DC Grama vastavya: ಮೇದಿನಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ, ಕುಗ್ರಾಮದ ಜನರ ಸಮಸ್ಯೆ ಆಲಿಸಿದ ಡಿಸಿ

ಕುಮಟಾ ತಾಲೂಕಿನ ಮೇದಿನಿ ಗ್ರಾಮ ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮವಾಗಿದ್ದು, ಈ ಗ್ರಾಮಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಜನರ ಸಮಸ್ಯೆ ಆಲಿಸುತ್ತಿರು ಜಿಲ್ಲಾಧಿಕಾರಿ

ಜನರ ಸಮಸ್ಯೆ ಆಲಿಸುತ್ತಿರು ಜಿಲ್ಲಾಧಿಕಾರಿ

  • Share this:
ಕಾರವಾರ (ಮಾರ್ಚ್ 20): ಉತ್ತರ ಕನ್ನಡ (Uttara Kannada) ಜಿಲ್ಲೆಯ  ಕುಮಟಾ (Kumta) ತಾಲೂಕಿನ ಮೇದಿನಿ ಗ್ರಾಮ (Village) ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮವಾಗಿದ್ದು, ಕನಿಷ್ಟ ಸೌಲಭ್ಯಕ್ಕೂ ಪರದಾಡುತ್ತಿರುವ ಗ್ರಾಮದ ಜನ ಕಳೆದ ಹತ್ತಾರು ವರ್ಷಗಳ ಹೋರಾಟದ ಬಳಿಕ ಎರಡು ವರ್ಷದ ಹಿಂದೆ ಜಿಲ್ಲಾಧಿಕಾರಿ (DC) ತೆರಳಿ ಸಮಸ್ಯೆ ಆಲಿಸಿದ್ದರು. ಈ ವೇಳೆ ಒಂದಿಷ್ಟು ಸಣ್ಣಪುಟ್ಟ ಸಮಸ್ಯೆ ಬಗೆಹರಿದಿತ್ತಾದರೂ ಗ್ರಾಮಕ್ಕೆ ಅತಿ ಅವಶ್ಯಕವಾಗಿದ್ದ ರಸ್ತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದ್ದವು. ಆದರೆ ಇದೀಗ ಮತ್ತೆ ಅದೇ ಗ್ರಾಮಕ್ಕೆ ಜಿಲ್ಲಾಧಿಕಾರಿ ತೆರಳಿ ಸಮಸ್ಯೆ ಆಲಿಸಿದ್ದು, ಸ್ಥಳೀಯರಲ್ಲಿ ಸಮಸ್ಯೆಗಳಿಗೆ ಈಗಲಾದರೂ ಪರಿಹಾರ ಸಿಗಬಹುದೆಂಬ ಆಶಾಕಿರಣವೊಂದು ಮೂಡಿದೆ.

ಮೇದಿನಿ ಗ್ರಾಮದ ಸಮಸ್ಯೆಗಳೇನು?:

ಹಚ್ಚ ಹಸಿರಿನ ದಟ್ಟ ಕಾನನದ ನಡುವೆ ಸಂಕಷ್ಟದ ಬದುಕು ನಡೆಸುತ್ತಿರುವ ಕುಮಟಾ ತಾಲ್ಲೂಕಿನ ಮೇದಿನಿ ಜನರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ತಂಡ ತೆರಳಿತ್ತು. ಬೃಹತ್ ಆಲದಮರದ ಹಸಿರ ಚಪ್ಪರದಡಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ‘ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜನರ ಅಹವಾಲು ಆಲಿಸಿದರು. ಈ ವೇಳೆ ಜಿಲ್ಲಾಧಿಕಾರಿಯೇ ಜನರ ಬಳಿ ತೆರಳಿ ಒಬ್ಬೊಬ್ಬರ ಅಹವಾಲು ಸ್ವೀಕರಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಅಳಲು ತೋಡಿಕೊಂಡ ಗ್ರಾಮಸ್ಥರು ಊರಿಗೆ ವಿದ್ಯುತ್ ಸಂಪರ್ಕವಿಲ್ಲ. ವರ್ಷದಲ್ಲಿ ಮೂರು ತಿಂಗಳು ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿರುವ ಬಗ್ಗೆ ದೂರು ನೀಡಿದರು. ಕುಡಿಯುವ ನೀರಿನ ಸಂಪರ್ಕ ಇಲ್ಲದ ಬಗ್ಗೆ ಮತ್ತು ಅಂಗನವಾಡಿ ಜೊತೆಗೆ ದುರಸ್ಥಿಗೆ ತಲುಪಿದ ಶಾಲೆಗೆ ಹೊಸ ಕಟ್ಟಡ ಕಲ್ಪಿಸಲು ಮನವಿ ಮಾಡಿದರು. ಇದಲ್ಲದೆ ಗ್ರಾಮಕ್ಕೆ ಅತಿ ಮುಖ್ಯವಾಗಿ ರಸ್ತೆ ಸಂಪರ್ಕವೇ ಇಲ್ಲದಂತಾಗಿದ್ದು, ಈ ಹಿಂದೆ ಜಿಲ್ಲಾಧಿಕಾರಿ ಬಂದಾಗಲೂ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಎಲ್ಲ ಸಮಸ್ಯೆಗಳಿಗೂ ಮೂಲ ರಸ್ತೆಯೇ ಆಗಿದ್ದು ಅದನ್ನು ಬಗೆಹರಿಸಲು ಈಗಲಾದರೂ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Rain Alert: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಇಂದಿನಿಂದ ಮೂರು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ

ಜಿಲ್ಲಾಧಿಕಾರಿಗಳ ಬೈಕ್ ಪರೇಡ್:

ಸಮಸ್ಯೆ ಆಲಿಸಿದ ಬಳಿಕ ಊರಿನ ಯುವಕರ ಬೈಕ್ ಏರಿ ಮನೆ ಮನೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಮನೆಯಲ್ಲಿದ್ದವರಿಂದಲೂ ಸಮಸ್ಯೆ ಆಲಿಸಿದರು. ಬಳಿಕ‌ ರೇಷನ್ ಕಾರ್ಡ್, ಪಿಂಚಣಿ, ಅಂಗವೀಕಲರಿಗೆ ಮಾಸಾಶನ ಇಲ್ಲದವರಿಗೆ ಸ್ಥಳದಲ್ಲಿಯೇ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ವಿದ್ಯುತ್ ದುರಸ್ತಿ ಜೊತೆಗೆ‌ ಶಾಶ್ವತ ಪರಿಹಾರ ಮಾಡುವುದಾಗಿ ತಿಳಿಸಿದ್ದಾರೆ. ಕುಡಿಯುವ ನೀರು, ಕಾಲೇಜು ಮಕ್ಕಳಿಗೆ ಹಾಸ್ಟಲ್ ವ್ಯವಸ್ಥೆ, ಶಾಲೆಗೆ ಕಟ್ಟಡ ಮಂಜೂರಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ ಗ್ರಾಮದಲ್ಲಿ ಮುಖ್ಯವಾಗಿ ರಸ್ತೆ ಸಂಪರ್ಕದ ಸಮಸ್ಯೆ ಇದ್ದು ಈ ಬಗ್ಗೆ ಶೀಘ್ರ ಪ್ರಯತ್ನ ನಡೆಸಲಾಗುವುದು ಎಂದಿದ್ದಾರೆ.

ರಸ್ತೆ ಸಂಪರ್ಕಕ್ಕಾಗಿ ಗ್ರಾಮಸ್ಥರಿಂದ ಕಳೆದ 10 ವರ್ಷದಿಂದ ಹೋರಾಟ:

ಇನ್ನು ರಸ್ತೆ ಮಂಜೂರಿ ಮಾಡುವಂತೆ ಗ್ರಾಮಸ್ಥರು ಕಳೆದ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಕಳೆದ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮದಲ್ಲಿನ ಸಮಸ್ಯೆ ಅರಿತು ರಸ್ತೆ ಸಂಪರ್ಕಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಅಂದಿನ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ನೇತೃತ್ವದ ತಂಡ ಮೇದಿನಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಿತ್ತು.

ಈ ವೇಳೆ ಒಂದಿಷ್ಟು ಸಮಸ್ಯೆ ಬಗೆಹರಿದಿತ್ತಾದರೂ ಬಹುಮುಖ್ಯ ರಸ್ತೆ ಸಮಸ್ಯೆಗೆ ಪರಿಹಾರ ಸಿಗದ ಕಾರಣ ಪರಿಹಾರ ಒದಗಿಸಿದ ಸಮಸ್ಯೆಗಳು ಮತ್ತೆ ಯತ್ತಾವತ್ತಾಗಿವೆ. ಆದರೆ ಇದೀಗ ಮತ್ತೆ ಜಿಲ್ಲಾಧಿಕಾರಿ ಆಗಮಿಸಿದ್ದು ಸಮಸ್ಯೆ ಹೇಳಿಕೊಂಡಿದ್ದೇವೆ. ನಮಗೆ ಮುಖ್ಯವಾಗಿ ರಸ್ತೆ ಸಮಸ್ಯೆ ಬಗೆಹರಿಯಬೇಕಿದೆ. ಈ ನಿಟ್ಟಿನಲ್ಲಿ ಈ ಜಿಲ್ಲಾಧಿಕಾರಿಯಾದರೂ ಪ್ರಯತ್ನ ನಡೆಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: State Transport: SSLC ವಿದ್ಯಾರ್ಥಿಗಳಿಗೆ KSRTC, BMTCಯಲ್ಲಿ ಉಚಿತ ಪ್ರಯಾಣ, ಹಾಲ್ ಟಿಕೆಟ್ ತೋರಿಸಿದ್ರೆ ಸಾಕು

ಕುಗ್ರಾಮ ಹಣೆಪಟ್ಟಿ ಹೊತ್ತುಕೊಂಡು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಮೇದಿನಿ ಭಾಗದ ಜನರು ಜಿಲ್ಲಾಧಿಕಾರಿ ಎದುರು ಕೆಲವೇ ಕೆಲವು ಸಮಸ್ಯೆಗಳಿಟ್ಟರೂ ಕೂಡ ಅದೆಲ್ಲದಕ್ಕೂ ಮೂಲ ರಸ್ತೆ ಇಲ್ಲದಿರುವುದೇ  ಕಾರಣ. ಜಿಲ್ಲಾಧಿಕಾರಿ ಜನರೆದುರು ರಸ್ತೆ ಸಂಪರ್ಕಕ್ಕಾಗಿ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ರು. ಸರ್ಕಾರ ಮಟ್ಟದಲ್ಲಿ ಸಾಧ್ಯವಾಗದೇ ಇದ್ದಲ್ಲಿ ಸಿಎಸ್ಆರ್ ಅಡಿ ಇನ್ಫೋಸಿಸ್ ಸಂಸ್ಥೆ ಸಹಾಯ ಮಾಡಲು ಮುಂದಾಗಿರುವ ಬಗ್ಗೆ ತಿಳಿದ ಅವರು ಈ ಬಗ್ಗೆಯೂ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದು ಇದು ಮೇದಿನ ಭಾಗದ ಜನರಲ್ಲಿ ಮತ್ತೆ ರಸ್ತೆ ಸಂಪರ್ಕದ ಕನಸು ಜೀವಂತವಾಗಿರಿಸುವಂತೆ ಮಾಡಿದೆ.
Published by:shrikrishna bhat
First published: