HOME » NEWS » State » DCM ASHWATH NARAYAN VISITED MYSURU CHAMUNDI HILL NAVARATRI FESTIVAL SCT

ಶಿರಾ, ಆರ್​ಆರ್​ ನಗರದಲ್ಲಿ ಬಿಜೆಪಿಗೆ ಭಾರೀ ಅಂತರದ ಗೆಲುವು ನಿಶ್ಚಿತ; ಡಿಸಿಎಂ ಅಶ್ವಥ್ ನಾರಾಯಣ

ಶರನ್ನವರಾತ್ರಿ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಿಸಿಎಂ ಅಶ್ವಥ್ ನಾರಾಯಣ, ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

news18-kannada
Updated:October 19, 2020, 11:45 AM IST
ಶಿರಾ, ಆರ್​ಆರ್​ ನಗರದಲ್ಲಿ ಬಿಜೆಪಿಗೆ ಭಾರೀ ಅಂತರದ ಗೆಲುವು ನಿಶ್ಚಿತ; ಡಿಸಿಎಂ ಅಶ್ವಥ್ ನಾರಾಯಣ
ಡಾ. ಅಶ್ವಥ ನಾರಾಯಣ್.
  • Share this:
ಮೈಸೂರು (ಅ. 19): ಆರ್​ಆರ್ ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲ್ಲುತ್ತಾರೆ. ಈ ಕ್ಷೇತ್ರದಲ್ಲಿ ಪ್ರತಿಷ್ಠೆ ಬಗ್ಗೆ ಮಾತಾಡುವವರಿಗೆ ಏನು ಉತ್ತರ ನೀಡಬೇಕೆಂದು ಜನ ನಿರ್ಣಯ ಮಾಡ್ತಾರೆ. ಜನ ಬಿಜೆಪಿ ಜೊತೆ ಇದ್ದಾರೆ. ಈ ಬಾರಿ ಕಳೆದ ಬಾರಿಯಂತೆ ಅಸ್ಥಿರ ಸರ್ಕಾರ ರಚನೆಯಾಗಬಾರದು ಎಂದು ಜನರಿಗೆ ಗೊತ್ತಿದೆ ಎಂದು ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದ್ದಾರೆ.

ಶರನ್ನವರಾತ್ರಿ ಆಚರಣೆ ಹಿನ್ನಲೆಯಲ್ಲಿ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಿಸಿಎಂ ಅಶ್ವಥ್ ನಾರಾಯಣ ನಾಡದೇವಿಯ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಕರ್ನಾಟಕದಲ್ಲಿ ಸರಿಯಾದ ಸರ್ಕಾರ ಇರಲಿಲ್ಲ. ಈಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರ ನಡುವೆ ಕಚ್ಚಾಟ ನಡೆಯುತ್ತಿದೆ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಆ‌ ಕಚ್ಚಾಟ ಬಯಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಯಲ್ಲೆ ಇದ್ದುಕೊಂಡು ಗುಂಡಿ ತೋಡುತ್ತಿದ್ದರು ಅಂತ ಅವರಿಗೆ ಗೊತ್ತಾಗಿದೆ. ಹೆಚ್​.ಡಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅವರ ಗುಂಡಿ ತೋಡಿದ್ದು ಯಾರು, ಯಾವ ರೀತಿ ಅವರ ಕುತ್ತಿಗೆ ಕೊಯ್ದರು ಎಂದು ಅವರಿಗೆ ಈಗ ಗೊತ್ತಾಗಿದೆ. ಜೊತೆಯಲ್ಲೇ ಇದ್ದು ಯಾವ ರೀತಿಯ ಕುತಂತ್ರ ಮಾಡುತ್ತಾರೆ ಎಂದೂ ಅವರಿಗೆ ಗೊತ್ತಾಗಿದೆ. ಜನರು ಸ್ಥಿರವಾದ ಸರ್ಕಾರ ಕೊಡ್ತಾರೆ ಎಂಬ ನಂಬಿಕೆ ನಮಗೆ ಇದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ; ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು

ಜನರನ್ನು ಭಾವನಾತ್ಮಕವಾಗಿ ತಿರುಗಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಜನರಿಗೆ ವಿರೋಧ ಪಕ್ಷಗಳ ತಪ್ಪುಗಳು ಗೊತ್ತಿದೆ. ಎಲ್ಲರೂ ತಪ್ಪು ಮಾಡಿದ್ದಾರೆ,‌ ನಾವು ಮಾಡಿದ್ದೇವೆ ಅಂತಾರೆ. ಇಲ್ಲಿ ಯಾವ ಪ್ರತಿಷ್ಠೆ ಮುಖ್ಯವಲ್ಲ ಜನರು ಇಟ್ಟ ನಂಬಿಕೆ ಮುಖ್ಯ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ನೆರೆ ಪರಿಸ್ಥಿತಿ ಬಗ್ಗೆ ಮಾತಾಡಲು ಯಾವ ನೈತಿಕತೆಯೂ ಇಲ್ಲ. ಅವರು ರಾಜ್ಯದಲ್ಲಿ‌ ಬರ ಬಂದಾಗ ಜನರಿಗೆ ಸ್ಪಂದಿಸದೆ ಕುಳಿತಿದ್ದರು. ಅಧಿಕಾರದಲ್ಲಿದ್ದ ವೇಳೆ ಒಂದು ಪ್ರವಾಸ ಮಾಡದ ಸಿದ್ದರಾಮಯ್ಯ ಈಗ ಹೇಗೆ ಮಾತನಾಡುತ್ತಾರೆ? ಬಿಜೆಪಿ ಸರ್ಕಾರ ನೆರೆ ಪರಿಸ್ಥಿತಿಯನ್ನು ಚೆನ್ನಾಗಿಯೇ ನಿಭಾಯಿಸಿದೆ ಎಂದು ಈ ವೇಳೆ ಸಿದ್ದರಾಮಯ್ಯ ವಿರುದ್ದ ಡಿಸಿಎಂ ಅಶ್ವಥ್ ನಾರಾಯಣ ಕಿಡಿ ಕಾರಿದ್ದಾರೆ.

ನವೆಂಬರ್‌ನಲ್ಲಿ ಕಾಲೇಜು ಆರಂಭಕ್ಕೆ ಯುಜಿಸಿಯಿಂದ ಅನುಮತಿ‌ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಭೆ ನಡೆಸಿ ಮುಂಜಾಗ್ರತೆ ವಹಿಸಿದ್ದೇವೆ. ಕಾಲೇಜು ಆರಂಭದ ದಿನವನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಇದೀಗ ಆನ್​ಲೈನ್ ಕ್ಲಾಸ್ ಶುರುವಾಗಿದೆ. ಸದ್ಯಕ್ಕೆ ಅದೇ ಮುಂದುವರಿಯಲಿದೆ ಎಂದು ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
Published by: Sushma Chakre
First published: October 19, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories