ಅಥಣಿ (ಅ.29): ಅಭಿವೃದ್ಧಿಗಾಗಿ ಮತ ಹಾಕಿ ಗೆಲ್ಲಿಸಿದ ಜನಪ್ರತಿನಿಧಿಗಳು ತಮ್ಮ ರಾಜಕೀಯ ಜಂಜಾಟದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಮರೆಯುವುದು ಸಾಮಾನ್ಯವಾಗಿಬಿಟ್ಟಿದೆ. ತಮ್ಮೂರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಕ್ಕಾಗಿ ಜನರು ಕೂಡ ಮನವಿ ಮಾಡಿ, ರೋಸಿ ಹೋಗಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತವರು ಕ್ಷೇತ್ರದ ಜನರು ಕೂಡ ಸರ್ಕಾರದಿಂದ ತಮ್ಮೂರಿಗೆ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿ ಬೇಸತ್ತಿದ್ದಾರೆ. ಕಡೆಗೆ ಗ್ರಾಮಸ್ಥರೇ ಸೇರಿ ದೇಣಿಗೆ ಸಂಗ್ರಹಿಸಿ, ಊರಿನ ಜನರು ಸೇರಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳಿಗೆ ಮುಜುಗರಕ್ಕೆ ಒಳಗಾಗುವಂತೆ ಕಾರ್ಯ ಮಾಡಿ ತೋರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಹಾಗೂ ಹಿಪ್ಪರಗಿ ಗ್ರಾಮಗಳ ಮಧ್ಯದ ರಸ್ತೆ ಸಂಪೂರ್ಣ ಹಾಳಾಗಿದೆ. ಗ್ರಾಮಗಳ ಸಂಪರ್ಕವನ್ನು ಕಲ್ಪಿಸುವ ಈ ರಸ್ತೆ ಓಡಾಡಲು ಯೋಗ್ಯವಾಗಿರಲಿಲ್ಲ. ಈ ಹಿನ್ನಲೆ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರೂ ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ವರ್ಷ ಬಂದತಹ ಪ್ರವಾಹಕ್ಕೆ ಇಲ್ಲಿನ ರಸ್ತೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದ ರಸ್ತೆಯಲ್ಲಿ ಸಂಚಾರಿಸುವುದೇ ಸವಾಲಿನ ಕೆಲಸವಾಗಿತ್ತು. ಇದ್ದಂತಹ ರಸ್ತೆಯಲ್ಲಿ ಗ್ರಾಮಸ್ಥರು ಸಂಚಾರ ನಡೆಸುತ್ತಿದ್ದರು. ಆದರೆ, ಇತ್ತೀಚಿಗೆ ಸುರಿದ ಮಳೆಗೆ ಆ ರಸ್ತೆಯೂ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಾಯಿತು. ಈ ಹಿನ್ನಲೆ ಸರ್ಕಾರಿ ಕಚೇರಿಗಳನ್ನು ಅಲೆದ ಗ್ರಾಮಸ್ಥರು ತಮ್ಮೂರಿಗೆ ರಸ್ತೆ ನಿರ್ಮಿಸುವಂತೆ ಸ್ಥಳೀಯ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ಮಾತ್ರ ಆಗಿರಲಿಲ್ಲ
ಇದನ್ನು ಓದಿ: ಜನಪ್ರತಿನಿಧಿಗಳಿಂದಾಗದ ಕೆಲಸ ಗ್ರಾಮಸ್ಥರಿಂದ; ತಮ್ಮೂರಿಗೆ ತಾವೇ ಬಸ್ ನಿಲ್ದಾಣ ಕಟ್ಟಿಕೊಂಡ ಜನರು
ಪ್ರವಾಹದಿಂದ ತತ್ತರಿಸಿರುವ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸಾಹಸದ ಕೆಲಸವಾಗಿತ್ತು. ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರು. ಇದರಿಂದ ಕೇವಲ ಭರವಸೆ ಸಿಕ್ಕಿದೆ ಹೊರತು, ಈ ಆಶ್ವಾಸನೆ ಈಡೇರುವ ಕಾಲ ಬರಲಿಲ್ಲ. ಕಡೆಗೆ ಸರ್ಕಾರವನ್ನು ನಂಬಿದರೆ, ಈ ಕೆಲಸ ಆಗದು ಎಂದ ಅರಿತ ಗ್ರಾಮಸ್ಥರು ತಾವೇ ತಮ್ಮೂರಿಗೆ ರಸ್ತೆ ನಿರ್ಮಿಸಿಕೊಳ್ಳಲು ಮುಂದಾದರು. ಗ್ರಾಮಸ್ಥರೇ ಚಂದಾ ಎತ್ತುವ ಮೂಲಕ ರಸ್ತೆ ನಿರ್ಮಾಣದ ಕಾರ್ಯ ಮಾಡುತ್ತಿದ್ದಾರೆ. ಇನ್ನು ಕೃಷ್ಣಾ ನದಿಯ ನೀರಿನ ರಭಸಕ್ಕೆ ಬ್ಯಾರೇಜ್ ಪಕ್ಕ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ರಸ್ತೆ ದಾಟಲು ಆಗದ ಪರಿಸ್ಥಿತಿ ಇಲ್ಲಿ ನಿರ್ಮಾಣ ವಾಗಿತ್ತು. ಆದರೆ ಸದ್ಯ ಈಗ ಜೆಸಿಬಿ ಯಂತ್ರ, ಹಾಗೂ ಟ್ಯಾಕ್ಟರ್ಗಳ ಸಹಾಯದೊಂದಿಗೆ ಬ್ಯಾರೇಜ್ ಪಕ್ಕದ ರಸ್ತೆಯ ದುರಸ್ತಿ ಕಾರ್ಯವನ್ನು ರೈತರೇ ನಡೆಸುತ್ತಿದ್ದಾರೆ.
ಈ ಕುರಿತು ಜನಪ್ರತಿನಿಧಿಗಳಿಗೂ ಮನವಿ ಮಾಡಿದರು. ಆದರೆ, ಇದರಿಂದ ಕೇವಲ ಭರವಸೆ ಸಿಕ್ಕಿದೆ ಹೊರತು. ಈ ಆಶ್ವಾಸನೆ ಈಡೇರುವ ಕಾಲ ಬರಲಿಲ್ಲ. ಕಡೆಗೆ ಸರ್ಕಾರವನ್ನು ನಂಬಿದರೆ, ಈ ಕೆಲಸ ಆಗದು ಎಂದ ಅರಿತ ಗ್ರಾಮಸ್ಥರು ತಾವೇ ತಮ್ಮೂರಿಗೆ ರಸ್ತೆ ನಿರ್ಮಿಸಿಕೊಳ್ಳಲು ಮುಂದಾದರು. ಪ್ರವಾಹದಿಂದಾಗ ಎಲ್ಲಾ ಹಾನಿಗಳನ್ನು ಸರಿ ಪಡಿಸುತ್ತೇವೆ ರಸ್ತೆಗಳನ್ನ ದುರಸ್ತಿ ಮಾಡುತ್ತೇವೆ ಎನ್ನುವ ಪೊಳ್ಳು ಭರವಸೆಗಳನ್ನ ಮಾಡುತ್ತದೆ. ಸ್ವತಃ ಉಪ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೆ ಇಂತಹ ಸ್ಥಿತಿ ಇರಬೇಕಾದರೆ ಇನ್ನುಳಿದ ಕ್ಷೇತ್ರಗಳ ಪರಿಸ್ಥಿತಿ ಹೇಗಿರಬೇಕು ಎಂಬ ಪ್ರಶ್ನೆ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ