• Home
  • »
  • News
  • »
  • state
  • »
  • PFI Training Centre: ಪಿಎಫ್ಐ ರಾಜ್ಯಮಟ್ಟದ ತರಬೇತಿ ಕೇಂದ್ರ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಕ್ಲೋಸ್?

PFI Training Centre: ಪಿಎಫ್ಐ ರಾಜ್ಯಮಟ್ಟದ ತರಬೇತಿ ಕೇಂದ್ರ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಕ್ಲೋಸ್?

ಪಿಎಫ್ಐ ತರಬೇತಿ ಕೇಂದ್ರ

ಪಿಎಫ್ಐ ತರಬೇತಿ ಕೇಂದ್ರ

ಇದೇ ಮಾಹಿತಿಯನ್ನು ಆಧರಿಸಿ ಎನ್ಐಎ ಅಧಿಕಾರಿಗಳು ರಾಜ್ಯದ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪಿಎಫ್ಐನ ಎಲ್ಲಾ ಕಛೇರಿ ಮತ್ತು ಇತರ ಕಾರ್ಯಚಟುವಟಿಕೆಯ ಕೇಂದ್ರಗಳಿಂದ ಹಲವು ದಾಖಲೆಗಳನ್ನು ವಶಪಡಿಸಿತ್ತು.

  • Share this:

ದೇಶದಲ್ಲಿ ಪಿಎಫ್ಐ (Ban On PFI) ಹಾಗೂ ಅದರ ಸಹ ಸಂಘಟನೆಗಳನ್ನು ನಿಷೇಧಿಸಿದ ಬಳಿಕ ಕಚೇರಿ ಮತ್ತು ಇತರ ತರಬೇತಿ ಕೇಂದ್ರಗಳ (Training Centre) ವಿರುದ್ಧ ಇದೀಗ ಕಾರ್ಯಾಚರಣೆ ಆರಂಭಗೊಂಡಿದೆ. ರಾಜ್ಯದಾದ್ಯಂತ ಇರುವ ಪಿಎಫ್ಐ ಕಾರ್ಯಕರ್ತರಿಗೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿ (Mitturu, Dakshina Kannada) ತರಬೇತಿ ನೀಡಲಾಗುತ್ತಿತ್ತು. ತರಬೇತಿ ಕೇಂದ್ರ ನಡೆಸುತ್ತಿದ್ದ ಫ್ರೀಡಂ ಕಮ್ಯುನಿಟಿ ಹಾಲ್ (Freedom Community Hall) ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸರು (Police) ಮುಂದಾಗಿದ್ದಾರೆ ಬೆಂಗಳೂರಿನಲ್ಲಿ ನಡೆದ ಕೆ.ಜೆ ಹಳ್ಳಿ, ಡಿ.ಜೆ. ಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ನಡೆದ ಗಲಭೆಗಳಲ್ಲಿ ಭಾಗಿಯಾದವರಿಗೆ ಇದೇ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು ಎನ್ನುವ ವಿಚಾರ ಎನ್ಐಎ ತನಿಖೆಯಿಂದ ಬಯಲಾಗಿತ್ತು. ಅಲ್ಲದೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ (Praveen Nettaru Murder Case) ಪ್ರಮುಖ ಆರೋಪಿ ಸಿಹಾಬುದ್ದೀನ್ ಇದೇ ಕೇಂದ್ರದಲ್ಲಿ ನಿರಂತರವಾಗಿ ತರಬೇತಿ ಪಡೆದಿದ್ದ. ಈ ಹಿನ್ನೆಲೆಯಲ್ಲಿ ಎನ್ಐಎ (NIA Raids) ಈ ಕೇಂದ್ರಕ್ಕೆ ತಿಂಗಳ ಹಿಂದೆ ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿತ್ತು ಮತ್ತು ಕೇಂದ್ರದ ಟ್ರಸ್ಟಿ ಓರ್ವನನ್ನು ವಶಕ್ಕೆ ಪಡೆದಿತ್ತು.


ಇನ್ನುಳಿದ ಇಬ್ಬರು ಟ್ರಸ್ಟಿಗಳು ನಾಪತ್ತೆಯಾಗಿದ್ದು, ಅವರ ಶೋಧ ಕಾರ್ಯವೂ ನಡೆಯುತ್ತಿದೆ.  2007ರಲ್ಲಿ ಈ ಕೇಂದ್ರ ಸ್ಥಾಪನೆಯಾಗಿದ್ದು, ಆ ಬಳಿಕ ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರಿಗೆ ಈ ಕೇಂದ್ರ ಉಗ್ರ ತರಬೇತಿಯನ್ನು ನೀಡಿತ್ತು ಎನ್ನುವ ಆರೋಪವೂ ಇದೆ.


2007ರಲ್ಲಿ ಈ ಜಾಗ ಖರೀದಿ


ಕೇಂದ್ರ ಸರಕಾರ ಈಗಾಗಲೇ ನಿಷೇಧಿಸಿರುವ ಪಿಎಫ್ಐ ಜೊತೆಗೆ ಗುರುತಿಸಿಕೊಂಡಿರುವ ರೆಹಬ್ ಇಂಡಿಯಾ ಫೌಂಡೇಶನ್ ಮಾಲೀಕತ್ವದಲ್ಲಿ ಈ ಕಮ್ಯುನಿಟಿ ಹಾಲ್ ಇದ್ದು, ಸುಮಾರು 5 ಎಕರೆ ಜಾಗದಲ್ಲಿ ಈ ಕೇಂದ್ರ ಕಾರ್ಯಾಚರಿಸುತ್ತಿದೆ. 2007 ರಲ್ಲಿ ಈ ಸ್ಥಳವನ್ನು ಮಿತ್ತೂರಿನ ಸ್ಥಳೀಯ ನಿವಾಸಿಯೊಬ್ಬರಿಗೆ ಟ್ರಸ್ಟ್ ಖರೀದಿ ಮಾಡಿತ್ತು.


ಪಿಎಫ್ಐ ತರಬೇತಿ ಕೇಂದ್ರ


ಎನ್​ಐಎ ಮುಂದೆ ಬಾಯಿಬಿಟ್ಟಿದ್ದ ಸಿಹಾಬುದ್ದೀನ್


ಪ್ರಸ್ತುತ ಈ ಟ್ರಸ್ಟ್ ಅಧ್ಯಕ್ಷರಾಗಿ ಪಿಎಫ್ಐಯ ಮುಖಂಡ ಉಪ್ಪಿನಂಗಡಿಯ ಅಶ್ರಫ್ ಅಗ್ನಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಳ್ಯದ ನೆಟ್ಟಾರು ನಿವಾಸಿ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸಿಹಾಬುದ್ದೀನ್ ಅನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯು ತನ್ನ ಮತ್ತು ಪಿಎಫ್ಐ ಸಂಘಟನೆಯ ಎಲ್ಲಾ ಲಿಂಕ್​ಗಳನ್ನು ಎನ್ಐಎ ಮುಂದೆ ಬಾಯ್ಬಿಟ್ಟಿದ್ದ.


ಇದೇ ಮಾಹಿತಿಯನ್ನು ಆಧರಿಸಿ ಎನ್ಐಎ ಅಧಿಕಾರಿಗಳು ರಾಜ್ಯದ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪಿಎಫ್ಐನ ಎಲ್ಲಾ ಕಛೇರಿ ಮತ್ತು ಇತರ ಕಾರ್ಯಚಟುವಟಿಕೆಯ ಕೇಂದ್ರಗಳಿಂದ ಹಲವು ದಾಖಲೆಗಳನ್ನು ವಶಪಡಿಸಿತ್ತು.


ಹಲವು ಡಿಜಿಟಲ್ ದಾಖಲೆ ವಶಕ್ಕೆ


ಇದೇ ಸಂದರ್ಭದಲ್ಲಿ ಎನ್ಐಎ ಹಂತಕ ಸಿಹಾಬುದ್ದೀನ್ ತರಬೇತಿ ಪಡೆದಿದ್ದ ಫ್ರೀಡಂ ಕಮ್ಯುನಿಟಿ ಹಾಲ್​ಗೂ ನುಗ್ಗಿತ್ತು. ಕೇಂದ್ರದ ಬಾಗಿಲು ಮುರಿದು ಒಳ ಪ್ರವೇಶಿಸಿದ್ದ ಅಧಿಕಾರಿಗಳು ಹಲವು ಡಿಜಿಟಲ್ ದಾಖಲೆ ಸೇರಿದಂತೆ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿತ್ತು.  ದಾಳಿ ನಡೆಯುವ ಮೊದಲೇ ಈ‌ ಕೇಂದ್ರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎನ್ನುವ ಆರೋಪವನ್ನು ಸ್ಥಳೀಯ ನಿವಾಸಿಗಳು ಮಾಡಿದ್ದರು‌.


ತರಬೇತಿ ಕೇಂದ್ರ ನೆಲಸಮಗೊಳಿಸುವಂತೆ ಆಗ್ರಹ


ಈ ಹಿಂದೆ ಒಮ್ಮೆ ಪೊಲೀಸರೂ ಈ ಕೇಂದ್ರಕ್ಕೆ ತೆರಳಿ ಪರಿಶೀಲನೆಯನ್ನೂ ನಡೆಸಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಈ ಕೇಂದ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸಾರ್ವಜನಿಕ ವಲಯಕ್ಕೆ ತಿಳಿಯುವಂತಾಗಿದ್ದು, ಸರಕಾರ ಕೂಡಲೇ ಈ ಕೇಂದ್ರದ ಮೇಲೆ ಬುಲ್ಡೋಜರ್ ಹರಿಸಿ ನೆಲಸಮಗೊಳಿಸಬೇಕೆಂದು ಭಜರಂಗದಳ ಸರಕಾರವನ್ನು ಒತ್ತಾಯಿಸಲಾರಂಭಿಸಿದೆ. ಕೇವಲ ತರಬೇತಿ ಕೇಂದ್ರ ಮಾತ್ರವಲ್ಲದೆ ಪ್ಯಾಪ್ಯುಲರ್ ಫಂಟ್ ಆಫ್ ಇಂಡಿಯಾ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಖಾಲಿ ಜಾಗಗಳನ್ನು ಖರೀದಿಸಿ ಅವುಗಳಲ್ಲಿ ಲೇಔಟ್ ನಿರ್ಮಿಸಿರುವ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿದೆ.


PFI ban for next five years mrq
ಪಿಎಫ್​ಐ


ಲೇಔಟ್ ನಿರ್ಮಾಣಕ್ಕೆ ಮುಂದಾಗಿದೆಯಂತೆ ಪಿಎಫ್ಐ


ಬಂಟ್ವಾಳದ ಮಿತ್ತೂರು, ಪುತ್ತೂರಿನ ಕುಂಬ್ರ ಮೊದಲಾದ ಕಡೆಗಳಲ್ಲಿ ಇಂಥಹ ಲೇಔಟ್​​ಗಳು ತಲೆ ಎತ್ತುತ್ತಿದ್ದು, ಇವುಗಳ ಒಡೆತನವೂ ಪಿಎಫ್ಐ ಸಂಘಟನೆ ಜೊತೆ ಸಂಪರ್ಕದಲ್ಲಿರುವವರಲ್ಲಿದೆ ಎನ್ನುವ ಸಂಶಯಗಳಿವೆ. ಈ ನಿಟ್ಟಿನಲ್ಲಿ ಇವುಗಳ ಮೇಲೂ ತನಿಖಾ ಸಂಸ್ಥೆಗಳು ನಿಗಾ ಇಡಬೇಕೆಂದು ಭಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಒತ್ತಾಯಿಸಿದ್ದಾರೆ.

Published by:Mahmadrafik K
First published: