ಐಟಿ ನೀತಿ 2020-2025 ಬಿಡುಗಡೆ: ಬೆಂಗಳೂರು ನಂತರ 2ನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರ ವಿಸ್ತರಣೆಗೆ ಉಪಕ್ರಮ

ಈ ಸಂದರ್ಭದಲ್ಲಿ ಮಾತನಾಡಿದ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, "ಬೆಂಗಳೂರಿನ ಹೊರಗೂ ಐಟಿ ಕ್ಷೇತ್ರಕ್ಕೆ ಅತ್ಯುತ್ತಮ ಅವಕಾಶಗಳಿವೆ. ಶ್ರೇಷ್ಠ  ಮಾನವ ಸಂಪನ್ಮೂಲವೂ ಸಿಗುತ್ತಿದೆ. ಮೇಲಾಗಿ ಯಾವುದಾದರೂ ಸಮಸ್ಯೆ ಎದುರಾದರೂ ಸಕಾಲಕ್ಕೆ ಮಧ್ಯಪ್ರವೇಶಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಸರಕಾರ ಸದಾ ಸಿದ್ಧವಿದೆ" ಎಂದರು.

ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ

ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ

  • Share this:
ಬೆಂಗಳೂರು(ನ.12): ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದ್ದು, ಅದಕ್ಕೆ ಪೂರಕವಾದ ಹೊಸ ಐಟಿ ನೀತಿಯನ್ನು (2020-25) ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಗುರುವಾರ ಬೆಂಗಳೂರು ಟೆಕ್‌ ಸಮ್ಮಿಟ್‌ಗೆ ಪೂರ್ವಭಾವಿಯಾಗಿ ಐಟಿ ಕ್ಷೇತ್ರ ಅಭಿವೃದ್ಧಿಗೆ ಬೆಂಗಳೂರನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸುವ ಉಪಕ್ರಮಗಳ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಐಟಿಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ 2020-2025ರ ನೂತನ ಐಟಿ ನೀತಿಯನ್ನು ಬಿಡುಗಡೆ ಮಾಡಿದರು.

ರಾಜ್ಯ ವಿವಿಧ ನಗರಗಳಲ್ಲಿ ಐಟಿ ಕಂಪನಿಗಳ ಸ್ಥಾಪನೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಅಂಶಗಳನ್ನು ಐಟಿ ನೀತಿ ಒಳಗೊಂಡಿದ್ದು, ಇದರಿಂದ ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಡಿಸಿಎಂ ಹೇಳಿದರು.

ಈಗಾಗಲೇ ಎರಡನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಪ್ರಯತ್ನಗಳು ನಡೆದಿವೆ. ಮುಖ್ಯವಾಗಿ ಇನ್ಪೋಸಿಸ್‌ ಕಂಪನಿ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ನಗರಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ದೊಡ್ಡ ಪ್ರಯತ್ನ ಮಾಡಿತು. ಇದೇ ರೀತಿಯ ಪ್ರಯತ್ನ ಗಳು ಮುಂದಿನ ದಿನಗಳಲ್ಲಿ ರಚನಾತ್ಮಕ ವೇಗ ಪಡೆಯಲಿವೆ ಎಂದರು.

ಮೂಲಸೌಕರ್ಯಕ್ಕೆ ಒತ್ತುಸದ್ಯಕ್ಕೆ 5ಜಿ ಹೊಸ್ತಿಲಲ್ಲಿ ಇದ್ದೇವೆ. ಆದರೆ 4ಜಿ ಯನ್ನೇ ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನ ಇನ್ನೂ ಆಗಬೇಕಿದೆ. ಕನೆಕ್ಟಿವಿಟಿ ಎನ್ನುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಟೆಲಿಕಾಂ ಸೇವೆಗಳ ಪರಧಿಯನ್ನು ವಿಸ್ತರಿಸಬೇಕು. ಈಗಷ್ಟೇ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿರುವುದರಿಂದ ನೆಟ್‌ವರ್ಕಿಂಗ್‌ ಅತ್ಯಗತ್ಯವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಲಾಕ್​ಡೌನ್​ನಿಂದ ಉದ್ಯೋಗ ಕಳೆದುಕೊಂಡವರಿಗೆ ಗುಡ್​ನ್ಯೂಸ್​; ಆತ್ಮನಿರ್ಭರ ಯೋಜನೆಯಡಿ ಇಪಿಎಫ್​ ಸೌಲಭ್ಯ

ಈಗ ಬಿಯಾಂಡ್‌ ಬೆಂಗಳೂರು ಉಪಕ್ರಮದಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಮತ್ತು ಶಿವಮೊಗ್ಗ ನಗರಗಳತ್ತ ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಹಾಗೂ ಐಟಿ ಕಂಪನಿಗಳನ್ನು ಕಳಿಸಿ ಇಡೀ ರಾಜ್ಯದಲ್ಲಿ ಎಲ್ಲೆಡೆ ಇಂಥ ಸಂಸ್ಥೆಗಳ ಅಸ್ತಿತ್ವ ಇರುವಂತೆ ನೋಡಿಕೊಳ್ಳಲು ಸರಕಾರ ಬಲವಾಗಿ ಯತ್ನಿಸುತ್ತಿದೆ ಎಂದರು.

ವರ್ಕ್‌ ಫ್ರಂ ಎನಿವೇರ್‌

ಕೋವಿಡ್‌ ಬಂದ ಮೇಲೆ ನಮ್ಮೆಲ್ಲರ ಸಾಂಪ್ರದಾಯಿಕ ಪರಿಕಲ್ಪನೆಗಳೆಲ್ಲ ಬದಲಾಗಿಬಿಟ್ಟಿವೆ. ಸೋಂಕು ಬರುವುದಕ್ಕೂ ಮೊದಲು ವರ್ಕ್‌ ಫ್ರಂ ಹೋಮ್‌ ಎನ್ನುವುದು ವಿರಳವಾಗಿ ಬಳಸುವ ಪದವಾಗಿತ್ತು. ಕೋವಿಡ್‌ ನಂತರ ಇದು ಸರ್ವೇಸಾಮಾನ್ಯ ಎನಿಸಿತು. ಈಗ ಇನ್ನೂ ಮುಂದೆ ಹೋಗಿ ವರ್ಕ್‌ ಫ್ರಂ ಎನಿವೇರ್‌ ಆಗಿದೆ. ಇದಕ್ಕೆ ಅತ್ಯುತ್ತಮ ನೆಟ್‌ವರ್ಕಿಂಗ್‌, ಕನೆಕ್ಟಿವಿಟಿ ಮಾಡಿದರೆ ಹೆಚ್ಚಿನ ಫಲಶ್ರುತಿಯನ್ನು ಕಾಣಬಹುದು ಎಂದು ಡಿಸಿಎಂ ಹೇಳಿದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರಗೆ, ಅಂದರೆ, ರಾಜ್ಯದ ಉದ್ದಗಲಕ್ಕೂ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ. ಒಂದೆಡೆ ಶೈಕ್ಷಣಿಕ ಕ್ಷೇತ್ರಕ್ಕೆ ಶಕ್ತಿ ತುಂಬುತ್ತಾ ಮತ್ತೊಂದೆಡೆ ಐಟಿ ಕ್ಷೇತ್ರವನ್ನು ವಿಸ್ತರಿಸುತ್ತಾ ಹೋದರೆ ಅತ್ಯುತ್ತಮ ಸಾಧನೆ ಮಾಡಬಹುದು. ಈಗಾಗಲೇ ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೂ ಮತ್ತಷ್ಟು ಮುಂದೆ ಸಾಗಲಿದೆ. ಈ ನಿಟ್ಟಿನಲ್ಲಿ ಜಾರಿಗೆ ಬರುತ್ತಿರುವ ನೂತನ ಐಟಿ ನೀತಿಯು ಈ ಕ್ಷೇತ್ರದ ವಿಕೇಂದ್ರೀಕರಣಕ್ಕೆ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.ಕೋವಿಡ್‌ ಪಿಡುಗನ್ನು ಟೆಕ್ನಾಲಜಿಯಿಂದಲೇ ಪರಿಣಾಮಕಾರಿಯಾಗಿ ಎದುರಿಸಿದ್ದೇವೆ. ಹೀಗಾಗಿ ಮುಂದುವರಿದ ದಿನಗಳಲ್ಲಿ ಇಂಥ ಕಂಪನಿಗಳೆಲ್ಲವೂ ಬೆಂಗಳೂರಿನಲ್ಲೇ ಬೀಡುಬಿಡುವುದು ಸರಿಯಲ್ಲ. ವೈಜ್ಞಾನಿಕವಾಗಿ ಎಲ್ಲ ಕ್ಷೇತ್ರಗಳನ್ನು ಎರಡನೇ ಹಂತದ ನಗರಗಳಿಗೆ ವಿಕೇಂದ್ರೀಕರಿಸಬೇಕು ಎಂಬುದು ನೂತನ ಐಟಿ ನೀತಿಯ ಆಶಯ ಎಂದು ಅವರು ಹೇಳಿದರು.

ಹೊರಗೆ ಉತ್ತಮ ಅವಕಾಶಗಳಿವೆ

ಈ ಸಂದರ್ಭದಲ್ಲಿ ಮಾತನಾಡಿದ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, "ಬೆಂಗಳೂರಿನ ಹೊರಗೂ ಐಟಿ ಕ್ಷೇತ್ರಕ್ಕೆ ಅತ್ಯುತ್ತಮ ಅವಕಾಶಗಳಿವೆ. ಶ್ರೇಷ್ಠ  ಮಾನವ ಸಂಪನ್ಮೂಲವೂ ಸಿಗುತ್ತಿದೆ. ಮೇಲಾಗಿ ಯಾವುದಾದರೂ ಸಮಸ್ಯೆ ಎದುರಾದರೂ ಸಕಾಲಕ್ಕೆ ಮಧ್ಯಪ್ರವೇಶಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಸರಕಾರ ಸದಾ ಸಿದ್ಧವಿದೆ" ಎಂದರು.

"ಈಗಾಗಲೇ ರಾಜ್ಯದ ಎಲ್ಲ ಭಾಗಗಳಲ್ಲೂ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಗೆ ಸರಕಾರ ಹೆಚ್ಚು ಒತ್ತು ನೀಡಿದೆ. ಈಗ ಹೊಸದಾಗಿ ಬಿಡುಗಡೆ ಆಗುತ್ತಿರುವ ಐಟಿ ನೀತಿಯಲ್ಲೂ ಅದಕ್ಕೆ ಪೂರಕವಾದ ಅಂಶಗಳನ್ನು ಅಡಕಗೊಳಿಸಲಾಗಿದೆ" ಎಂದು ರೆಡ್ಡಿ ಮಾಹಿತಿ ನೀಡಿದರು.

ಐಟಿ ನೀತಿಯಲ್ಲಿ ಏನಿದೆ?

ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ರಾಜ್ಯವೂ ಈಗ ಹೊಂದಿರುವ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವುದು ಹಾಗೂ ಇನ್ನೂ ಮುಂದೆ ಸಾಗುವುದು. ಅದಕ್ಕೆ ಬೇಕಾದ ಎಲ್ಲ ಉಪಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವುದು. ರಾಜ್ಯದ ಉದ್ದಗಲಕ್ಕೂ ಹೂಡಿಕೆಯನ್ನು ಉತ್ತೇಜಿಸಿ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು. ಅದಕ್ಕೆ ಅಗತ್ಯವಾದ ಕಾರ್ಯತಂತ್ರವನ್ನು ರೂಪಿಸುವುದು.

ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ ಐಟಿ, ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಕಂಪನಿಗಳನ್ನು ಸ್ಥಾಪನೆ ಮಾಡುವುದು. ಈ ಮೂಲಕ ರಾಜ್ಯವ್ಯಾಪಿ ಉದ್ಯೋಗಾವಕಾಶ ಸೃಷ್ಟಿ ಮಾಡುವುದು. ಈ ನೀತಿಯಿಂದ ಮೂಲಸೌಕರ್ಯ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ, ಪರಿಸರ ರಕ್ಷಣೆ, ಕೌಶಲ್ಯಾಭಿವೃದ್ಧಿ, ವ್ಯಾಪಾರ-ವಾಣಿಜ್ಯಾಭಿವೃದ್ಧಿ ಸಾಧ್ಯವಾಗುತ್ತದೆ. ಬೆಂಗಳೂರಿನ ಹೊರಗೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುವ ಕಂಪನಿಗಳಿಗೆ ಸರಕಾರ ಎಲ್ಲ ರೀತಿಯ ಆರ್ಥಿಕ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ, ಅನೇಕ ರಿಯಾಯಿತಿಗಳನ್ನು ನೀಡಲಿದೆ.

ಐಟಿ ನೀತಿಯ ಗುರಿಗಳು

ಟ್ರಿಲಿಯನ್ ಡಾಲರ್ ಗೂ ಮೀರಿ ಡಿಜಿಟಲ್ ಆರ್ಥಿಕತೆಯಾಗಿ ಹೊರಹೊಮ್ಮುವ ಭಾರತದ ಗುರಿಗಾಗಿ ಶೇ.30ರಷ್ಟು ಕೊಡುಗೆ ನೀಡಲು ರಾಜ್ಯದ ಐಟಿ ಉದ್ಯಮವನ್ನು ಸಜ್ಜುಗೊಳಿಸುವುದು. 2020-2025ರ ಅವಧಿಯಲ್ಲಿ ರಾಜ್ಯದಲ್ಲಿ 60 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗದ ಅವಕಾಶ ಕಲ್ಪಿಸುವುದು. ಐಟಿ ಕ್ಷೇತ್ರವನ್ನು ಆದ್ಯತೆಯ ಮೇರೆಗೆ ವಿಸ್ತರಿಸುವುದು ಹಾಗೂ ಆ ಮೂಲಕ ಎಲ್ಲ ಭಾಗಗಳ ಸಮಾನಾಂತರ ಅಭಿವೃದ್ಧಿಯನ್ನು ಸಾಧಿಸುವುದು. ಐಟಿ ಉದ್ಯಮಕ್ಕೆ ಪೂರಕವಾಗಿ ಬೆಂಗಳೂರು ಹೊರಗೆ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವುದು. ಅಗತ್ಯ ದತ್ತಾಂಶ ಸಂರಕ್ಷಣೆಗೆ ಬೇಕಾದ ಸೈಬರ್ ಭದ್ರತಾ ನೀತಿಯನ್ನು ರೂಪಿಸುವುದು.

ವರ್ಚುವಲ್‌ ವೇದಿಕೆ ಮೂಲಕ ಐಟಿ ನೀತಿಯನ್ನು ಬಿಡುಗಡೆ ಮಾಡಿದ ಈ ಕಾರ್ಯಕ್ರಮದಲ್ಲಿ ರಾಜ್ಯ ಐಟಿ ವಿಷನ್‌ ಗ್ರೋಪ್‌ ಚೇರ್ಮನ್‌ ಕ್ರಿಸ್‌ ಗೋಪಾಲಕೃಷ್ಣನ್‌, ಐಟಿ ಮೂಲಸೌಕರ್ಯ ಕಾರ್ಯಪಡೆ ಮುಖ್ಯಸ್ಥ ಬಿ.ವಿ.ನಾಯ್ಡು, ಎಸ್‌ಟಿಪಿಐ ನಿರ್ದೇಶಕ ಶೈಲೇಂದ್ರ ತ್ಯಾಗಿ ಭಾಗವಹಿಸಿ ಮಾತನಾಡಿದರು. ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.
Published by:Latha CG
First published: