Street Dog: ಬೀದಿ ನಾಯಿಗಳ ಅನ್ನದಾತನಿಗೆ ಆರ್ಥಿಕ ಸಂಕಷ್ಟ; ಸಹಾಯದ ನಿರೀಕ್ಷೆಯಲ್ಲಿ ರಾಜೇಶ್​

ರಿಷಬ್ ಶೆಟ್ಟಿಯವರ ಚಾರ್ಲಿ 777  ಚಲನಚಿತ್ರ ತೆರೆಗೆ ಬಂದ ಬಳಿಕ ನಾಯಿಗಳ ಮೇಲಿನ ಕಾಳಜಿ ಕೊಂಚ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಆದರೆ ಚಾರ್ಲಿ ಸಿನಿಮಾ ಬರುವ ಮೊದಲೇ ಅಂದರೆ ಸುಮಾರು 15 ವರ್ಷಗಳ ಹಿಂದೆಯೇ ಈ ಬೀದಿ ನಾಯಿಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಣುವ ಅಪರೂಪದ ಅನ್ನದಾತ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ರಾಜೇಶ್ ಬನ್ನೂರು.

ರಾಜೇಶ್ ಬನ್ನೂರು

ರಾಜೇಶ್ ಬನ್ನೂರು

  • Share this:
ದಕ್ಷಿಣಕನ್ನಡ :  ಕಳೆದ 15 ವರ್ಷಗಳಿಂದ ಬೀದಿ ನಾಯಿಗಳ (Street Dogs) ಅನ್ನದಾತರಾಗಿದ್ದ ದಾನಿಯೊಬ್ಬರು ಇದೀಗ ಆರ್ಥಿಕ ಸಂಕಷ್ಟ (Financial Problems) ಎದುರಿಸುತ್ತಿದ್ದಾರೆ. ಪೇಪರ್ ಏಜೆಂಟ್ ಆಗಿಯೂ, ಜನಪ್ರತಿನಿಧಿಯೂ ಆಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ರಾಜೇಶ್ ಬನ್ನೂರು ಇದೀಗ ನಾಯಿಗಳ ಆರೈಕೆಗಾಗಿ‌ ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ. ಪ್ರತಿದಿನವೂ 150 ಕ್ಕೂ ಹೆಚ್ಚಿನ ನಾಯಿಗಳಿಗೆ ಆಹಾರ ಸೇರಿದಂತೆ ಆರೋಗ್ಯವನ್ನೂ ನೋಡಿಕೊಳ್ಳುತ್ತಿರುವ ಇವರು ದಿನವೊಂದಕ್ಕೆ ನಾಯಿಗಳಿಗಾಗಿ 1500 ರೂಪಾಯಿಗಳನ್ನು ವ್ಯಯಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ನಾಯಿಗಳ ಸಂಕಷ್ಟ ತಾಳಲಾರದೆ ಅನ್ನ ನೀಡುವ ಕಾರ್ಯವನ್ನು ಆರಂಭಿಸಿರುವ ರಾಜೇಶ್ ಬನ್ನೂರು  ಆಹಾರ ನೀಡುವ ಕೆಲಸವನ್ನು ನಿಲ್ಲಿಸಲು ತೀರ್ಮಾನಿಸಿದ್ದಾರೆ. 

ರಿಯಲ್​​ ಚಾರ್ಲಿ ಕಥೆ

ಸಾಕು ಪ್ರಾಣಿಗಳನ್ನು ಸಾಕುವ ಜನರ ನಿರ್ಲಕ್ಷ್ಯದಿಂದಾಗಿ ಬೀದಿಗೆ ಬೀಳುವ ನಾಯಿಗಳನ್ನು ಕಂಡು ಕಾಣದಂತೆಯೇ ಇರುವವರು ಹೆಚ್ಚು. ಆದರೆ ರಕ್ಷಿತ್​ ಶೆಟ್ಟಿಯವರ ಚಾರ್ಲಿ 777  ಚಲನಚಿತ್ರ ತೆರೆಗೆ ಬಂದ ಬಳಿಕ ನಾಯಿಗಳ ಮೇಲಿನ ಕಾಳಜಿ ಕೊಂಚ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಆದರೆ ಚಾರ್ಲಿ ಸಿನಿಮಾ ಬರುವ ಮೊದಲೇ ಅಂದರೆ ಸುಮಾರು 15 ವರ್ಷಗಳ ಹಿಂದೆಯೇ ಈ ಬೀದಿ ನಾಯಿಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಣುವ ಅಪರೂಪದ ಅನ್ನದಾತ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ರಾಜೇಶ್ ಬನ್ನೂರು.

15 ವರ್ಷಗಳಿಂದ ಬೀದಿ ನಾಯಿಗಳಿಗೆ ಆಸರೆ 

ಪೇಪರ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜೇಶ್ ಬನ್ನೂರು ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಪುತ್ತೂರು ಪುರಸಭೆ ಇರುವ ಸಮಯದಲ್ಲಿ ಹಲವು ಬಾರಿ ಪುರಸಭೆ ಸದಸ್ಯರಾಗಿ ಮತ್ತು ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಸದ್ಯ ರಾಜಕೀಯದಿಂದ ಕೊಂಚ ದೂರ ಉಳಿದು ತನ್ನ ಪೇಪರ್ ಏಜೆಂಟ್ ಕೆಲಸ ನಿರ್ವಹಿಸುತ್ತಿದ್ದರು. ರಾಜೇಶ್ ಬನ್ನೂರಿಗೆ ಪುತ್ತೂರು ನಗರದಾದ್ಯಂತ ಪರಿಚಯಸ್ಥ ನಾಯಿಗಳಿವೆ. ಈ ಕಾರಣಕ್ಕಾಗಿಯೇ ರಾಜೇಶ್ ಬನ್ನೂರು ತಿರುಗಾಡಿದ ಕಡೆಗಳಲ್ಲೆಲ್ಲಾ ನಾಯಿಗಳ ದಂಡು ಇವರನ್ನು ಸುತ್ತುವರಿಯುತ್ತೆ. ಈ ರೀತಿಯಾದ ಪರಿಚಯ ನಾಯಿಗಳಿಗೆ ಆಹಾರ, ಆರೈಕೆ ನೀಡುವ ತನಕ ಬೆಳೆದಿದೆ. ಸುಮಾರು 15 ವರ್ಷಗಳಿಂದ ಬೆಳೆದು ಬಂದ ಈ ಸ್ನೇಹಾಚಾರವನ್ನು ಬಿಟ್ಟು ಬರಲಾರದಂತಹ ಸಂಕಷ್ಟದಲ್ಲಿ ರಾಜೇಶ್ ಇದೀಗ ಸಿಲುಕಿದ್ದಾರೆ.

ಇದನ್ನೂ ಓದಿ: Tomato Rate: 15 ಕೆಜಿ ಟೊಮೆಟೊ ಕೇವಲ 20 ರೂಪಾಯಿ! ಪಾತಾಳಕ್ಕೆ ಕುಸಿದ ಬೆಲೆಯಿಂದ ರೈತರು ಕಂಗಾಲು

ಸಂಕಷ್ಟದಲ್ಲಿ ರಾಜೇಶ್​ ಬನ್ನೂರು 

ಪುತ್ತೂರು ಪೇಟೆಯಾದ್ಯಂತ ಸುಮಾರು 200 ಕ್ಕೂ ಹೆಚ್ಚಿನ ನಾಯಿಗಳ ಅನ್ನದಾತರಾಗಿರುವ ರಾಜೇಶ್ ಬನ್ನೂರು ಈ ನಾಯಿಗಳ ಆರೈಕೆ, ಆಹಾರಕ್ಕಾಗಿ ದಿನವೊಂದಕ್ಕೆ 1000 ದಿಂದ 1500 ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ. ಕೆಲವು ಪರಿಚಯಸ್ಥರು ರಾಜೇಶ್ ಬನ್ನೂರರ ಈ ಸೇವೆಗೆ ತಮ್ಮ ಕೈಯಲ್ಲಾದ ಮಟ್ಟಿಗೆ ಸಹಕಾರ, ಸಹಾಯವನ್ನೂ ನೀಡುತ್ತಿದ್ದಾರೆ. ಆದರೆ‌ ಹೆಚ್ಚಿನ ಪಾಲನ್ನು ರಾಜೇಶ್ ಬನ್ನೂರು ಸ್ವತಹ ಹೊತ್ತುಕೊಳ್ಳುವುದರಿಂದ ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ನಾಯಿಗಳಿಗೆ ಅನ್ನ ನೀಡುವುದನ್ನು ನಿಲ್ಲಿಸಬೇಕೆಂದು ಹಲವು ಬಾರಿ ನಿರ್ಧರಿಸಿದ್ದರೂ, ನಿರ್ಧಾರ ಮಾತ್ರ ಮುಂದೂಡಿಕೊಂಡೇ ಹೋಗಿದೆ. ಆದರೆ ಈ ಬಾರಿ ಮಾತ್ರ ನಿರ್ವಹಿಸಲಾರದ ಹಂತಕ್ಕೆ ತಲುಪಿರುವ ಕಾರಣ ಅನಿವಾರ್ಯವಾಗಿ ಸಮಾಜದ ಸಹಾಯಕ್ಕೆ ಕೈಯೊಡ್ಡಿದ್ದಾರೆ. ಅದರಲ್ಲೂ ಸಮಾಜ ಸೇವಾ ಸಂಘಗಳು ಮುಂದೆ ಬಂದಲ್ಲಿ ಬೀದಿ ನಾಯಿಗಳನ್ನು ಯಾವುದೇ ತೊಂದರೆಯಿಲ್ಲದೆ ನೋಡಿಕೊಳ್ಳಬಹುದು ಎನ್ನುವುದು ಬನ್ನೂರರ‌ ಅಭಿಲಾಷೆ.
Published by:Kavya V
First published: