ್ ಭೇಟಿ ನಿಜ ಎಂದ ಡಿಸಿಎಂ: ದೆಹಲಿ ಭೇಟಿ ಗುಟ್ಟು ಬಿಟ್ಟುಕೊಡದ ಲಕ್ಷ್ಮಣ ಸವದಿ

ಬಳಿಕ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿದ ಡಿಸಿಎಂ ಲಕ್ಷ್ಮಣ ಸವದಿ ಬಿಎಂಟಿಸಿ ವ್ಯಾಪ್ತಿಗೆ 300 ಎಲೆಕ್ಟ್ರಿಕ್ ಬಸ್ಸುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

ಡಿಸಿಎಂ ಲಕ್ಷ್ಣಣ ಸವದಿ

ಡಿಸಿಎಂ ಲಕ್ಷ್ಣಣ ಸವದಿ

  • Share this:
ನವದೆಹಲಿ(ಜು.27): ರಾಜ್ಯ ಸರ್ಕಾರದ ನಾಯಕತ್ವ ಬದಲಾಗುತ್ತದೆ.‌ ವಯಸ್ಸು ಮತ್ತಿತರ ವೈಯಕ್ತಿಕ ಕಾರಣಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಮತ್ತೊಬ್ಬರಿಗೆ ನಾಯಕತ್ವ ನೀಡುತ್ತಾರೆ ಎಂಬ ಚರ್ಚೆಗಳು ನಿಧಾನಕ್ಕೆ ಹರಳುಗಟ್ಟುತ್ತಿರುವ ಸಂದರ್ಭದಲ್ಲೇ ಅಚ್ಚರಿಯ ರೀತಿಯಲ್ಲಿ ಉಪ ಮುಖ್ಯಮಂತ್ರಿ ಪಟ್ಟವನ್ನು ಪಡೆದುಕೊಂಡಿದ್ದ ಲಕ್ಷ್ಮಣ ಸವದಿ ದೆಹಲಿಗೆ ಧಾವಿಸಿರುವುದು ಕುತೂಹಲ ಹುಟ್ಟುಹಾಕಿದೆ. ಆದರೆ ಲಕ್ಷ್ಮಣ ಸವದಿ‌ 'ಅಂಥ ಯಾವುದೇ ಬೆಳವಣಿಗೆ ಇಲ್ಲ' ಎಂದು ತಳ್ಳಿಹಾಕಿದ್ದಾರೆ.

ಲಕ್ಷ್ಮಣ ಸವದಿ ಮೊನ್ನೆ ಮೊನ್ನೆ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿಯಾಗಿ ಸುಧೀರ್ಘ ಸಮಾಲೋಚನೆ ನಡೆಸಿದ್ದರು‌‌. ಈಗ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ಸಾಧನೆ ಹೇಳಿಕೊಳ್ಳುವ ಸಂದರ್ಭದಲ್ಲಿ ಲಕ್ಷ್ಮಣ ಸವದಿ ದೆಹಲಿ ದಂಡಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ತಮ್ಮ ಈ ಭೇಟಿ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ಕಾಕತಾಳೀಯ' ಎಂದು ವ್ಯಾಖ್ಯಾನಿಸಿದರು.

ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು‌. ಹಾಗಾಗಿ ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ. ಅವರು ಮತ್ತು ನಾನು ಇಬ್ಬರೂ ಸಹಕಾರಿ ಕ್ಷೇತ್ರದ ಹಿನ್ನಲೆಯವರಾದ ಕಾರಣ ಅದರ ಬಗ್ಗೆ ಚರ್ಚೆ ಮಾಡಿದೆವಷ್ಟೇ ಎಂದರು.

ಇದಲ್ಲದೆ ರಾಜ್ಯ ಬಿಜೆಪಿಯ ಮತ್ತೊಂದು ಶಕ್ತಿ ಕೇಂದ್ರದಂತಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ನಾನು ಪ್ರತಿ ಬಾರಿ ದೆಹಲಿಗೆ ಬಂದಾಗಲೂ  ಅವರನ್ನು ಭೇಟಿ ಆಗುತ್ತೇನೆ. ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಅದರಲ್ಲಿ ವಿಶೇಷತೆ ಏನು ಇಲ್ಲ.‌ ಅವರು ಮಾತ್ರವಲ್ಲ ರಾಜ್ಯದ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದೇನೆ ಎಂದರು.

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಂಪುಟದ ಪುನರ್ ರಚನೆ ಅಥವಾ ವಿಸ್ತರಣೆ ‌ಬಗ್ಗೆ ಚರ್ಚಿಸಲು ಉತ್ಸಾಹ ತೋರದ ಲಕ್ಷ್ಮಣ ಸವದಿ, ಯಾವುದೇ ರಾಜಕೀಯ ಚಟುವಟಿಕೆಗಳ ಕಾರಣದಿಂದ ದೆಹಲಿಗೆ ಬಂದಿಲ್ಲ. ಸರ್ಕಾರದ ಕೆಲಸಕ್ಕಾಗಿ ಬಂದಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೇನೆ. ಆದರೆ ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕೆಯಲ್ಲಿ ಬೇರೆ ರೀತಿ ವರದಿಯಾಗುತ್ತಿದೆ. ಸಂಪುಟ ರಚನೆ, ಪುನಾರಚನೆ, ವಿಸ್ತರಣೆಗಳೆಲ್ಲವೂ ಮುಖ್ಯಮಂತ್ರಿಗಳ ಪರಾಮಧಿಕಾರ. ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು? ಯಾರನ್ನು ಕೈಬಿಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಹೇಳಿ ನುಣುಚಿಕೊಂಡರು.

ಇದೇ ವೇಳೆ ಸರ್ಕಾರದ ಒಂದು ವರ್ಷದ ಸಾಧನೆಯನ್ನು ವಿವರಿಸಿದ ಅವರು, ಪ್ರತಿದಿನ ರಾಜ್ಯದಲ್ಲಿ ಒಂದು ಕೋಟಿ ಜನರು ಪ್ರಯಾಣ ಮಾಡುತ್ತಾರೆ. ಆದರೂ ಸಾರಿಗೆ ಇಲಾಖೆ‌ ನಷ್ಟದಲ್ಲಿದೆ.‌ ನಿರ್ವಹಣೆಯ ಎಲ್ಲಾ ಬೆಲೆಗಳು ಹೆಚ್ಚಾಗಿದ್ದರೂ ಟಿಕೆಟ್ ದರ ಹೆಚ್ಚು ಮಾಡಿರಲಿಲ್ಲ. ಸಾರಿಗೆ ಇಲಾಖೆಯಲ್ಲಿ ಸಾಕಷ್ಟು ಅವ್ಯವಾಹರಗಳು ನಡೆದಿರುವುದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಇದನ್ನು ತಡೆಯಲು ಇಸ್ರೋ ಜೊತೆಗೆ  ಸೋರಿಕೆ ತಡೆಯುವ ಪ್ರಯತ್ನ ಮಾಡಲಾಗಿದೆ.‌ ಇಂಧನ ಉಳಿತಾಯ ಮಾಡುವ ಚಾಲಕರಿಗೆ ಹತ್ತು ಗ್ರಾಂ ಚಿನ್ನದ ಮೆಡಲ್ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ಟೈಯರ್​​ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಮುಂದಾಗಿದ್ದೇವೆ. ರಾಜ್ಯದ ಎಲ್ಲ ಸರ್ಕಾರಿ ಖಾಸಗಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ವ್ಯವಸ್ಥೆ ಆಗುತ್ತಿದೆ. ನಿರ್ಭಯ ಯೋಜನೆ 40 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಬಸ್ ಒಳಗೆ ಸಿಸಿಟಿವಿ ಸೇರಿದಂತೆ ಮಹಿಳೆ ಸುರಕ್ಷತೆಗೆ ಹಣ ನೀಡಿದೆ. ನಿರ್ಭಯ ಯೋಜನೆ ಅಡಿ ಬಸ್ ಗಳಿಗೆ ನಾವಿಕ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಚಿಂತಿಸಲಾಗಿದೆ. ಇದಕ್ಕೆ ಹೆಚ್ಚುವರಿ ಸಮಯಬೇಕು ಅದನ್ನು ಕೇಳಿಕೊಳ್ಳಲು ದೆಹಲಿಗೆ ಬಂದಿದ್ದೇನೆ. ಒಂದು ವರ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಸಂಕಷ್ಟದ ನಡುವೆ ಜನಪರ ಕೆಲಸಗಳನ್ನು ಬಿಎಸ್‌ವೈ ನೇತೃತ್ವದ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಾಲ್ವರು ಶಾಸಕರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೇಮಕ ಹಿಂಪಡೆದ ರಾಜ್ಯ ಸರ್ಕಾರ

ಬಳಿಕ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿದ ಡಿಸಿಎಂ ಲಕ್ಷ್ಮಣ ಸವದಿ ಬಿಎಂಟಿಸಿ ವ್ಯಾಪ್ತಿಗೆ 300 ಎಲೆಕ್ಟ್ರಿಕ್ ಬಸ್ಸುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
Published by:Ganesh Nachikethu
First published: