news18-kannada Updated:October 20, 2020, 8:25 PM IST
ಬಣಗುಡುತ್ತಿರುವ ಯುವ ದಸರಾ ನಡೆಯುತ್ತಿದ್ದ ಸ್ಥಳ
ಮೈಸೂರು (ಅ.20): ಕೊರೋನಾ ಹಿನ್ನಲೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಸೋಂಕಿನ ಮುನ್ನೆಚ್ಚರಿಕೆ ಕ್ರಮವಹಿಸಿರುವ ಸರ್ಕಾರ ಅನೇಕ ಕಾರ್ಯಕ್ರಮಗಳಿಗೆ ತಡೆ ನೀಡಿದೆ. ಇದರಿಂದಾಗಿ ಈ ಬಾರಿ ದಸರಾ ಒಂದು ರೀತಿ ಬಣಗುಡುತ್ತಿದೆ. ಸೌಂದರ್ಯದ ರಾಶಿ, ಜೋಶ್ ತುಂಬಿದ್ದ ಸ್ಥಳಗಳು ಹಾಗೂ ವೆರೈಟಿ ತಿನಿಸು ಸಿಗಬೇಕಿದ್ದ ಜಾಗವೆಲ್ಲ ಇದೀಗಾ ಖಾಲಿ ಖಾಲಿಯಾಗಿದೆ. ಅರಮನೆಗೆ ಮಾತ್ರ ಈ ಬಾರಿ ದಸರಾ ಸೀಮಿತವಾಗಿರುವುದರಿಂದ ನಗರದಲ್ಲಿ ಸಂಭ್ರಮದ ವಾತಾವರಣ ಕಣ್ಮರೆಯದಂತೆ ಇದೆ. ಅದರಲ್ಲೂ ದಸರೆಯ ಪ್ರಮುಖ ಆಕರ್ಷಣೆಗಳಾಗಿದ್ದ, ಯುವದಸರಾ, ಚಿಣ್ಣರ ದಸರಾ, ಕೃಷಿ ದಸರಾದಂತಹ ಕಾರ್ಯಕ್ರಮದ ಸ್ಥಳಗಳು ಬಣಗುಡುತ್ತಿದ್ದು, ದಸರೆ ಸಂಭ್ರಮ ಇಲ್ಲವೇನು ಎಂಬಂತಹ ಭಾವನೆ ಮೂಡಿಸುತ್ತಿರುವುದು ಸುಳ್ಳಲ್ಲ. ಇನ್ನೂ ಎರಡು ಗಂಟೆಗಳ ಮಾತ್ರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜನರಿಲ್ಲದೇ ಖಾಲಿ ಖಾಲಿ ಕಂಡು ಬರುತ್ತಿದೆ.
ಯುವ ದಸರದ ಮೆರುಗಿಲ್ಲದಸರಾ ಪ್ರಮುಖ ಆಕರ್ಷಣೆಯೆಂದರೆ ಯುವದಸರಾ. ಸಂಗೀತ ರಸ ಸಂಜೆ ಜೊತೆ ಸಿನಿ ನಟರ ಮೆರಗು ನೀಡುತ್ತಿದ್ದ ಯುವ ದಸರಾವನ್ನು ಈ ಬಾರಿ ರದ್ದು ಮಾಡಲಾಗಿದೆ. ಅತಿ ಹೆಚ್ಚು ಜನ ಸೇರುತ್ತಿದ್ದ ಈ ಕಾರ್ಯಕ್ರಮ ಎಲ್ಲಾರ ನೆಚ್ಚಿನ ಕಾರ್ಯಕ್ರಮ ಕೂಡ. ಯುವ ದಸರಾದಲ್ಲಿ ಭಾಗಿಯಾಗುವ ನಟ-ನಟಿಯರು, ಸಂಗೀತ ದಿಗ್ಗಜ್ಜರ ನೋಡಲೇಂದೆ ಅನೇಕರು ಸುತ್ತಮುತ್ತಲ ಊರುಗಳಿಂದಲೂ ಬರುತ್ತಿದ್ದರು. ಆದರೆ. ಈ ಬಾರಿ ಯುವ ದಸರಾ ಕಾರ್ಯಕ್ರಮ ರದ್ದಾಗಿ ಯುವ ಪ್ರೇಕ್ಷಕರಿಗೆ ಸಾಕಷ್ಟು ಬೇಸರ ಪಡುವಂತೆ ಆಗಿದೆ. .
ಭೋಜನ ಪ್ರಿಯರಿಗೆ ನಿರಾಸೆ
ನಾಲಿಗೆ ರುಚಿ ಹೆಚ್ಚಿಸುವ ಆಹಾರ ಮೇಳವಂತು ತಿಂಡಿ ಪ್ರಿಯರಿಗೆ ಸಾಕಷ್ಟು ರೀತಿಯಲ್ಲಿ ಖುಷಿ ಕೊಡುತ್ತಿತ್ತು. ಚಾಮರಾಜನಗರದಿಂದ ಹಿಡಿದು ಬೆಳಗಾವಿವರೆಗಿನ ಆಯಾ ಜಿಲ್ಲೆಯ ವೆರೈಟಿ ತಿಂಡಿಗಳು ಆಹಾರ ಪ್ರಿಯರಿಗೆ ಬಾಯಲ್ಲಿ ನೀರೂರುವಂತೆ ಮಾಡುತ್ತಿತ್ತು. ಇದರ ಜೊತೆಗೆ ವಿಶೇಷವಾದ ಬಂಬೂ ಬಿರಿಯಾನಿ ಸೇರಿ ಮೇಲುಕೋಟೆ ಪುಳಿಯೋಗರೆ ಸವಿಯೋದಕ್ಕೆ ಅಂತಾನೆ ಆಹಾರ ಮೇಳಕ್ಕೆ ಸಾಕಷ್ಟು ಜನರು ಬರುತ್ತಿದ್ದರು ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಆಹಾರ ಮೇಳ ರದ್ದಾಗಿದ್ದು, ಆ ಸ್ಥಳವೂ ಈ ಬಾರಿ ಖಾಲಿಯಾಗಿದೆ. ಅಲ್ಲದೆ ವಿಶೇಷ ಖಾದ್ಯ ಸವಿಯುವ ಅವಕಾಶ ಮಿಸ್ಸಾಯ್ತು ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಆಹಾರ ಪ್ರಿಯರು.
ಜಟ್ಟಿ ಕಾಳಗವಿಲ್ಲ
ದಸರಾ ಉದ್ಘಾಟನೆಯಾದ ಮೊದಲ ದಿನದಿಂದಲೇ ಕುಸ್ತಿ ಕಾಳಗ ಕಳೆಗಟ್ಟಬೇಕಿತ್ತು. ತೊಡೆ ತಟ್ಟಿ ಅಖಾಡಕ್ಕೆ ಇಳಿಯುವ ಗಂಡು ಕಲೆಯಾದ ಕುಸ್ತಿ ಅಖಾಡ ಕೂಡ ಈಗ ಖಾಲಿಯಾಗಿದೆ. ಕುಸ್ತಿಪಟುಗಳು ತಾವು ತಾಲೀಮು ನಡೆಸಿದ್ದರೂ, ದಸರಾ ವೇದಿಕೆ ಮಾತ್ರ ಇಲ್ಲದಂತಾಗಿದೆ. ಇದು ನಿಜಕ್ಕು ನಮ್ಮ ಕುಸ್ತಿ ಪಟುಗಳಿಗೆ ಬೇಸರ ಸಂಗತಿ ಅಂತಾರೆ ಪೈಲ್ವಾನ್ ಶೇಖರ್ ಅವರು.
ಹೂವಿನ ಮಕರಂದವಿಲ್ಲ
ಫ್ಲವರ್ ಶೋ ನಡೆಯುವ ಸ್ಥಳ ಕೂಡ ಖಾಲಿಯಾಗಿ ಬಣಗುಡುತ್ತಿದ್ದು, ಸೌಂದರ್ಯದ ರಾಶಿ ರಾಶಿ ಹೊತ್ತು ನಿಲ್ಲಬೇಕಾದ ಹೂಗಳಿಗೆ ಈ ಬಾರಿ ಅವಕಾಶವೇ ಇಲ್ಲದಂತಾಗಿದೆ. ಬಣ್ಣ ಬಣ್ಣದ ತರಹೇವಾರಿ ಹೂವಿನ ರಾಣಿಯ ಸೌಂದರ್ಯ ಸವಿಯುವ ಅವಕಾಶ ಮಾತ್ರ ಪ್ರವಾಸಿಗರು ಹಾಗೂ ಮೈಸೂರಿಗರಿಗೆ ಇಲ್ಲದಂತಾಗಿದೆ.
ವಸ್ತು ಪ್ರದರ್ಶನವಿಲ್ಲ- ವ್ಯಾಪಾರವೂ ಇಲ್ಲ
ಮೂರು ತಿಂಗಳ ಕಾಲ ಪ್ರವಾಸಿಗರಿಗೆ ದಸರಾ ನೆನಪಿಸುತ್ತಿದ್ದ ದಸರಾ ವಸ್ತು ಪ್ರದರ್ಶನ ಕೂಡ ಈ ಬಾರಿ ರದ್ದಾಗಿದ್ದು, ಇದರಿಂದ ವ್ಯಾಪಾರ ವಹಿವಾಟಿಗು ಪೆಟ್ಟು ಬಿದ್ದಿದೆ. ದಸರಾ ಅಂಗವಾಗಿ ಉತ್ತಮ ವ್ಯವಹಾರ ಮಾಡುತ್ತಿದ್ದ ಪ್ರವಾಸಿಗರಿಗೆ ಇದರಿಂದ ಆರ್ಥಿಕ ನಷ್ಟ ಉಂಟಾಗಿದೆ. ಮೂರು ತಿಂಗಳಲ್ಲಿ ಹೆಚ್ಚು ಸಂಪಾದನೆ ಮಾಡುತ್ತಿದ್ದ ಅವಕಾಶ ಕೈ ತಪ್ಪಿದ್ದು, ಕೊರೋನಾ ನಮ್ಮ ಹೊಟ್ಟೆ ಮೇಲೂ ಹೊಡೆದಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಇಷ್ಟೇ ಅಲ್ಲದೆ ಪುಸ್ತಕ ಮೇಳ, ವೀಣೆ ಶೇಷಣ್ಣಭವನ, ಜನಮೋಹ್ಮನ ಅರಮನೆ, ಮಾನಸಗಂಗೋತ್ರಿ, ಜೆ.ಕೆ.ಮೈದಾನ, ಲಲಿತಮಹಾಲ್ ಮೈದಾನ ಎಲ್ಲವು ಖಾಲಿ ಖಾಲಿಯಾಗಿದೆ. ಪ್ರತಿ ವರ್ಷ ದಸರಾದಲ್ಲಿ ಇದೆ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿ ದಸರೆಗೆ ಕಳೆತುಂಬುತ್ತಿದ್ದರು, ಈ ವರ್ಷ ಕೊರೊನಾದಿಂದಾಗಿ ಜನರು ಗುಂಪು ಸೇರದೆ ಜಾಗವು ಖಾಲಿ ಖಾಲಿಯಾಗಿರೋದು ದಸರಾಯ ವೈಭವವನ್ನ ಕಡಿಮೆ ಮಾಡಿರುವುದು ಸುಳ್ಳಲ್ಲ.
Published by:
Seema R
First published:
October 20, 2020, 8:25 PM IST