5ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ, ಇದುವರಗೆ ಮುಷ್ಕರ ಬಗ್ಗುಬಡಿಯಲು ಸರ್ಕಾರ ಮಾಡಿದ ತಂತ್ರಗಳೇನು ಗೊತ್ತಾ?

ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಇಂದು ಕೂಡಾ ಕರ್ತವ್ಯಕ್ಕೆ ಗೈರಾಗಿದ್ದಾರೆ. ಸರ್ಕಾರ ಎಷ್ಟೇ ಮನವೊಲಿಸುವ ಪ್ರಯತ್ನ ನಡೆಸಿದ್ರು ಪ್ರಯೋಜನವಾಗಿಲ್ಲ. ಆರನೇ ವೇತನ ಆಯೋಗ ಜಾರಿಯಾಗುವವರೆಗೆ ಮುಷ್ಕರ ಕೈಬಿಡಲ್ಲ‌ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಆದರೆ ಸರ್ಕಾರ ಕಾನೂನಿನ ಬಳಕೆ ಮಾಡಿ ನೌಕರರಿಗೆ ಸೆಡ್ಡು ಹೊಡೆಯಲು ವಿವಿಧ ತಂತ್ರಗಳನ್ನು ರೂಪಿಸಿದೆ.

ಸಾರಿಗೆ ನೌಕರರ ಪ್ರತಿಭಟನೆ.

ಸಾರಿಗೆ ನೌಕರರ ಪ್ರತಿಭಟನೆ.

  • Share this:
ಬೆಂಗಳೂರು (ಏಪ್ರಿಲ್ 11): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ರಾಜ್ಯವ್ಯಾಪಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇದೇ ಮೊದಲ ಬಾರಿಗೆ ಐದು ದಿನಗಳವರಗೆ ಸಾರಿಗೆ ಮುಷ್ಕರ ಮುಂದುವರೆದಿದೆ. ಕಳೆದ ಡಿಸೆಂಬರ್​ನಲ್ಲಿಯೂ ಸಾರಿಗೆ ನೌಕರರು ಮುಷ್ಕರವನ್ನು ಮಾಡಿದ್ದು, ಅದು ನಾಲ್ಕು ದಿನಗಳಿಗೆ ಮುಗಿದಿತ್ತು.

ಸಾರಿಗೆ ಮುಷ್ಕರ ಮುಂದುವರೆದ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಕೂಡಾ ಖಾಸಗಿ ಬಸ್​ಗಳ ದರ್ಬಾರ್ ಜೋರಾಗಿದೆ. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಎರಡೂ ಬಸ್ ನಿಲ್ದಾಣಗಳಲ್ಲಿ ಮುಂಜಾನೆಯಿಂದಲೇ ಖಾಸಗಿ ಬಸ್ಸುಗಳ ಓಡಾಟ ಆರಂಭವಾಗಿದೆ. ಬೆಳಗ್ಗೆಯೇ ಮೆಜೆಸ್ಟಿಕ್ ನಿಲ್ದಾಣದಿಂದ ವಿಮಾನ ನಿಲ್ದಾಣದೆಡೆಗೆ ಎರಡು ಬಸ್ಸುಗಳು ತೆರಳಿವೆ. ಸಾರ್ವಜನಿಕರಿಗೆ ಅನಾನುಕೂಲವಾಗದಿರಲಿ ಎಂದು ರಾಜ್ಯ ಸರ್ಕಾರ ಎಲ್ಲಾ ಪ್ರಮುಖ ರೂಟ್​ಗಳಲ್ಲಿ ಖಾಸಗಿ ಬಸ್​ಗಳ ಓಡಾಟಕ್ಕೆ ಅನುಮತಿ ನೀಡಿದ್ದು ಮುಷ್ಕರ ಮುಗಿಯುವವರೆಗೂ ಖಾಸಗಿ ಬಸ್​ಗಳ ಸಂಚಾರ ಮುಂದುವರೆಯಲಿದೆ.

ಇನ್ನು ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಇಂದು ಕೂಡಾ ಕರ್ತವ್ಯಕ್ಕೆ ಗೈರಾಗಿದ್ದಾರೆ. ಸರ್ಕಾರ ಎಷ್ಟೇ ಮನವೊಲಿಸುವ ಪ್ರಯತ್ನ ನಡೆಸಿದ್ರು ಪ್ರಯೋಜನವಾಗಿಲ್ಲ. ಆರನೇ ವೇತನ ಆಯೋಗ ಜಾರಿಯಾಗುವವರೆಗೆ ಮುಷ್ಕರ ಕೈಬಿಡಲ್ಲ‌ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಆದರೆ ಸರ್ಕಾರ ಕಾನೂನಿನ ಬಳಕೆ ಮಾಡಿ ನೌಕರರಿಗೆ ಸೆಡ್ಡು ಹೊಡೆಯಲು ವಿವಿಧ ತಂತ್ರಗಳನ್ನು ರೂಪಿಸಿದೆ.

ಮುಷ್ಕರನಿರತ ಸಿಬ್ಬಂದಿಯ ಜಾಗಕ್ಕೆ ತರಬೇತಿ ನಿರತ ಮತ್ತು ಪ್ರೊಬೆಷನರಿ ನೌಕರರನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ಬೆಂಬಲ ಕೊಡದ ಅನೇಕ ಪ್ರೊಬೆಷನರಿ ನೌಕರರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಏಪ್ರಿಲ್ 8 ರಂದು 96 ತರಬೇತಿ ನೌಕರರನ್ನ ವಜಾಗೊಳಿಸಿತ್ತು. ಏಪ್ರಿಲ್ 9 ರಂದು 60 ಜನ ತರಬೇತಿ ನೌಕರರು ಮತ್ತು 60 ಜನ ಪ್ರೊಬೆಷನರಿ ನೌಕರರು ಸೇರಿ 120 ಜನರನ್ನ ವಜಾ ಮಾಡಿತ್ತು. ನಿನ್ನೆ ಮತ್ತೆ 118 ಜನ ತರಬೇತಿ ಹಾಗೂ ಪರಿವೀಕ್ಷಣಾ  ನೌಕರರನ್ನು ವಜಾ ಮಾಡಲಾಗಿದೆ. ಇರುವ 1484 ನೌಕರರಲ್ಲಿ ಒಟ್ಟು 334 ತರಬೇತಿ ನೌಕರರನ್ನ ಬಿಎಂಟಿಸಿ ವಜಾ ಮಾಡಿದೆ.

ಇವರೆಲ್ಲರಿಗೆ ಗೈರುಹಾಜರಾತಿ ಬಗ್ಗೆ ಕಾರಣ ನೀಡಿ ಈ ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಏಪ್ರಿಲ್ 7 ರಂದು ಬಿಎಂಟಿಸಿ ನೋಟೀಸ್ ನೀಡಿತ್ತು. ನೋಟೀಸ್ ನೀಡಿದ್ರು ಹಾಜರಾಗದ ಟ್ರೈನಿ ಹಾಗೂ ಪ್ರೋಬೇಷನರಿ ಚಾಲಕರನ್ನ ಕೆಲಸದಿಂದ ವಜಾಗೊಳಿಸಿ ಆದೇಶಿಸಿತ್ತು.

ಇನ್ನು ತರಬೇತಿ ನೌಕರರ ಜೊತೆಗೆ ನೌಕರರಿಗೂ ಬಿಎಂಟಿಸಿ ಶಾಕ್ ನೀಡಿದೆ. 55 ವರ್ಷ ಮೇಲ್ಪಟ್ಟವರು ಸಂಸ್ಥೆಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸೋಮವಾರ ಡೆಡ್ ಲೈನ್ ನೀಡಲಾಗಿದೆ. ಕಾನೂನು ಅಸ್ತ್ರ ಪ್ರಯೋಗಿಸಿ 55 ವರ್ಷ ಮೇಲ್ಪಟ್ಟವರನ್ನು ಗುರಿಯಾಗಿಸಿದ ಬಿಎಂಟಿಸಿ 55 ವರ್ಷ ಮೇಲ್ಪಟ್ಟ  ಬಿಎಂಟಿಸಿ ನೌಕರರಿಗೆ ವೈದ್ಯಕೀಯ ಪ್ರಮಾಣ ಪತ್ರ  ಕಡ್ಡಾಯಗೊಳಿಸಿದೆ. ಸೋಮವಾರದೊಳಗೆ ವೈದ್ಯಕೀಯ ಮತ್ತು ದೇಹದಾರ್ಡ್ಯತೆ ಪ್ರಮಾಣ ಪತ್ರವನ್ನ ಸಂಸ್ಥೆಗೆ ನೀಡಬೇಕು. ಇಲ್ಲದಿದ್ದರೆ ನಿವೃತ್ತಿ ನೀಡುವುದಾಗಿ ಮತ್ತೊಂದು ಶಾಕ್ ನೀಡಿದೆ.

ಏಪ್ರಿಲ್ 1 ನೇ ತಾರೀಖಿಗೆ ಬಿಎಂಟಿಸಿ 55 ವರ್ಷ ತುಂಬಿದ 1772 ಜನರ ಲಿಸ್ಟ್ ಬಿಡುಗಡೆ ಮಾಡಿದೆ. ಏಪ್ರಿಲ್ 12 ರೊಳಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡದಿದ್ರೆ ಅವರಿಗೆ ನಿವೃತ್ತಿ ಘೋಷಣೆ ಮಾಡಲು ತೀರ್ಮಾನ ಮಾಡಲಾಗಿದೆ.

ಇದಲ್ಲದೆ ಕೆಎಸ್ಸಾರ್ಟಿಸಿ ಕೂಡಾ ಮುಷ್ಕರದಲ್ಲಿ ಭಾಗವಹಿಸುವಂತೆ ಪ್ರಚೋದಿಸಿದವನ್ನ ಬೇರೆ ಬೇರೆ ಜಿಲ್ಲೆಗಳಿಗೆ ಎತ್ತಂಗಡಿ ಮಾಡಿದೆ. ಏಪ್ರಿಲ್ 9 ರಂದು 293, ಏಪ್ರಿಲ್ 10ರಂದು 73 ಚಾಲಕರು ಮತ್ತು ನಿರ್ವಾಹಕರು, 11 ತಾಂತ್ರಿಕ ಸಿಬ್ಬಂದಿ ಹಾಗೂ 4 ಸಂಚಾರ ಮೇಲ್ವಿಚಾರಕ ಸಿಬ್ಬಂದಿ ಸೇರಿದಂತೆ ಒಟ್ಟು 88 ಜನರನ್ನು ವಿವಿಧ ಜಿಲ್ಲೆಗಳಿಗೆ ಟ್ರಾನ್ಸ್​ಫರ್ ಮಾಡಲಾಗಿದೆ.

ಕಳೆದ 5 ದಿನಗಳಿಂದ ಮುಷ್ಕರದಲ್ಲಿ ಭಾಗಿಯಾದ ಡ್ರೈವರ್ ಮತ್ತು ಕಂಡೆಕ್ಟರ್ ಗಳಿಗೆ ವಿವಿಧ ನಿಗಮಗಳು  ಈ ತಿಂಗಳ ಸಂಬಳ ನೀಡದಿರಲು ನಿರ್ಧರಿಸಿವೆ. ಯುಗಾದಿ ಹಬ್ಬವೂ ಹತ್ತಿರ ಬರುತ್ತಿರುವುದರಿಂದ ನೌಕರರ ಕುಟುಂಬಗಳು ಹಬ್ಬ ಆಚರಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಕಳೆದ ತಿಂಗಳು ನಾಲ್ಲೂ ನಿಗಮಗಳ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ 7 ನೇ ತಾರೀಖು ಸಂಬಳವಾಗಿತ್ತು. ನೌಕರರು ಮುಷ್ಕರದಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ 10 ನೇ ತಾರೀಖಾದ್ರೂ ಸಂಬಳ‌ ನೀಡಿಲ್ಲ. ನಾಲ್ಕು ನಿಗಮಗಳಿಂದ ಒಟ್ಟು 1 ಲಕ್ಷದ 30 ಸಾವಿರ ನೌಕರರಿದ್ದಾರೆ. ಇಲ್ಲಿಯವರೆಗೆ ಕಂಡಕ್ಟರ್ ಮತ್ತು ಡ್ರೈವರ್ ಗಳಿಗೆ ಮಾತ್ರ ಸಂಬಳವಾಗಿಲ್ಲ, ಅಧಿಕಾರಿಗಳು, ಭದ್ರತಾ ಮತ್ತು ಕಚೇರಿ ಸಿಬ್ಬಂದಿ, ಮೆಕಾನಿಕಲ್ ಸ್ಟಾಫ್ ಗೆ ಒಂದನೇ ತಾರೀಖು ಸಂಬಳ ಆಗಿದೆ.

ರಾಜ್ಯ ಸರ್ಕಾರ ಈ ಎಲ್ಲಾ ತಂತ್ರಗಳ ಪ್ರಯೋಗ ಮಾಡಿ ನೌಕರರ ಮೇಳೆ ಒತ್ತಡ ಹೇರುತ್ತಿದೆ. ಅಲ್ಲಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಹೆದರಿಕೊಂಡೇ ಕತ್ಯವ್ಯಕ್ಕೆ ಹಾಜರಾಗುತ್ತಿದ್ದರೂ ಅದು ಸಾಲುತ್ತಿಲ್ಲ. ಇಷ್ಟೆಲ್ಲಾ ಆದ ನಂತರ ಮುಷ್ಕರ ಎಷ್ಟು ದಿನಗಳವರಗೆ ಮುಂದುವರೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Published by:Soumya KN
First published: