Dakshina Kannada: ವೀಳ್ಯದೆಲೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ಪುತ್ತೂರಿನ ರೈತ ಮಹಿಳೆ

Betel Leaf Benefits: ಕೃಷಿ ಕುಟುಂಬದಿಂದಲೇ ಬಂದಿರುವ ಪುತ್ತೂರಿನ ಜಯಂತಿ ಇದೀಗ 100ಕ್ಕೂ ಮಿಕ್ಕಿದ ವೀಳ್ಯದೆಲೆಯ ಬುಡಗಳನ್ನು ಬೆಳೆಯುತ್ತಿದ್ದಾರೆ. ವರ್ಷಕ್ಕೆ 2ರಿಂದ 3 ಲಕ್ಷದಷ್ಟು ಆದಾಯವನ್ನು ಕೇವಲ ವೀಳ್ಯದೆಲೆಯಿಂದಲೇ ಪಡೆಯುತ್ತಿರುವ ಇವರು ಆದರ್ಶ ಮಹಿಳಾ ಕೃಷಿಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ.

news18-kannada
Updated:September 15, 2020, 12:18 PM IST
Dakshina Kannada: ವೀಳ್ಯದೆಲೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ಪುತ್ತೂರಿನ ರೈತ ಮಹಿಳೆ
ಪುತ್ತೂರಿನಲ್ಲಿ ವೀಳ್ಯದೆಲೆ ಬೆಳೆದ ಮಹಿಳೆ
  • Share this:
ಮಂಗಳೂರು (ಸೆ. 15): ದೈನಂದಿನ ಬದುಕಿಗಾಗಿ ಮನುಷ್ಯನಿಗೆ ‍‍ಒಂದಲ್ಲಾ ಒಂದು ಉದ್ಯೋಗ ಅನಿವಾರ್ಯವಾಗಿದ್ದು, ಕೃಷಿಯೂ ಇಂದು ಹೆಚ್ಚಿನ ಆದಾಯ ತರುವ ಉದ್ಯೋಗದಂತೇ ಬೆಳೆದುನಿಂತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಕೃಷಿಕರು ಅಡಿಕೆ, ರಬ್ಬರ್ ನಂತಹ ದೀರ್ಘಾವಧಿ ಬೆಳೆಯ ಜೊತೆಗೆ ಇನ್ನಿತರ ಅಲ್ಪಾವಧಿ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಇಂಥಹುದೇ ಕೈತುಂಬಾ ಆದಾಯವನ್ನು ಗಳಿಸುತ್ತಿರುವ ಪುತ್ತೂರಿನ ಮಹಿಳೆಯೊಬ್ಬರು ಕೃಷಿಯಲ್ಲಿ ತಾನು ಪುರುಷರಿಗಿಂತ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕರ್ನೂರು ನಿವಾಸಿ ಜಯಂತಿ ರೈ ಕೃಷಿಯಲ್ಲಿ ಪ್ರಗತಿ ತೋರುತ್ತಿರುವ ಮಹಿಳೆಯಾಗಿದ್ದಾರೆ.  ಪ್ರಗತಿಪರ ಕೃಷಿಕ ಕರ್ನೂರು ಸತೀಶ್ ರೈ ಜೊತೆ ಜಯಂತಿ ರೈ ಕೂಡ ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡವರು. ಪತಿ ಸತೀಶ್ ರೈ ಅಡಿಕೆ ಹಾಗೂ ಗೇರು ಕೃಷಿಯಲ್ಲಿ ಹೆಸರುವಾಸಿಯಾಗಿದ್ದರೆ, ಪತ್ನಿ ಜಯಂತಿ ಮಾತ್ರ ತೋಟದ ಮಧ್ಯದಲ್ಲಿ ಬೆಳೆಯುವ ಉಪಬೆಳೆಯಾದ ವೀಳ್ಯದೆಲೆ ಕೃಷಿಯಲ್ಲಿ ಹೆಸರುವಾಸಿಯಾಗಿದ್ದಾರೆ.

ಕೃಷಿ ಕುಟುಂಬದಿಂದಲೇ ಬಂದಿರುವ ಜಯಂತಿ ಗಂಡನ ಜೊತೆಗೆ ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಮಯದಲ್ಲಿ ವೀಳ್ಯದೆಲೆಯನ್ನು ಬೆಳೆಸಲು ಆರಂಭಿಸಿದರು. ಇದೀಗ 100ಕ್ಕೂ ಮಿಕ್ಕಿದ ವೀಳ್ಯದೆಲೆಯ ಬುಡಗಳನ್ನು ಬೆಳೆಯುತ್ತಿರುವ ಇವರು ವಾರಕ್ಕೆ 5ರಿಂದ 7 ಸಾವಿರ ರೂ.ಗಳನ್ನು ಕೇವಲ ವೀಳ್ಯದೆಲೆಯನ್ನು ಮಾರಿಯೇ ಗಳಿಸುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ವೀಳ್ಯದೆಲೆಗಳನ್ನು ಗಿಡಗಳಿಂದ ಸಂಗ್ರಹಿಸುವ ಇವರಿಗೆ ಮಕ್ಕಳೂ ಸಾಥ್ ನೀಡುತ್ತಿದ್ದಾರೆ.

ಇದೇ ಕಾರಣಕ್ಕಾಗಿಯೇ ಈ ವೀಳ್ಯದೆಲೆಯಿಂದ ಸಂಗ್ರಹವಾದ ಆದಾಯವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಇತರ ಅವಶ್ಯಕತೆಗಳಿಗೆ ಬಳಸಿಕೊಳ್ಳುತ್ತಿರುವ ಜಯಂತಿ ರೈ ಉಳಿದ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿಯನ್ನೂ ಇಡುತ್ತಿದ್ದಾರೆ. ಸಾವಯವ ಗೊಬ್ಬರಗಳನ್ನು ಬಳಸಿ ಸಮೃದ್ಧ ವೀಳ್ಯದೆಲೆಗಳನ್ನು ಬೆಳೆಸುತ್ತಿರುವ ಇವರ ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇದೆ.

ಮನಸ್ಸಿದ್ದರೆ ಯಾವ ಕೃಷಿಯಲ್ಲೂ ಉತ್ತಮ ಆದಾಯ ಗಳಿಸಬಹುದು ಎನ್ನುವುದಕ್ಕೆ ಜಯಂತಿ ರೈ ಅವರು ಒಂದು ಸೂಕ್ತ ನಿದರ್ಶನವೂ ಆಗಿದ್ದಾರೆ. ಮನೆಯ ಕೆಲಸದ ಜೊತೆಗೆ ತನ್ನ ವೀಳ್ಯದೆಲೆಯ ತೋಟವನ್ನೂ ನೋಡಿಕೊಳ್ಳುತ್ತಿರುವ ಜಯಂತಿ ಅವರ ಶ್ರಮಕ್ಕೆ ಇಂದು ಉತ್ತಮ ಪ್ರತಿಫಲವೂ ದೊರೆಯುತ್ತಿದೆ. ವರ್ಷಕ್ಕೆ 2ರಿಂದ 3 ಲಕ್ಷದಷ್ಟು ಆದಾಯವನ್ನು ಕೇವಲ ವೀಳ್ಯದೆಲೆಯಿಂದಲೇ ಪಡೆಯುತ್ತಿರುವ ಇವರು ಓರ್ವ ಆದರ್ಶ ಮಹಿಳಾ ಕೃಷಿಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ.



ಕೇವಲ ಒಂದೇ ಬೆಳೆಯನ್ನು ಆಶ್ರಯಿಸಿ , ಮಾರುಕಟ್ಟೆ ಎದ್ದಾಗ ಏಳುವ, ಮಾರುಕಟ್ಟೆ ಬಿದ್ದಾಗ ಕುಸಿಯುವ ಕುಟುಂಬಗಳು ಜಯಂತಿ ಅವರ ಕೃಷಿಯನ್ನೊಮ್ಮೆ ನೋಡಿ ತಿಳಿದುಕೊಳ್ಳುವುದು ಸಾಕಷ್ಟಿದೆ. ಉಪಬೆಳೆಯ ಮೂಲಕವೂ ಉತ್ತಮ ಆದಾಯವನ್ನು ಗಳಿಸಿ ಜೀವನ ಹಸನಾಗಿಸಬಹುದು ಎನ್ನುವುದಕ್ಕೆ ಜಯಂತಿ ಅವರು ಸಾಕ್ಷಿಯಾಗಿಯೂ ನಿಂತಿದ್ದಾರೆ.
Published by: Sushma Chakre
First published: September 15, 2020, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading