ಮದುವೆ ದಿನವೇ ಮನೆಮಂದಿಯೆಲ್ಲ ಮಾಡಿದರು ನೇತ್ರದಾನಕ್ಕೆ ಸಹಿ

news18
Updated:June 26, 2018, 9:51 PM IST
ಮದುವೆ ದಿನವೇ ಮನೆಮಂದಿಯೆಲ್ಲ ಮಾಡಿದರು ನೇತ್ರದಾನಕ್ಕೆ ಸಹಿ
news18
Updated: June 26, 2018, 9:51 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಜೂ 26) :  ಮದುವೆ ಎಂದರೆ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವಧು-ವರ, ಮನೆಮಂದಿಯೆಲ್ಲ ಒಂದು ಹೆಜ್ಜೆ ಮುಂದೆ ಹೋಗಿ ನಟ ಡಾ. ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರು ನುಡಿದು ನಡೆದು ಕೊಂಡಂತೆ ಮದುವೆ ಶುಭ ದಿನದಂದೇ ಮನೆಮಂದಿಯೆಲ್ಲ ನೇತ್ರದಾನಕ್ಕೆ ಸಹಿ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಮದುವೆ ಶುಭಗಳಿಗೆಯಲ್ಲಿ ಸಮಾಜಮುಖಿ ಕಾರ್ಯ ಸಾಕ್ಷಿಯಾಗುವ ಮೂಲಕ ಸಂಭ್ರಮ-ಸಡಗರದ ಮದುವೆಯನ್ನು ಹೀಗೂ ಮಾಡಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ. ಇಂಥದೊದು ಮಾದರಿ ಮದುವೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಬಳ್ಳಾರಿ ಜಿಲ್ಲೆ ಹೊಸಪೇಟೆ ಪಟ್ಟಣದಲ್ಲಿ. ನಗರದ ಶ್ರೀ ವೆಂಕಟೇಶ್ವರ ಕಲ್ಯಾಣಮಂದಿರದಲ್ಲಿ ಜರುಗಿದ ಮದುವೆ ಕಾರ್ಯದಲ್ಲಿ ವಧು-ವರ ಸೇರಿ ಮನೆಮಂದಿಯೆಲ್ಲ ನೇತ್ರದಾನ ವಾಗ್ದಾನ ಮಾಡಿದರು.

ಹಂಪಿ ಬಳಿಯ ಕಡ್ಡಿರಾಂಪುರ ನಿವಾಸಿ ರೈತ ಕುರುಬರ ಕೊಟ್ರಬಸಪ್ಪ ತಮ್ಮ ಮನೆಯ ಅವಿಭಕ್ತ ಕುಟುಂಬದ 28 ಜನ ಸದಸ್ಯರೆಲ್ಲ ತಮ್ಮ ನೇತ್ರಗಳನ್ನು ಮದುವೆ ಶುಭದಿನದಂದೇ ಸಹಿ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಮನೆಯ ಯಜಮಾನ ಕೊಟ್ರಬಸಪ್ಪ ಕಿರಿಯ ಮಗ ಆನಂದ್ ಕುಮಾರ್ ಮದುವೆ ದಿನದಂದು ತಮ್ಮ ಕಣ್ಣುದಾನ ಅರ್ಜಿಗೆ ಸಹಿ ಹಾಕಿದರು.

ಕೇವಲ ವರ ಆನಂದ್ ಮಾತ್ರವಲ್ಲ ವಧು ಡಿ ಆರತಿ ಅವರ ತಂದೆತಾಯಿ ಸಹ ನೇತ್ರದಾನ ವಾಗ್ದಾನಕ್ಕೆ ಮುಂದಾದರು. ಮಧುಮಕ್ಕಳು ಮದುವೆ ಕಾರ್ಯ ಮುಗಿದು ವೇದಿಕೆಗೆ ಬಂದ ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ನೇತ್ರದಾನ ಅರ್ಜಿಗೆ ಸಹಿ ಹಾಕಿ ತಮ್ಮಿಂದ ಒಂದೊಳ್ಳೆ ಕೆಲಸ ಮಾಡಿದ್ದೇವೆ ಎಂಬ ಖುಷಿಯಲ್ಲಿದ್ದರು ನೂತನ ಜೋಡಿ.

ಅಂದಹಾಗೆ ಕೊಟ್ರಬಸಪ್ಪ ಕುಟುಂಬದವರು ಪಕ್ಕಾ ನಟ ಡಾ ರಾಜಕುಮಾರ್ ಅಭಿಮಾನಿಗಳು. ಅಣ್ಣಾವ್ರು ನುಡಿದಂತೆ ನಡೆದರು ಎನ್ನುವ ಕಾರಣಕ್ಕೆ ಅವರನ್ನು ಆದರ್ಶವಾಗಿ ತೆಗೆದುಕೊಂಡವರು. ಡಾ ರಾಜ್ ಮೃತರಾದಾಗ ಅವರ ಕಣ್ಣುಗಳನ್ನು ನೇತ್ರದಾನ ಮಾಡಿದ್ದರು. ಇದು ಮಕ್ಕಳಾದ ಪ್ರಶಾಂತ್, ಆನಂದ್ ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.

ಹಿರಿಮಗ ಪ್ರಶಾಂತ್ ಮದುವೆ ಸಂದರ್ಭದಲ್ಲಿ ನೇತ್ರದಾನ ವಾಗ್ದಾನ ಮಾಡಬೇಕಿತ್ತು. ಆದರೆ ಕಾರಣಾಂತದಿಂದ ಆಗಿದ್ದಿಲ್ಲ. ಇದೀಗ ಕಿರಿಯ ಮಗ ಆನಂದ್ ಕುಮಾರ ಮದುವೆ ಸಂದರ್ಭದಲ್ಲಿ 98 ವರುಷದ ಮುಪ್ಪು ಅಜ್ಜಿಯಿಂದ ಹಿಡಿದು ಮನೆಮಂದಿಯೆಲ್ಲ ನಿರ್ಧರಿಸಿದ್ದರು.
Loading...

ಬಾಳ ಸಂಗಾತಿಯಾದ ಆರತಿ ಅವರನ್ನು ಮದುವೆ ದಿನ ನೇತ್ರದಾನಕ್ಕೆ ಸಹಿ ಹಾಕಬೇಕು ಎಂದು ಮಧುಮಗ ಆನಂದ್ ಕೇಳಿಕೊಂಡಾಗ ಖುಷಿಯಿಂದಲೇ ಒಪ್ಪಿಕೊಂಡರು. ಕೇವಲ ನೇತ್ರದಾನ ಮಾತ್ರವಲ್ಲ ಮದುವೆ ದಿನ ಬಂದು ನೂತನ ಜೋಡಿಗಳಿಗೆ ಹರಿಸಿ ಹಾರೈಸಿದವರಿಗೆಲ್ಲ ಸಸಿಗಳನ್ನು ನೀಡಿ ಪರಿಸರ ಜಾಗೃತಿ ಮೂಡಿಸಿದರು.

ಮೂಲತಃ ಕೃಷಿಕರಾಗಿರುವ ಕೊಟ್ರಬಸಪ್ಪ ಹಂಪಿಯ ಕಡ್ಡಿರಾಂಪುರದಲ್ಲಿ ತನ್ನಿಬ್ಬರು ಮಕ್ಕಳಾದ ಪ್ರಶಾಂತ್, ಕಿರಿಮಗ ಆನಂದ್ ಕುಮಾರ್ ರೈತರಾಗಿ ಮುಂದುವರೆದಿದ್ದಾರೆ. ಬಂಗಾರದ ಮನುಷ್ಯ ಸಿನಿಮಾದ ಸಂದೇಶದಂತಯೇ ವ್ಯವಸಾಯದಲ್ಲಿಯೇ ಒಂದೊಳ್ಳೆ ಬದುಕು ಕಾಣುತ್ತಿರುವ ಕೊಟ್ರಬಸಪ್ಪ ಕುಟುಂಬ ತಮ್ಮ ಕಿರಿ ಮಗನ ಮದುವೆಯಲ್ಲಿ ನೇತ್ರದಾನ ವಾಗ್ದಾನ ಮಾಡಿ, ಸಸಿಗಳನ್ನು ಕೊಡುವ ಮೂಲಕ ಒಂದೊಳ್ಳೆ ಮಾದರಿ ಮದುವೆಗೆ ಸಾಕ್ಷಿಯಾದರು.

 
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ