news18-kannada Updated:February 15, 2020, 1:03 PM IST
ಡಿಸಿಎಂ ಲಕ್ಷ್ಣಣ್ ಸವದಿ
ಬೆಂಗಳೂರು (ಫೆ. 15): ಚುನಾವಣೆಯಲ್ಲಿ ಸೋತು ಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರ ಉಪಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಫೆ. 17ರಂದು ನಡೆಯುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಗೆಲ್ಲಬೇಕಾಗಿರುವುದು ಅನಿವಾರ್ಯ. ಆದರೆ, ರಾಜ್ಯದಲ್ಲಿ 1 ವಿಧಾನ ಪರಿಷತ್ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಕೂಡ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯ ಕನಸು ಕಾಣುತ್ತಿದ್ದ ಸವದಿಗೆ ನಿರಾಸೆಯಾಗಿತ್ತು. ಇದೀಗ ಅನಿಲ್ ಕುಮಾರ್ ಚುನಾವಣೆಯಲ್ಲಿ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸವದಿಯ ಗೆಲುವಿನ ಹಾದಿ ಸುಗಮವಾಗಲಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಂಪುಟದ ಮೂವರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದ ಲಕ್ಷ್ಮಣ ಸವದಿ ಆಯ್ಕೆಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಸಚಿವ ಸ್ಥಾನ ನೀಡಿದ್ದಕ್ಕೆ ಪಕ್ಷದೊಳಗೇ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಸವದಿಯನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡುವ ಮೂಲಕ ಡಿಸಿಎಂ ಸ್ಥಾನದಲ್ಲಿ ಮುಂದುವರೆಯುವಂತೆ ಮಾಡಲು ಬಿಜೆಪಿ ನಾಯಕರು ನಿರ್ಧರಿಸಿದ್ದರು. ಆದರೆ, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸವದಿ ಆಯ್ಕೆಗೆ ಅಗತ್ಯ ಸಂಖ್ಯಾಬಲವಿದ್ದರೂ ಅನಿಲ್ ಕುಮಾರ್ ಅಡ್ಡಗಾಲು ಹಾಕಿದ್ದರಿಂದ ಮತದಾನದ ಮೂಲಕವೇ ಆಯ್ಕೆಯಾಗುವ ಅನಿವಾರ್ಯತೆ ಎದುರಾಗಿತ್ತು.
ಇದನ್ನೂ ಓದಿ: ಖಾತೆ ಬಗ್ಗೆ ಅಸಮಾಧಾನವಿದೆ ಎಂದು ಜೆಡಿಎಸ್ ಸುಳ್ಳುಸುದ್ದಿ ಹಬ್ಬಿಸಿದೆ; ಸಚಿವ ನಾರಾಯಣ ಗೌಡ ಆರೋಪ
ಆದರೀಗ, ಅನಿಲ್ ಕುಮಾರ್ ಎಂಎಲ್ಸಿ ಕಣದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಅವರು ಇಂದು ವಿಧಾನಸಭೆ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿಯನ್ನು ಭೇಟಿಯಾಗಿ ತಮ್ಮ ನಿರ್ಧಾರ ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ, ತಾವು ಅವಿರೋಧವಾಗಿ ಆಯ್ಕೆಯಾಗುವ ಬಗ್ಗೆ ಖುಷಿಯಾಗಿರುವ ಲಕ್ಷ್ಮಣ ಸವದಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ.
ಲಕ್ಷ್ಮಣ ಸವದಿ ವಿರುದ್ಧ ವಿಧಾನ ಪರಿಷತ್ಗೆ ಸ್ಪರ್ಧಿಸಲು ನಿರ್ಧರಿಸಿದ್ದ ಅನಿಲ್ ಕುಮಾರ್ ಮನವೊಲಿಕೆಗೆ ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಕೆಲ ಸ್ವಾಮೀಜಿಗಳ ಮೂಲಕ ಅವರನ್ನು ಸಂಪರ್ಕಿಸಿದರೂ ಫಲ ಸಿಕ್ಕಿರಲಿಲ್ಲ. ಫೆ.18ರೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ಗೆ ಲಕ್ಷ್ಮಣ ಸವದಿ ಸದಸ್ಯರಾಗಲೇಬೇಕಾದ ಅನಿವಾರ್ಯತೆ ಇದೆ. ಒಂದುವೇಳೆ ಉಪ ಚುನಾವಣೆಯಲ್ಲಿ ಸೋತರೆ ಡಿಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಈ ಉಪ ಚುನಾವಣೆ ಸವದಿಗೆ ಬಹಳ ಮುಖ್ಯವಾಗಿತ್ತು.
ಇದನ್ನೂ ಓದಿ: ಮಂಡ್ಯದಲ್ಲಿ ಹೆದ್ದಾರಿ ದರೋಡೆಕೋರರ ಬಂಧನ ಪ್ರಕರಣ; ಪೊಲೀಸ್ ಪೇದೆಯ ಮಗನ ರಕ್ಷಣೆಗೆ ಪ್ಲಾನ್?
ಮೂಲತಃ ಜೆಡಿಎಸ್ನವರಾದ ಅನಿಲ್ ಕುಮಾರ್ ಅವರು ನಂತರ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ವಿಧಾನ ಪರಿಷತ್ಗೆ ನಾಮಪತ್ರ ಸಲ್ಲಿಸಿದ್ದರು. ಅನಿಲ್ ಅವರಿಗೆ ಸೂಚಕರಾಗಿ ಮಾಜಿ ಸಚಿವ ಎಚ್ಡಿ ರೇವಣ್ಣ ಮತ್ತು ದಿನೇಶ್ ಗುಂಡೂರಾವ್ ಸೇರಿದಂತೆ ಎರಡೂ ಪಕ್ಷದ ಶಾಸಕರು ಸಹಿ ಮಾಡಿದ್ದರು. ಅವರ ಮನವೊಲಿಕೆಗೆ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಪ್ರಯತ್ನಪಟ್ಟು ಸೋತಿದ್ದರು. ಇದೀಗ ಚುನಾವಣೆಯಲ್ಲಿ ಹಿಂದೆ ಸರಿಯಲು ನಿರ್ಧರಿಸಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
First published:
February 15, 2020, 12:53 PM IST