ತಂದೆಯ ಹಳೇ ಕ್ಷೇತ್ರದಲ್ಲಿ ಪುತ್ರಿಯ ಹೊಸ ಹವಾ; ಸೌಮ್ಯಾ ರೆಡ್ಡಿ ಗೆಲುವಿನೊಂದಿಗೆ ಕಾಂಗ್ರೆಸ್​ ಶಾಸಕರ ಸಂಖ್ಯೆ 79


Updated:June 13, 2018, 3:03 PM IST
ತಂದೆಯ ಹಳೇ ಕ್ಷೇತ್ರದಲ್ಲಿ ಪುತ್ರಿಯ ಹೊಸ ಹವಾ; ಸೌಮ್ಯಾ ರೆಡ್ಡಿ ಗೆಲುವಿನೊಂದಿಗೆ ಕಾಂಗ್ರೆಸ್​ ಶಾಸಕರ ಸಂಖ್ಯೆ 79

Updated: June 13, 2018, 3:03 PM IST
- ಶರತ್​ ಶರ್ಮ ಕಲಗಾರು, ನ್ಯೂಸ್​ 18 ಕನ್ನಡ

ಬೆಂಗಳೂರು, (ಜೂ 13): ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ಬಿಜೆಪಿಯ ಪ್ರಹ್ಲಾದ್​ ಬಾಬು ಅವರನ್ನು 2,886 ಮತಗಳಿಂದ ಮಣಿಸಿದ್ದಾರೆ. ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಸೌಮ್ಯಾ ರೆಡ್ಡಿ, ಕಡೆಯ ಹಂತದ ಮತ ಎಣಿಕೆಯಲ್ಲಿ ಕೊಂಚ ಮಟ್ಟಿನ ಇಳಿತವನ್ನು ಕಂಡರಾದರೂ, ಅಂತಿಮವಾಗಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್​ನ ಶಾಸಕರ ಸಂಖ್ಯೆ 80ಕ್ಕೇರಿದೆ. ರಾಜರಾಜೇಶ್ವರಿ ನಗರ ಚುನಾವಣೆಯ ಫಲಿತಾಂಶದ ನಂತರ 79ಕ್ಕೇರಿದ್ದ ಸಂಖ್ಯೆಯೀಗ ಇನ್ನೊಂದು ಸ್ಥಾನ ಮೇಲಕ್ಕೇರಿದೆ.

ಅಂದು ರೆಡ್ಡಿ VS ಡಾನ್​ ಜಯರಾಜ್​:

ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ತಂದೆ ರಾಮಲಿಂಗಾ ರೆಡ್ಡಿಯವರು ಸಹ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿ ಈ ಹಿಂದೆ ಗೆದ್ದಿದ್ದರು. 1989ರಲ್ಲಿ ಕಾಂಗ್ರೆಸ್​ನ ಲಕ್ಕಸಂದ್ರ ಕಾರ್ಪೊರೇಟರ್​ ಆಗಿದ್ದ ರಾಮಲಿಂಗಾರೆಡ್ಡಿ ವಿಧಾನಸಭೆ ಮೆಟ್ಟಿಲೇರುವ ಇಂಗಿತ ಹೊಂದಿದ್ದರು. ಅದಕ್ಕೆ ಕಾಂಗ್ರೆಸ್​ ಪಕ್ಷ ಕೂಡ ಸಮ್ಮತಿಸಿ ಜಯನಗರ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್​ ನೀಡಿತ್ತು. ರಾಮಲಿಂಗಾರೆಡ್ಡಿ ವಿರುದ್ಧ ಮೂರು ಘಟಾನುಘಟಿ ಅಭ್ಯರ್ಥಿಗಳು ನಿಂತಿದ್ದರು.

ಬಿಜೆಪಿ, ಜೆಡಿಎಸ್​ ಮತ್ತು ಸ್ವತಂತ್ರ್ಯ ಅಭ್ಯರ್ಥಿಯಾಗಿ ಭೂಗತ ಲೋಕದ ನಂಟು ಹೊಂದಿದ್ದ ನಟೋರಿಯಸ್​ ರೌಡಿ ಶೀಟರ್​, ಬೆಂಗಳೂರಿನ ಅಘೋಷಿತ ಡಾನ್​ ಜಯರಾಜ್​ ನಿಂತಿದ್ದರು. ಜೈಲಿನಲ್ಲಿದ್ದ ಜಯರಾಜ್​ ಚುನಾವಣಾ ಪ್ರಚಾರಕ್ಕೋಸ್ಕರ 15 ದಿನಗಳ ಪೆರೋಲ್​ ಪಡೆದು ಆಚೆ ಬಂದಿದ್ದರು. ರಾಮಲಿಂಗಾರೆಡ್ಡಿ ಯುವ ಕಾಂಗ್ರೆಸ್​ ಮುಖಂಡರಾಗಿ ಗುರುತಿಸಿಕೊಂಡವರು. ಆದರೆ ಜಯರಾಜ್​ರನ್ನು ಎದುರು ಹಾಕಿಕೊಳ್ಳುವುದು ಹುಡುಗಾಟದ ಮಾತಾಗಿರಲಿಲ್ಲ. ಒಂದೆಡೆ ರೆಡ್ಡಿ ತಮ್ಮ ಪ್ರಚಾರ ಕಾರ್ಯವನ್ನು ಮುಂದುವರೆಸಿದ್ದರು. ಆದರೆ ಜಯರಾಜ್​ ಪೆರೋಲ್​ ಮೇಲೆ ಆಚೆ ಬಂದ ನಂತರ ಕಾಂಗ್ರೆಸ್​ ಪ್ರಚಾರ ಕೊಂಚ ಮಂಕಾಗಿತ್ತು. ಜಯರಾಜ್​ ಸಾರ್ವಜನಿಕರಲ್ಲಿ ಇಟ್ಟಿದ್ದ ಭಯವೂ ಅದಕ್ಕೆ ಕಾರಣ ಎನ್ನಬಹುದು.

ಚುನಾವಣೆಯಲ್ಲಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿ, ಮಂತ್ರಿಯಾಗಬೇಕು ಎಂಬ ಆಸೆ ಜಯರಾಜ್​ಗಿತ್ತು. ಜಯರಾಜ್​ ಕನಸು ಕೈಗೂಡುವ ಸಾಧ್ಯತೆಯೂ ಇತ್ತು. ಆದರೆ ಅಶೋಕ ಪಿಲ್ಲರ್​ ಬಳಿ ಎದುರಾಳಿ ತಂಡ ಜಯರಾಜ್​ರನ್ನು ಹತ್ಯೆ ಮಾಡಿತ್ತು. ಇದರ ಪರಿಣಾಮವಾಗಿ ಚುನಾವಣಾ ಆಯೋಗ, ಚುನಾವಣೆಯನ್ನು ಮುಂದೂಡಿತು. ಜಯರಾಜ್​ ಇಲ್ಲದ ಚುನಾವಣೆಯಲ್ಲಿ, ರಾಮಲಿಂಗಾರೆಡ್ಡಿ 17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಅದಾದ ನಂತರ ರೆಡ್ಡಿ ಎಂದೂ ರಾಮಲಿಂಗಾ ರೆಡ್ಡಿ ಎಂದೂ ಸೋಲು ಕಾಣಲಿಲ್ಲ. 2008ರಲ್ಲಿ ಜಯನಗರ ಕ್ಷೇತ್ರದಿಂದ ಬಿಟಿಎಂ ಲೇಔಟ್​ ಕ್ಷೇತ್ರಕ್ಕೆ ರೆಡ್ಡಿ ಹೋದರು.

ಈಗ ರೆಡ್ಡಿ ಪುತ್ರಿ ಸೌಮ್ಯಾ ತಂದೆಯ ಹಳೇ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಅಪ್ಪ-ಮಗಳು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಒಂದು ಕಾಲದಲ್ಲಿ ತಂದೆ, ಬೆಂಗಳೂರಿನ ಭೂಗತ ಜಗತ್ತನ್ನು ಆಳುತ್ತಿದ್ದ ಜಯರಾಜ್​ ಎದುರಾಗಿ ನಿಂತು ಚುನಾವಣೆ ಎದುರಿಸಿದ್ದರು. ಈಗ ಪುತ್ರಿ ದಿವಂಗತ ಬಿಜೆಪಿ ಶಾಸಕ ವಿಜಯ್​ ಕುಮಾರ್​ ಸಹೋದರ ಪ್ರಹ್ಲಾದ್​ ಬಾಬು ಮತ್ತು ಸ್ವತಂತ್ರ್ಯ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿಯವರ ಮುಂದೆ ಗೆಲುವು ಸಾಧಿಸಿದ್ದಾರೆ.
Loading...

ಸೌಮ್ಯಾ ರೆಡ್ಡಿ ಮತ್ತು ಪ್ರಹ್ಲಾದ್​ ಬಾಬು ಇಬ್ಬರೂ ಮೊದಲ ಬಾರಿ ಚುನಾವಣೆ ಎದುರಿಸಿದ್ದಾರೆ. ಆದರೆ ರವಿಕೃಷ್ಣಾ ರೆಡ್ಡಿ ಈ ಹಿಂದೆ ಬಿಟಿಎಂ ಲೇಔಟ್​ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಸೌಮ್ಯಾ ರೆಡ್ಡಿ ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದಾರೆ. ಈ ಬಾರಿ ಜಯನಗರದಲ್ಲಿ ಒಟ್ಟು ಶೇಕಡ 55 ಮತದಾನವಾಗಿತ್ತು. ಚುನಾವಣಾ ಪೂರ್ವ ಲೆಕ್ಕಾಚಾರದಂತೆಯೇ, ಮುಸ್ಲಿಂ ಸಮುದಾಯ, ರೆಡ್ಡಿ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಮತದಾರರು ಕಾಂಗ್ರೆಸ್​ ಕೈಹಿಡಿದಿದ್ದಾರೆ.

ಸಮ್ಮಿಶ್ರ ಸರ್ಕಾರದ ಶಾಸಕ ಸಂಖ್ಯೆ 119:

ಸೌಮ್ಯಾರೆಡ್ಡಿ ಗೆಲುವಿನ ಮೂಲಕ ಸಮ್ಮಿಶ್ರ ಸರ್ಕಾರದ ಸಂಖ್ಯಾ ಬಲ 118ಕ್ಕೇರಿದೆ. ಕಾಂಗ್ರೆಸ್​ ಒಟ್ಟೂ 79, ಜೆಡಿಎಸ್​ 37 ಮತ್ತು ಬಿಎಸ್​ಪಿ 1, ಪಕ್ಷೇತರ ಅಭ್ಯರ್ಥಿ 1 ಒಟ್ಟೂ ಸೇರಿ 118 ಆಗಿದೆ. ರಾಮನಗರ ಕ್ಷೇತ್ರದ ಮರುಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಜೆಡಿಎಸ್​ ಭದ್ರಕೋಟೆ ಅನಿಸಿಕೊಂಡಿರುವ ಕಾರಣ ಅಲ್ಲಿ ಜೆಡಿಎಸ್​ ಮತ್ತೆ ಗೆಲ್ಲುವ ಸಾಧ್ಯತೆಯಿದೆ. ರಾಮನಗರದಲ್ಲೂ ಜತೆಗೆ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರ ಅಕಾಲಿಕ ಮರಣದಿಂದ ಮರು ಚುನಾವಣೆ ನಡೆಯಲಿದೆ. ಅಲ್ಲಿಯೂ ಕಾಂಗ್ರೆಸ್​ ಗೆದ್ದರೆ, ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ 120 ಆಗಲಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 122 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೇರಿತ್ತು. ಈಗ ಸಮ್ಮಿಶ್ರ ಸರ್ಕಾರದ ಬಲಾಬಲ ಕೂಡ ಕಳೆದ ಬಾರಿ ಫಲಿತಾಂಶದ ಹತ್ತಿರ ಬಂದಿದೆ. ಸರ್ಕಾರ ಸುಸ್ಥಿರವಾಗಿರಲು ಬೇಕಾದಷ್ಟು ಶಾಸಕರ ಸಂಖ್ಯೆ ಈಗ ಕಾಂಗ್ರೆಸ್​ - ಜೆಡಿಎಸ್​ ಬಳಿ ಇದ್ದು, ಸಚಿವ ಸ್ಥಾನದ ಕಿತ್ತಾಟ ಬದಿಗಿಟ್ಟು ಕೆಲಸ ಆರಂಭಿಸುತ್ತಾರ ಎಂಬುದನ್ನು ಕಾದು ನೋಡಬೇಕು.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...