• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಡ್ರಗ್ಸ್ ಆರೋಪಿಗಳ ರಕ್ಷಣೆಗೆ ಸಿದ್ದರಾಮಯ್ಯ ಹೇಳಿಕೆ: ಡಿಸಿಎಂ ಗೋವಿಂದ ಕಾರಜೋಳ ಟೀಕೆ

ಡ್ರಗ್ಸ್ ಆರೋಪಿಗಳ ರಕ್ಷಣೆಗೆ ಸಿದ್ದರಾಮಯ್ಯ ಹೇಳಿಕೆ: ಡಿಸಿಎಂ ಗೋವಿಂದ ಕಾರಜೋಳ ಟೀಕೆ

ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

ಕೊರೋನಾ, ಅತಿವೃಷ್ಟಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಅದನ್ನ ಮುಚ್ಚಿಹಾಕಲು ಡ್ರಗ್ಸ್ ವಿಚಾರ ಸೋರಿಕೆ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಡಿಸಿಎಂ ಕಾರಜೋಳ ತಿರುಗೇಟು ನೀಡಿದ್ದಾರೆ.

  • Share this:

ಚಿತ್ರದುರ್ಗ: ರಾಜ್ಯದಲ್ಲಿ ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸಲು ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಡ್ರಗ್ಸ್ ವಿಚಾರಗಳನ್ನ ಸೋರಿಕೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದ ಆರೋಪಕ್ಕೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ರಾಜ್ಯದಲ್ಲಿ ಡ್ರಗ್ಸ್ ತನಿಖೆಯ ಹಾದಿ ತಪ್ಪಿಸಲು ಸಿದ್ದರಾಮಯ್ಯ ಅವರೇ ಈ ರೀತಿ ಹೇಳುತ್ತಿದ್ದಾರೆ. ಡ್ರಗ್ ಮಾಫಿಯಾಗಳು ಯಾರೇ ಆಗಿದ್ದರೂ ಅವರಿಗೆ ಕಾನೂನಿನ ಶಿಕ್ಷೆ ಆಗಲೇಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೊಳ ಹೇಳಿದರು. ಚಿತ್ರದುರ್ಗ ನಗರದ ಹೊರ ವಲಯದಲ್ಲಿರುವ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಪ್ರತಿಕ್ರಿಯೆ ನೀಡಿದರು.


ಕೊರೋನಾ, ಅತಿವೃಷ್ಠಿ ನಿಭಾಯಿಸುವಲ್ಲಿ ಸರ್ಕಾರದ ವೈಪಲ್ಯ ಮುಚ್ಚಿ ಹಾಕಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಸಿಎಂ ಯಡಿಯೂರಪ್ಪ ಡ್ರಗ್ಸ್ ವಿವರ ಸೋರಿಕೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕಾರಜೋಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡ್ರಗ್ಸ್ ಮಾಫಿಯಾಗಳು ಯಾರೇ ಆಗಿರಲಿ ಅವರಿಗೆ ಕಾನೂನು ರೀತಿಯ ಶಿಕ್ಷೆ ಆಗಲೇಬೇಕು ಎಂದು ಅವರು ಹೇಳಿದರು.


ಇದನ್ನೂ ಓದಿ: ಶಿರಾ ವಿಧಾನಸಭಾ ಉಪಚುನಾವಣೆ: ಗೊಲ್ಲ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ


ಸರ್ಕಾರ ಕೊರೋನಾ, ಅತಿವೃಷ್ಟಿ ಸಮರ್ಪಕವಾಗಿ ನಿಭಾಯಿಸಿದೆಯಾ ಇಲ್ಲವಾ  ಎಂದು ಸಿದ್ದರಾಮಯ್ಯ ಆತ್ಮವಲೋಕನ ಮಾಡಿಕೊಳ್ಳಲಿ. ಕಳೆದ ವರ್ಷ ಮಳೆ ಬಂದು 35 ಸಾವಿರ ಕೋಟಿಯಷ್ಟು ಅತಿವೃಷ್ಟಿಯಿಂದ ಹಾನಿಯಾಯಿತು, ಸಂಪುಟ ವಿಸ್ತರಣೆಗೂ ಮುನ್ನವೇ ಸಿಎಂ ಯಡಿಯೂರಪ್ಪ ರಾಜ್ಯವನ್ನ ಸುತ್ತಿ, ನೊಂದವರಿಗೆ ಸಾಂತ್ವನ ಹೇಳುವ ಜೊತೆಗೆ ವಸತಿಗೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ಪರಿಹಾರ ಹಣ ನೀಡಿದರು. ಬೆಳೆ ಹಾನಿಯಾದ ರೈತರಿಗೆ ಹೆಚ್ಚಾಗಿ 10 ಸಾವಿರ ರೂ. ಪರಿಹಾರ ನೀಡಿದರು. ಇವೆಲ್ಲಾ  ಸಿದ್ದರಾಮಯ್ಯ ಅವರ ಕಣ್ಣಿಗೆ ಕಾಣುವುದಿಲ್ಲವಾ ಎಂದು ಡಿಸಿಎಂ ಪ್ರಶ್ನಿಸಿದರು.


ರಾಜ್ಯದಲ್ಲಿ ಸಮರ್ಪಕವಾಗಿ ಕೊರೋನಾ ನಿಭಾಯಿಸಿದ್ದರಿಂದಲೇ ನಿಯಂತ್ರಣದಲ್ಲಿದೆ. ಪ್ರಪಂಚ ಕೊರೋನಾದಿಂದ ನಲುಗುತ್ತಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸುಮ್ಮನೆ ವೃತಾ ಆರೋಪ ಮಾಡಬಾರದು. ಡ್ರಗ್ಸ್ ದಂಧೆ ಮಾಡಿದ ಮಾಫಿಯಾಗಳಿಗೆ ರಕ್ಷಣೆ ಮಾಡಲು ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.


ಜಮೀರ್‌ ಅಹಮದ್  ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು  ಯಾರೋ ಒಬ್ಬರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಿದ್ಧ ಇಲ್ಲ. ತನಿಖೆ ಮುಗಿದ ಬಳಿಕ ಯಾರು ಆರೋಪಿಗಳಿರುತ್ತಾರೆ, ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.


ಇದನ್ನೂ ಓದಿ: ದಸರಾ ಅರಮನೆ ಆವರಣಕ್ಕೆ ಮಾತ್ರ ಸೀಮಿತ; ಗಜಪಯಣ ಸಮಾರಂಭ ಇಲ್ಲ; ಸಚಿವ ಎಸ್​​ಟಿ ಸೋಮಶೇಖರ್


ಬಳಿಕ  ಮಾದಿಗ ಸಮುದಾಯದ ಒಳ ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ಸದಾಶಿವ ಆಯೋಗದ ವರದಿಯನ್ನು ಆಂದ್ರದಲ್ಲಿ ಚಂದ್ರಬಾಬು ನಾಯ್ಡು ಜಾರಿಗೆ ತಂದ ನಂತರ ಸುಪ್ರೀಂ ಕೋರ್ಟ್​ನ ಐವರ ಸದಸ್ಯರ ಪೀಠ ಹೊಡೆದು ಹಾಕಿತ್ತು. ಇಂದು ಅದೇ  ಪೀಠ ಒಂದು ಬುಟ್ಟಿ ಹಣ್ಣು ಬಲಾಡ್ಯರಿಗೆ ಕೊಡಲಾಗುವುದಿಲ್ಲ, ಎಲ್ಲರಿಗೂ ಹಂಚಬೇಕೆಂದು ಹೇಳಿದೆ. ಸಾವಿರ ವರ್ಷಗಳ ಶೋಷಣೆಗೆ ಒಳಗಾಗಿ, ನೋವಿಂದ ಬಳಲುತ್ತಾ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ಮೀಸಲಾತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಮೀಸಲಾತಿ ಮಾಡಿದರು. ಸಂವಿಧಾನದ ಆಶಯಗಳಿಗೆ 101 ಜಾತಿಗೂ ಮೀಸಲಾತಿ ಸಿಗಬೇಕು. ಯಾರೂ ಮೀಸಲಾತಿಯಿಂದ ವಂಚಿತರಾಗಬಾರದು. ಇದು ನಮ್ಮ ಸರ್ಕಾರದ ನಿಲುವಾಗಿದ್ದು, ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ. ಈ ಕುರಿತು ಖಂಡಿತವಾಗಿ ನಾವು ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.


ಬಿಜೆಪಿ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆಂಬ ಊಹಾಪೋಹ ಹರಿದಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.


ವರದಿ: ವಿನಾಯಕ ತೊಡರನಾಳ್,

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು