ಬಾಗಲಕೋಟೆ(ಸೆ.05): ಕನ್ನಡ ಚಿತ್ರರಂಗದಲ್ಲಿ ಈಗ ಡ್ರಗ್ಸ್ ಮಾಫಿಯಾದ್ದೇ ದೊಡ್ಡ ಸುದ್ದಿಯಾಗಿದೆ. ಡ್ರಗ್ಸ್ ದಂಧೆಯಲ್ಲಿ ಈಗಾಗಲೇ ರಾಗಿಣಿ ದ್ವಿವೇದಿ ಸೇರಿ 12 ಮಂದಿ ಮೇಲೆ ಎಫ್ಐಆರ್ ಹಾಕಲಾಗಿದೆ. ಈ ಡ್ರಗ್ಸ್ ಹಗರಣದ ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿಯವರನ್ನು ಬಂಧಿಸಲಾಗಿದೆ. ನಟಿ ರಾಗಿಣಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಈ ಕುರಿತು ಬಾಗಲಕೋಟೆಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ರಾಗಿಣಿ ಪಾಗಿಣಿ ನನಗೆ ಗೊತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳೇ ಭಾಗಿಯಾಗಿದ್ದರೂ ಸರಿ, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ರಾಜಕಾರಣಿಗಳ ಮಕ್ಕಳಿರಲಿ, ಅಧಿಕಾರಿಗಳ ಮಕ್ಕಳಿರಲಿ, ಯಾರದ್ದೇ ಮಕ್ಕಳಿರಲಿ ಈ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಹಗರಣ ವಿಚಾರವಾಗಿ, ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಈಗಾಗಲೇ ಕ್ರಮ ಶುರುವಾಗಿದೆ, ತನಿಖೆ ನಡೆಯುತ್ತಿದೆ. ತನಿಖೆ ಮುಗಿಯುವವವರೆಗೆ ನಾವೇನೂ ಹೇಳೋಕೆ ಆಗೋದಿಲ್ಲ. ತನಿಖೆ ಮುಗಿಯೋವರೆಗೂ ವಿಷಯವನ್ನು ಗೌಪ್ಯ ಇಡಲಾಗುತ್ತದೆ. ಕೋಟ್೯ಗೆ ಚಾಜ್೯ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಕಾರಜೋಳ ತಿಳಿಸಿದರು.
Kodagu Flood: ಪ್ರವಾಹದಿಂದ ನಲುಗಿರುವ ಕೊಡಗಿಗೆ 761 ಕೋಟಿ ಅನುದಾನ ಬಾಕಿ; ಬಿಡುಗಡೆ ಮಾಡುತ್ತಾ ಸರ್ಕಾರ?
ಮುಂದುವರೆದ ಅವರು, ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ. ತನಿಖೆ ನಡೆಯುತ್ತಿದೆ, ಗೌಪ್ಯತೆ ಕಾಪಾಡಬೇಕಾಗುತ್ತದೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಮುನ್ನ ಏನು ಹೇಳೋಕೆ ಬರೋಲ್ಲ. ಇದು ಕಾನೂನಿನಿಂದ ಬಗೆಹರಿಯುವಂತದಲ್ಲ. ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು. ಇಂತಹ ಚಟುವಟಿಕೆಗಳಿಂದ ಜೀವಕ್ಕೆ ಕುತ್ತು ಬರುತ್ತೆ,ಈ ರೀತಿ ನಡೆಯದಂತೆ ಇಡೀ ಸಮಾಜ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರ್ಕಾರ ಕೆಡವಿದರು ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಆರೋಪವನ್ನು ಡಿಸಿಎಂ ಗೋವಿಂದ ಕಾರಜೋಳ ತಳ್ಳಿಹಾಕಿದರು. ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರ ಆರೋಪ ಕೇವಲ ರಾಜಕೀಯ ಪ್ರೇರಿತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ