ಬೆಂಗಳೂರು(ಸೆಪ್ಟೆಂಬರ್. 10): ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, 32 ಮಂದಿ ಕೊರೋನಾ ವಾರಿಯರ್ಗಳಿಗೆ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಅಪಸ್ವರ ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಬಿಬಿಎಂಪಿ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಮೊದಲೇ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ವಾರಿಯರ್ಗಳಿಗೆ ಕೇಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಲಾಗಿತ್ತು. ಆದರಂತೆ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಅವರನ್ನು ಗುರುತಿಸಿ ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ. ಕೇವಲ ಕೊರೋನಾ ವಾರಿಯರ್ಸ್ ಜತೆಗೆ ಬೇರೆಯವರಿಗೂ ಪ್ರಶಸ್ತಿ ನೀಡಲಾಗಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, ಈ ಬಾರಿ ಆಯ್ಕೆ ಸಮಿತಿಯು ಉತ್ತಮ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಪೈಕಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್ ವಿರುದ್ಧ ಹೋರಾಟ ನಡೆಸಿದವರನ್ನೇ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಂದಿನಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಈ ವರ್ಷ ಕೋವಿಡ್ ದುಡಿದವರನ್ನು ಗೌರವಿಸಲಾಗಿದೆ. ಮೊಟ್ಟ ಮೊದಲು ಕೋವಿಡ್ ಆಸ್ಪತ್ರೆ ಆರಂಭಿಸಿ ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಟ್ಟ ಡಾ. ಆಸೀಮಾ ಭಾನು, ಹೋಮ್ ಕ್ವಾರಂಟೈನ್ ಹಾಗೂ ಮನೆಯಲ್ಲೇ ಚಿಕಿತ್ಸೆ ನೀಡುವ ಬಗ್ಗೆ ಉತ್ತೇಜನ ನೀಡಿದ ಡಾ. ಮೀನಾ ಗಣೇಶ್, ಡಾ, ನವೀನ್ ಬೆನಕಪ್ಪ, ಡಾ. ವೆಂಕಟೇಶ ಮೂರ್ತಿ, ಜೈವಿಕ ತಂತ್ರಜ್ಞಾನದಲ್ಲಿ ಕೆಲಸ ಮಾಡಿರುವ ತಸ್ಲೀಮ್ ಆರೀಫ್ ಸೈಯ್ಯದ್, ಯುವಕರಿಗೆ ಸ್ಫೂರ್ತಿ ಆಗಿರುವ ನಿತಿನ್ ಕಾಮತ್ ಮುಂತಾದವರನ್ನು ಗುರುತಿಸಲಾಗಿದೆ ಎಂದ ಅವರು, ಪ್ರಶಸ್ತಿಗಳ ಬಗ್ಗೆ ಅಪಸ್ವರ ಸರಿಯಲ್ಲ ಎಂದರು.
ಬಿಬಿಎಂಪಿಗೆ ಆಡಳಿತಾಧಿಕಾರಿ :
ಪಾಲಿಕೆ ಚುನಾಯಿತ ಆಡಳಿತ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ಶೀಘ್ರವೇ ನೇಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು. ಪಾಲಿಕೆಗೆ ಸಂಬಂಧಿಸಿದಂತೆ ಶುಕ್ರವಾರದಿಂದ ಜನಪ್ರತಿನಿಧಿಗಳು ಇರುವುದಿಲ್ಲ. ಈಗಾಗಲೇ ನಗರದಲ್ಲಿ ಮಳೆ ಅಬ್ಬರ ಹೆಚ್ಚಿದೆ. ಸಮಸ್ಯೆಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಕೂಡಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುವುದು. ಆ ಬಗ್ಗೆ ಮುಖ್ಯಮಂತ್ರಿಗಳು ಇಂದು ಅಥವಾ ನಾಳೆಯೊಳಗೆ ನಿರ್ಧಾರ ಕೈಗೊಳ್ಳುವರು ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನೇ ಆಡಳಿತಾಧಿಕಾರಿ ಯನ್ನಾಗಿ ನೇಮಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ ಅವರು, ಮಂಜುನಾಥ್ ಪ್ರಸಾದ್ ಅವರನ್ನೇ ನೇಮಿಸಬೇಕಾ ಅಥವಾ ಬೇರೆಯವರನ್ನು ಆ ಹುದ್ದೆಗೆ ತರಬೇಕಾ ಎಂಬ ಬಗ್ಗೆ ಮುಖ್ಯಮಂತ್ರಿಗಳೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ಇದನ್ನೂ ಓದಿ : No Objection Certificate : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಬೇರೊಂದು ಹುದ್ದೆಗೆ ಅರ್ಜಿ ಸಲ್ಲಿಸಲು ಎನ್ಒಸಿ ಬೇಕಿಲ್ಲ
ಇದೇ ವೇಳೆ ಉಪ ಮುಖ್ಯಮಂತ್ರಿಗಳು, ನಾಡಪ್ರಭು ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಮೇಖ್ರಿ ಸರ್ಕಲ್ʼನಲ್ಲಿರುವ ಕೆಂಪೇಗೌಡ ಗಡಿಗೋಪುರದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ