ದಕ್ಷಿಣಕನ್ನಡದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಮತ್ತೆ ಸಜ್ಜು

ವರದಿ ಜಾರಿಗೆ ಬಂದಲ್ಲಿ ಜಿಲ್ಲೆಯ 48 ಗ್ರಾಮಗಳು ಪಶ್ಟಿಮಘಟ್ಟ ಸೂಕ್ಷ್ಮ ವಲಯದಡಿ ಸೇರಿಕೊಳ್ಳಲಿದೆ.  ಇದರಿಂದ ಪಶ್ಚಿಮಘಟ್ಟದ ತಪ್ಪಲಿನಡಿ ಈಗಾಗಲೇ ತಮ್ಮ ಜೀವನವನ್ನು ಕಟ್ಟಿಕೊಂಡಿರುವ ಕುಟುಂಬಗಳು ಬೇರೆಡೆಗೆ ವರ್ಗಾವಣೆಗೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಳ್ಳಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಉಡುಪಿ (ನ.11):  ಕೇಂದ್ರ ಸರಕಾರ ಜಾರಿಗೆ ತರಲು ಉದ್ಧೇಶಿಸಿರುವ ಪಶ್ಚಿಮಘಟ್ಟಗಳನ್ನು ಉಳಿಸುವ ಕಸ್ತೂರಿ ರಂಗನ್ ವರದಿ  ಪಶ್ಟಿಮಘಟ್ಟದ ತಪ್ಪಲಿನ ಗ್ರಾಮಸ್ಥರನ್ನು ಮತ್ತೆ ಆತಂಕಕ್ಕೀಡುಮಾಡಿದೆ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಈಗಾಗಲೇ ಕೇಂದ್ರ ಸರಕಾರ ಸಿದ್ಧತೆ ನಡೆಸಿದ್ದು, ಒಂದು ವೇಳೆ ವರದಿ ಜಾರಿಗೆ ಬಂದಲ್ಲಿ ಜಿಲ್ಲೆಯ 48 ಗ್ರಾಮಗಳು ಪಶ್ಟಿಮಘಟ್ಟ ಸೂಕ್ಷ್ಮ ವಲಯದಡಿ ಸೇರಿಕೊಳ್ಳಲಿದೆ.  ಇದರಿಂದ ಪಶ್ಚಿಮಘಟ್ಟದ ತಪ್ಪಲಿನಡಿ ಈಗಾಗಲೇ ತಮ್ಮ ಜೀವನವನ್ನು ಕಟ್ಟಿಕೊಂಡಿರುವ ಕುಟುಂಬಗಳು ಬೇರೆಡೆಗೆ ವರ್ಗಾವಣೆಗೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಳ್ಳಲಿದೆ. ಕಳೆದ ಹಲವು ವರ್ಷಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಗ್ಗೆ ಹೋರಾಟಗಳು ನಡೆದಿದ್ದು, ಇದೀಗ ಮತ್ತೆ ಈ ಹೋರಾಟಗಳಿಗೆ ಚಾಲನೆ ದೊರೆತಿದೆ. ಪಶ್ಟಿಮಘಟ್ಟದ ತಪ್ಪಲಿನಲ್ಲಿರುವ ಎಲ್ಲಾ ಗ್ರಾಮಗಳನ್ನು ಸೂಕ್ಷ್ಮ ವಲಯವನ್ನಾಗಿ ಗುರುತಿಸಿ ಈ ಪ್ರದೇಶದಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ಅನುಮತಿಯನ್ನು ನಿರಾಕರಿಸುವ ಹಾಗೂ ಎಲ್ಲಾ ಗ್ರಾಮಗಳನ್ನೂ ಪಶ್ಟಿಮಘಟ್ಟದ  ವ್ಯಾಪ್ತಿಗೆ ಸೇರಿಸುವ ಈ ವರದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.

ರಾಜ್ಯ ಸರಕಾರ ಈ ವರದಿಯ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಪಂಚಾಯತ್ ಗಳಲ್ಲಿ ವಿಶೇಷ ಗ್ರಾಮಸಭೆಯ ನಡೆಸಿ, ವರದಿಯ ಕುರಿತು ಗ್ರಾಮಸ್ಥರ ಅಭಿಪ್ರಾಯವನ್ನು ಕ್ರೂಡೀಕರಿಸುವ ಕೆಲಸವನ್ನೂ ಈ ಹಿಂದೆ ನಡೆಸಿತ್ತು. ಸುಮಾರು 48 ಗ್ರಾಮಗಳು ಈ ಯೋಜನೆಯಡಿ ಪಶ್ಚಿಮಘಟ್ಟ ಸೂಕ್ಷ್ಮ ವಲಯದಡಿ ಸೇರ್ಪಡೆಗೊಳ್ಳಲಿದ್ದು, ಈ ಗ್ರಾಮಗಳಿಗೆ ಸಂಬಂಧಪಟ್ಟ ಎಲ್ಲಾ ಗ್ರಾಮಪಂಚಾಯತ್ ಗಳು ಕೇಂದ್ರ ಸರಕಾರದ ಈ ಯೋಜನೆಗೆ ತಮ್ಮ ವಿರೋಧವನ್ನು ಈ ಹಿಂದೆಯೇ ಮಂಡಿಸಿತ್ತು. ಆದರೆ ಇದೀಗ ಮತ್ತೆ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಚರ್ಚೆಗಳು ಆರಂಭಗೊಳ್ಳಲಾರಂಭಿಸಿದೆ. ವರದಿಯನ್ನು ವಿರೋಧಿಸಿ ಹಲವು ಸಂಘಟನೆಗಳು ಅಖಾಡಕ್ಕೆ ಧುಮುಕಿದ್ದು, ಪ್ರತಿಭಟನೆ, ಹಕ್ಕೊತ್ತಾಯ ಸಭೆಗಳ ಮೂಲಕ ವರದಿಯನ್ನು ವಿರೋಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.ಇದಕ್ಕೆ ಪೂರಕವಾಗಿ ಮಲೆನಾಡು ಜನಹಿತರಕ್ಷಣಾ ವೇದಿಕೆ ಹಲವು ಸಮಾಲೋಚನಾ ಸಭೆಗಳನ್ನು ನಡೆಸಲು ಆರಂಭಿಸಿದೆ.

ಇದನ್ನು ಓದಿ: ಗಾಂಧೀಜಿ ಗದಗಿಗೆ ಬಂದು ನಾಳೆಗೆ ಶತಮಾನ; ನೆನಪಿಗಾಗಿ ಇಂದು ಲೋಕಾರ್ಪಣೆಯಾಗಲಿದೆ ಸಾಬರಮತಿ ಆಶ್ರಮ

ವರದಿಯಿಂದ ಜಿಲ್ಲೆಯ ಮೂರು ತಾಲೂಕಿನ 48 ಗ್ರಾಮಗಳ ಜನರಿಗೆ ಈ ಯೋಜನೆ ಜಾರಿಗೆ ಬಂದಲ್ಲಿ ಸಮಸ್ಯೆಯಾಗಲಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಸಂಘಟನೆಗಳನ್ನು ಬಲಪಡಿಸಿ ಮತ್ತೆ ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಆಯಾಯ ತಾಲೂಕು ಕಛೇರಿಗಳಲ್ಲಿ ಪ್ರತಿಭಟನೆಯಿಂದ ಈ ವಿರೋಧ ಆಂಭಗೊಳ್ಳಲಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಈ ಹೋರಾಟದಲ್ಲಿ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಲವರನ್ನು ಹೋರಾಟದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೋರಾಟದ ಮುಂಚೂಣಿಯಲ್ಲಿರುವ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾಹಿತಿ ನೀಡಿದ್ದಾರೆ. 

ಮೊದಲ ಹಂತದ ಪ್ರತಿಭಟನೆ ನಡೆದ ಬಳಿಕ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲೂ ಸಂಘಟನೆಗಳು ತೀರ್ಮಾನಿಸಿದೆ. ಆ ಬಳಿಕ ದಕ್ಷಿಣಕನ್ನಡ ಮತ್ತು ಹಾಸನ ಗಡಿಭಾಗವಾದ ಗುಂಡ್ಯದಲ್ಲಿ ಹೆದ್ದಾರಿ ತಡೆ ನಡೆಸಿ ಉಗ್ರ ಪ್ರತಿಭಟನೆಯ ಮೂಲಕ ಕಸ್ತೂರಿರಂಗನ್ ವರದಿ ಜಾರಿಯನ್ನು ತಡೆಯಲು ಸಂಘಟನೆಗಳು ಯೋಜನೆ ರೂಪಿಸಿಕೊಂಡಿವೆ. ಈ ವರದಿ ಜಾರಿಯಾದಲ್ಲಿ ಎಲ್ಲಾ ಪಕ್ಷಗಳಿಗೂ ತೊಂದರೆ ಎನ್ನುವ ಕಾರಣಕ್ಕಾಗಿ ಈ ಹೋರಾಟದಲ್ಲಿ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ವಿಶ್ವಾಸವನ್ನು ಮಲೆನಾಡು ಜನಹಿತರಕ್ಷಣಾ ವೇದಿಕೆ ವ್ಯಕ್ತಪಡಿಸಿದೆ. ಕಳೆದ ಬಾರಿ ಗ್ರಾಮಪಂಚಾಯತ್ ಚುನಾವಣೆ ಸಮೀಪಿಸುತ್ತ ಸಂದರ್ಭದಲ್ಲೂ ಕಸ್ತೂರಿರಂಗನ್ ವರದಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಮತ್ತೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮತ್ತೆ ಈ ವರದಿ ರಾಜಕೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.
Published by:Seema R
First published: