ಮಂಡ್ಯ (ಅ.20): ಕಳೆದ ಐದು ವರ್ಷದ ಹಿಂದೆ ಮೇಲ್ಜಾತಿಯ ಹುಡುಕನೊಬ್ಬನ ಮದುವೆಯಾದ ದಲಿತ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಆಕೆಯ ಹುಡುಕಾಟ ನಡೆಸಿದ ಪೋಷಕರಿಗೆ ಆಕೆ ಹತ್ಯೆಯಾಗಿರುವ ಮಾಹಿತಿ ಸಿಕ್ಕಿದೆ. ಇದರಿಂದ ಕುಟುಂಬ ಕಂಗಲಾಗಿದ್ದು, ಮರ್ಯಾದಾ ಹತ್ಯೆ ನಡೆದಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಕಂಗಲಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಕೋರಿದ್ದಾರೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡದೊಡ್ಡಿ ಗ್ರಾಮದ ದಲಿತ ಯುವತಿ ಮೇಘನಾ ನಾಪತ್ತೆಯಾಗಿರುವ ಯುವತಿ. ಆಕೆಯ ತಾಯಿ ಮಹದೇವಮ್ಮ ಈಗ ಮಗಳಿಗಾಗಿ ಪರಿತಪಿಸುತ್ತಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಏನಿದು ಘಟನೆ:
2013ರಲ್ಲಿ ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಪಿಯುಸಿ ಓದುತ್ತಿದ್ದ ಮೇಘನಾ 2014ರಲ್ಲಿ ತನ್ನ ಸ್ನೇಹಿತೆಯ ಸಂಬಂಧಿ ಯುವಕನಾದ ಸ್ವಾಮಿಗೌಡ ಎಂಬಾಂತನನ್ನು ಮದುವೆಯಾಗಿದ್ದಾಳೆ. ಈತ ಪಾಂಡವಪುರ ತಾಲೂಕಿನ ತಿರುಮಲಪುರದ ಸರ್ವಣೀಯ ಯುವಕನಾಗಿದ್ದಾನೆ.
ಮದುವೆಯಾದ ಬಳಿಕ ಮೇಘ ಈಕೆ ತನ್ನ ಮನೆಯವರ ಸಂಪರ್ಕ ಕಡಿ ದುಕೊಂಡಿದ್ದಳು. ಆರು ತಿಂಗಳ ಬಳಿಕ ಅಕ್ಕನ ಮದುವೆಗೆ ಎಂದು ಬಂದು ಹೋಗಿದ್ದಳು. ಇದಾದ ಬಳಿಕ ಒಂದೆರಡು ತಿಂಗಳು ಫೋನಿನಲ್ಲಿ ಮಾತನಾಡಿಕೊಂಡಿದ್ದ ಮಗಳು ನಂತರ ಸಂಪರ್ಕವನ್ನು ಕಡಿತಗೊಳಿಸಿದ್ದಳು. ಮಗಳು ಚೆನ್ನಾಗಿದ್ದರೆ ಸಾಕು ಎಂದು ಪೋಷಕರು ಕೂಡ ಸುಮ್ಮನಾಗಿದ್ದರು.
ಇದಾದ ಹಲವು ವರ್ಷಗಳ ಬಳಿಕ ಮನೆ ಕ್ಲೀನ್ ಮಾಡುವ ವೇಳೆ ಮನೆಯ ಬೀರುವಿನಲ್ಲಿ ಮಗಳು ಹಾಗೂ ಆಕೆಯ ಪ್ರಿಯಕರನ ಐಡಿ ಕಾರ್ಡ್ ಸಿಕ್ಕಿದೆ. ಆ ಕಾರ್ಡಿನ ವಿಳಾಸ ಹುಡುಕಿ ಹೊರಟ ತಾಯಿ ಆ ಊರಿನಲ್ಲಿ ಆ ವಿಳಾಸನೆಯವರನ್ನು ವಿಚಾರಿಸಿದಾಗ ತಮಗೇನು ಗೊತ್ತಿಲ್ಲ. ನಮ್ಮಮಗ ಕೂಡ ಇಲ್ಲಿಲ್ಲ ಎಂದು ಸಬೂಬು ಹೇಳಿ ಕಳಿಸಿದ್ದಾರೆ. ಯುವತಿ ಬಗ್ಗೆ ಸ್ಥಳೀ ಯರಲ್ಲಿ ವಿಚಾರಿಸಿದಾಗ ಯುವತಿಯ ಹತ್ಯೆಯಾಗಿದೆ. ಈ ಪ್ರಕರಣ ಮುಚ್ಚೋಗಿದೆ. ಹೋಗಿ ಪೊಲೀಸರಿಗೆ ದೂರು ಕೊಡಿ ಎಂದು ತಿಳಿಸಿ ಕಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಲು ಹೋದರೆ ಸಾಕ್ಷಿ ಆಧಾರವಿಲ್ಲದೇ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ.
ಇದನ್ನು ಓದಿ: ವಿಟ್ಲದಲ್ಲಿ ಅಗ್ನಿ ಅನಾಹುತ; ಎರಡು ಅಂಗಡಿಗಳು ಬೆಂಕಿಗಾಹುತಿ
ಈ ಕುಟುಂಬಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫೋರಂ ಸಂಘಟನೆ ಸಹಾಯ ಮಾಡಲು ಮುಂದೆ ಬಂದಿತು. ಬಳಿಕ ಸಂಘಟನೆ ಯಿಂದ ಮಾನವ ಹಕ್ಕು ಆಯೋಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಅಲ್ಲದೇ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಯಾಗಿರುವ ಬಗ್ಗೆ ಕೂಡ ದೂರು ನೀಡಿದ್ದಾರೆ.
ಮೇಘಾಳನ್ನು ಆಕೆಯ ಗಂಡ ಹಾಗೂ ಅವರ ಮನೆಯವರು ಯನ್ನು ಕೊಲೆ ಮಾಡಿರುವ ಶಂಕೆ ಇದ್ದು, ಮರ್ಯಾದೆ ಹತ್ಯೆ ನಡೆದಿದೆ ಎಂದು ಯುವತಿ ಪೋಷಕರು ಆರೋಪ ಮಾಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಜಿಲ್ಲಾ ಎಸ್ಪಿ, ಮರ್ಯಾದಾ ಹತ್ಯೆಯಂತಹ ಪ್ರಕರಣಗಳು ನಡೆದಿಲ್ಲ. ಯುವತಿ ಕಾಣೆಯಾಗಿರುವ ಬಗ್ಗೆ ಆಯೋಗದಲ್ಲಿ ದೂರು ನೀಡಿರುವ ಮಾಹಿತಿ ಇದೆ. ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ಈ ಕುರಿತು ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ