Puttur: ಶಿಕ್ಷಣದ ಜೊತೆ ಪರಿಸರ ಶಿಕ್ಷಣವನ್ನೂ ನೀಡುತ್ತೆ ಈ ಹಸಿರು ಶಾಲೆ

ಈ ಶಾಲೆಯಲ್ಲಿ ಸುಮಾರು 150 ಕ್ಕೂ ಮಿಕ್ಕಿದ ಬಲು ಅಪರೂಪದ ಹಣ್ಣಿನ ಮರಗಳು ಸೇರಿದಂತೆ ಔಷಧೀಯ ಗುಣವುಳ್ಳ ಗಿಡಗಳನ್ನು ಬೆಳೆಯಲಾಗಿದೆ. ಕ್ಯಾನ್ಸರ್ ಕಾಯಿಲೆಗೆ ರಾಮಬಾಣದಂತಿರುವ ಲಕ್ಷ್ಮಣ ಫಲದ ಸಸಿಯನ್ನೂ  ಈ ಶಾಲೆಯಲ್ಲಿ ಬೆಳೆಸಲಾಗುತ್ತಿದ್ದು, ಪ್ರತೀ ವರ್ಷವೂ ಉತ್ತಮ ಹಣ್ಣುಗಳನ್ನೂ ಈ ಸಸಿಗಳಿಂದ ಪಡೆಯಲಾಗುತ್ತಿದೆ.

ಶಾಲೆ ಆವರಣ

ಶಾಲೆ ಆವರಣ

  • Share this:
ಇಂದು ಎಲ್ಲೆಡೆ ನಗರೀಕರಣದ ಬಗ್ಗೆಯೇ ಹೆಚ್ಚಿನ ಒಲವಿದ್ದು, ಪರಿಸರದ ಬಗ್ಗೆ ಕಾಳಜಿ ಕ್ಷೀಣಿಸುತ್ತಿದೆ. ಹೈಟೆಕ್ ಕಟ್ಟಡಗಳಲ್ಲಿ ಕಲಿಯುವ ಇಂದಿನ ಮಕ್ಕಳಿಗೂ ಪರಿಸರ ಎನ್ನುವುದರ ಬಗ್ಗೆ ಅರಿವೇ ಇಲ್ಲದಂತಹ ಸ್ಥಿತಿಯೂ ನಿರ್ಮಾಣಗೊಂಡಿದೆ. ಆದರೆ ಇಲ್ಲೊಂದು ಶಾಲೆ ಶಿಕ್ಷಣದ (School Education) ಜೊತೆಗೆ ಪರಿಸರಕ್ಕೂ ಅಷ್ಟೇ ಮಹತ್ವವನ್ನು ನೀಡಿದೆ. ಶಾಲೆಯ ತುಂಬೆಲ್ಲಾ ವಿವಿಧ ರೀತಿಯ ಅಪರೂಪದ ಹಣ್ಣಿನ ಗಿಡಗಳು, ‍ಔಷಧೀಯ ಸಸ್ಯಗಳನ್ನು ಬೆಳೆಸಿದೆ. ಈ ಶಾಲೆಯ ಪರಿಸರ ಕಾಳಜಿಗೆ ಐದು ಬಾರಿ ಈ ಶಾಲೆ ಹಸಿರು ಶಾಲೆ (Green School) ಎನ್ನುವ ಪ್ರಶಸ್ತಿಯ ಗರಿಯನ್ನೂ ಮುಡಿಗೇರಿಸಿಕೊಂಡಿದೆ.  ಆಧುನಿಕತೆ, ನಗರೀಕರಣಕ್ಕೆ ಒಗ್ಗಿಕೊಂಡಿರುವ ಇಂದಿನ ತಲೆಮಾರಿನ ಯುವಪೀಳಿಗೆಯಲ್ಲಿ ಪರಿಸರದ ಬಗ್ಗೆ ಕಾಳಜಿಯೇ ಕಡಿಮೆಯಾದಂತಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಇದೀಗ ಆಧುನಿಕ ಕಟ್ಟಡಗಳಲ್ಲೇ ವಿದ್ಯಾಭಾಸ ಮಾಡುತ್ತಿರುವ ಮಕ್ಕಳಿಗೂ ಪರಿಸರದ ಬಗ್ಗೆ ಅರಿವೇ ಇಲ್ಲದಂತಹ ಸ್ಥಿತಿಯಿದೆ. ಶಾಲೆಯಲ್ಲಿ ಪಠ್ಯ ಪುಸ್ತಕ ಹೊರತುಪಡಿಸಿದರೆ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡರೂ, ಪರಿಸರದ ಬಗ್ಗೆ ಇಲ್ಲಿ ಮಕ್ಕಳಿಗೆ ಕಾಳಜಿ ಮೂಡಿಸುವಂತಹ ಕಾರ್ಯಗಳು ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲೂ ನಡೆದಿಲ್ಲ.

ಆದರೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಪೆಲ್ಲಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಈ ವಿಚಾರದಲ್ಲಿ ಕೊಂಚ ಭಿನ್ನವಾಗಿಯೇ ಗುರುತಿಸಿಕೊಂಡಿದೆ.

ಕಟ್ಟಡಕ್ಕಿಂತ ಪ್ರಾಮುಖ್ಯತೆ ಪರಿಸರಕ್ಕೆ

ಮಕ್ಕಳಿಗೆ ಎಳವೆಯಿಂದಲೇ ಪರಿಸರದ ಬಗ್ಗೆ ಕಾಳಜಿ ಮೂಡಬೇಕು ಎನ್ನುವ ಸದುದ್ಧೇಶದಿಂದ ಈ ಶಾಲೆಯನ್ನು ಪರಿಸರಸ್ನೇಹಿ ಶಾಲೆಯಾಗಿ ರೂಪಿಸಲಾಗಿದೆ. 1935 ರಲ್ಲಿ ನಿರ್ಮಾಣಗೊಂಡಿರುವ ಈ ಶಾಲೆಯಲ್ಲಿ ಹಳೆಯ ಕಟ್ಟಡದ ಜೊತೆಗೆ ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲೂ  ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತಿದೆ. ಆದರೆ ಇಲ್ಲಿ ಕಟ್ಟಡಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪರಿಸರಕ್ಕೆ ನೀಡಲಾಗುತ್ತಿದೆ.

ಹಣ್ಣಿನ, ಔಷಧೀಯ ಗುಣಗಳ ಗಿಡ-ಮರ

ಶಾಲೆಯ ಪರಿಸರದ ತುಂಬಾ ಖಾಲಿ ಜಾಗ ಇರುವಲ್ಲೆಲ್ಲಾ ಒಂದಲ್ಲಾ ಒಂದು ರೀತಿಯ ಹಣ್ಣಿನ, ಔಷಧೀಯ ಗುಣಗಳ ಗಿಡ-ಮರಗಳನ್ನು ಬೆಳೆಸಲಾಗಿದೆ. ಈ ಶಾಲೆಯಲ್ಲಿ ಸುಮಾರು 150 ಕ್ಕೂ ಮಿಕ್ಕಿದ ಬಲು ಅಪರೂಪದ ಹಣ್ಣಿನ ಮರಗಳು ಸೇರಿದಂತೆ ಔಷಧೀಯ ಗುಣವುಳ್ಳ ಗಿಡಗಳನ್ನು ಬೆಳೆಯಲಾಗಿದೆ. ಕ್ಯಾನ್ಸರ್ ಕಾಯಿಲೆಗೆ ರಾಮಬಾಣದಂತಿರುವ ಲಕ್ಷ್ಮಣ ಫಲದ ಸಸಿಯನ್ನೂ  ಈ ಶಾಲೆಯಲ್ಲಿ ಬೆಳೆಸಲಾಗುತ್ತಿದ್ದು, ಪ್ರತೀ ವರ್ಷವೂ ಉತ್ತಮ ಹಣ್ಣುಗಳನ್ನೂ ಈ ಸಸಿಗಳಿಂದ ಪಡೆಯಲಾಗುತ್ತಿದೆ.

ದ್ರಾಕ್ಷಿ ಕೂಡಾ ಬೆಳೆಯುತ್ತಾರೆ

ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಣಸಿಗದ ದ್ರಾಕ್ಷಿ ಬಳ್ಳಿಗಳನ್ನೂ ಈ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಸಹಾಯದಿಂದ ಬೆಳೆಯುತ್ತಿದ್ದು, ಕಳೆದ ವರ್ಷ ಸುಮಾರು 4-5 ಕಿಲೋದಷ್ಟು ದ್ರಾಕ್ಷಿ ಹಣ್ಣನ್ನು ಪಡೆದಿದ್ದಾರೆ. ಈ ಬಾರಿ ಮತ್ತೆ ದ್ರಾಕ್ಷಿ ಬಳ್ಳಿಯಲ್ಲಿ ಹಣ್ಣು ಬಿಟ್ಟಿದ್ದು, ದ್ರಾಕ್ಷಿಯನ್ನು ದಕ್ಷಿಣಕನ್ನಡ ನೆಲದಲ್ಲೂ ಬೆಳೆಯಬಹುದು ಎನ್ನುವುದನ್ನು ಈ ಶಾಲೆ ಶಿಕ್ಷಕರು ಮತ್ತು ಮಕ್ಕಳು ತೋರಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಪೆರ್ಲಾಪು ಶಾಲೆಯ ದೈಹಿಕ ಶಿಕ್ಷಕರಾದ ಬಾಸ್ಕರ ನಾಯ್ಕ್.

ಇದನ್ನೂ ಓದಿ: Mangaluru: ಹಿಜಾಬ್ ಗಲಾಟೆ ವೇಳೆ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದವ ಅರೆಸ್ಟ್! ಫೇಕ್‌ ಅಕೌಂಟ್ ಹಿಂದಿರೋದು ಇದೇ ಆರೋಪಿ

ಪರಿಸರಕ್ಕೆ ಹೆಚ್ಚಿನ ಒತ್ತನ್ನು ಈ ಶಾಲೆಯಲ್ಲಿ ನೀಡಲಾಗುತ್ತಿರುವುದರ ಜೊತೆಗೆ ಸ್ವಚ್ಛತೆಗೂ ಇಲ್ಲಿ ಪ್ರಥಮ ಆದ್ಯತೆಯನ್ನು ನೀಡಲಾಗಿದೆ. ಒಂದು ಕಾಲದಲ್ಲಿ ಶೌಚಾಲಯವನ್ನೇ ನೋಡದ ಈ ಶಾಲೆಯಲ್ಲಿ ಇದೀಗ ಯಾವ ಸರಕಾರಿ ಶಾಲೆಯಲ್ಲೂ ಇರದ ಆಧುನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ.

ಹೈಟೆಕ್ ಶೌಚಾಲಯ

ಸರಕಾರಿ ಶಾಲೆಗಳಲ್ಲಿರುವ ಹಳೆ ಶೌಚಾಲಯದ ವ್ಯವಸ್ಥೆಗೆ ತಿಲಾಂಜಲಿಯಿಟ್ಟಿರುವ ಈ ಶಾಲೆ ಗ್ರಾಮೀಣ ಭಾಗದ ಮಕ್ಕಳು ಹೊಸ ಶೌಚಾಲಯ ವ್ಯವಸ್ಥೆಗೂ ಒಗ್ಗಿಕೊಳ್ಳಲಿ ಎನ್ನುವ ಕಾರಣಕ್ಕೆ ಹೈಟೆಕ್ ಶೌಚಾಲಯವನ್ನೂ ನಿರ್ಮಿಸಿದೆ. ಜಿಲ್ಲೆಯ ಮಟ್ಟಿಗೆ ಅತ್ಯಂತ ಅಪರೂಪವಾಗಿರುವ ಈ ಶಾಲೆಯ ಆವರಣವನ್ನು ಸುತ್ತಿದೆಲ್ಲಾ ಕಡೆ ಅಪರೂಪದ ಗಿಡ-ಮರ-ಬಳ್ಳಿಗಳ ಪರಿಚಯವಾಗುತ್ತದೆ ಎನ್ನುತ್ತಾರೆ ಕಡೇಶ್ವಾಲ್ಯ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷೆ  ಶ್ಯಾಮಲಾ.

ಇದನ್ನೂ ಓದಿ: Shivamogga ವಿಮಾನ ನಿಲ್ದಾಣಕ್ಕೆ ಬಿಎಸ್​ ಯಡಿಯೂರಪ್ಪ ಹೆಸರು; ಸಿಎಂ ಬಸವರಾಜ ಬೊಮ್ಮಾಯಿ

ಆಧುನೀಕತೆ ಕಡೆ ವಾಲುತ್ತಿರುವ ಇತ್ತೀಚಿನ ಮಕ್ಕಳನ್ನು ಮತ್ತೆ ಪರಿಸರದ ಕಡೆಗೆ ಕರೆತರಬೇಕು ಎನ್ನುವ ಉದ್ಧೇಶದಿಂದ ಈ ಶಾಲೆಯನ್ನು ಹಸಿರು ಶಾಲೆಯಾಗಿ ಬದಲಾಯಿಸಲಾಗಿದೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಪರಿಸರ ಸ್ನೇಹವೂ ಜಾಗೃತವಾಗಿರಲಿ ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಈ ರೀತಿಯ ಪ್ರಯೋಗಗಳು , ಪ್ರಯತ್ನಗಳು ನಡೆಯಬೇಕಿದೆ.
Published by:Divya D
First published: