ಶಿವಮೊಗ್ಗ (ಫೆಬ್ರವರಿ 14); ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಹೀಗಾಗಿ ಹೊಸಪೇಟೆ ಬಳಿಯ ಅಪಘಾತ ಪ್ರಕರಣದ ಆರೋಪಿಗಳು ಯಾರೇ ಆಗಿರಲಿ ಅವರಿಗೆ ಸೂಕ್ತ ಶಿಕ್ಷೆ ಖಂಡಿತ ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಫೆ.10 ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿ ಒಂದು ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಸಚಿನ್ ಮತ್ತು ರವಿನಾಯ್ಕ್ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದದ್ದು ಸಚಿವ ಆರ್. ಅಶೋಕ್ ಅವರ ಮಗ ಶರತ್. ಹೀಗಾಗಿ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಸುದ್ದಿ ಎಲ್ಲೆಡೆ ವ್ಯಾಪಕವಾಗಿತ್ತು.
ಈ ಕುರಿತು ಶಿವಮೊಗ್ಗದಲ್ಲಿ ಗುರುವಾರ ಹೇಳಿಕೆ ನೀಡಿರುವ ಡಿಸಿಎಂ ಅಶ್ವತ್ಥ್ ನಾರಾಯಣ್, “ವಿಐಪಿ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವಾದಾಗ ಪೊಲೀಸರು ಇನ್ನಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ. ಯಾರೂ ಯಾರ ಬದುಕಿನ ಜೊತೆಯೂ ಚೆಲ್ಲಾಟವಾಡಬಾರದು. ಈ ವಿಚಾರದಲ್ಲಿ ಯಾರ ತಪ್ಪಿದೆಯೋ ಅವರಿಗೆ ಸೂಕ್ತ ಶಿಕ್ಷೆಯಾಗಲಿ.
ಈ ವಿಚಾರದಲ್ಲಿ ತಾರತಮ್ಯವಾಗುವುದಿಲ್ಲ. ಕಾನೂನಿನ ಎದುರು ಎಲ್ಲರೂ ಸಮಾನರಾಗಿದ್ದು, ಘಟನೆಯ ಬಗ್ಗೆ ಪೊಲೀಸರು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ” ಎಂದು ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ : ಅಶೋಕ್ ಹೆಸರು ಹೇಳಿ ತುರ್ತಾಗಿ ಪೋಸ್ಟ್ ಮಾರ್ಟಂ ಮಾಡಿಸಿದರು: ಡಾ. ಮಹಾಂತೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ