ದಕ್ಷಿಣ ಕನ್ನಡ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ, ಹಿಂಪಡೆಯಲು ಬಿಜೆಪಿ ರಣತಂತ್ರ

news18
Updated:August 29, 2018, 3:04 PM IST
ದಕ್ಷಿಣ ಕನ್ನಡ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ, ಹಿಂಪಡೆಯಲು ಬಿಜೆಪಿ ರಣತಂತ್ರ
news18
Updated: August 29, 2018, 3:04 PM IST
ಅಜಿತ್​ ಕುಮಾರ್ ಪುತ್ತೂರು, ನ್ಯೂಸ್ 18 ಕನ್ನಡ

ದಕ್ಷಿಣಕನ್ನಡ (ಆ.29): ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ, ಉಳ್ಳಾಲ ಹಾಗೂ ಬಂಟ್ವಾಳ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಸಾಧಿಸಿದ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಮೂರೂ ಸ್ಥಳೀಯ ಸಂಸ್ಥೆಗಳ ಅಧಿಕಾರದ ಗದ್ದುಗೆಯನ್ನು ಹಿಡಿಯುವ ವಿಶ್ವಾಸದಲ್ಲಿ ಬಿಜೆಪಿಯಿದ್ದರೆ, ಕಾಂಗ್ರೆಸ್ ಮತ್ತೆ ಈ ಮೂರು ಸಂಸ್ಥೆಗಳ ಆಡಳಿತವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಪುತ್ತೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕದ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದೆ. ಪುರಸಭೆಯಾಗಿದ್ದ ಸಂದರ್ಭದಲ್ಲಿ 27 ಇದ್ದ ವಾರ್ಡ್ ಗಳ ಸಂಖ್ಯೆ ಇದೀಗ 31 ಕ್ಕೆ ಏರಿಕೆಯಾಗಿದೆ. 1973 ರಿಂದ ಈವರೆಗೆ ಬಿಜೆಪಿ ಪಕ್ಷವೇ ಬಹುತೇಕ ಪುತ್ತೂರು ಪುರಸಭೆಯ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ, ಕಾಂಗ್ರೆಸ್ ಕೇವಲ ಎರಡು ಬಾರಿ ಆಡಳಿತವನ್ನು ನಡೆಸಿದೆ. ಈ ಬಾರಿ 31 ವಾರ್ಡ್ ಗಳಿಗೆ 77 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ 31, ಬಿಜೆಪಿ 31, ಜೆಡಿಎಸ್ 9, ಬಿಎಸ್​ಪಿ 1 , ಎಸ್.ಡಿ.ಪಿ.ಐ 3 ಹಾಗೂ ಪಕ್ಷೇತರರು 2 ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಪುತ್ತೂರಿಗೆ ಸಂಬಂಧಿಸಿದಂತೆ ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಾಗಿದ್ದು, ಉಳಿದ ಪಕ್ಷಗಳು ಇಲ್ಲಿ ನಗಣ್ಯದಂತಿದೆ.

 

ಉಳ್ಳಾಲ ಪುರಸಭೆಯು ಈ ಬಾರಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ್ದು, ಇದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಉಳ್ಳಾಲದಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಪುರಸಭೆಯ ಆಡಳಿತವನ್ನು ನಡೆಸಿಕೊಂಡು ಬಂದಿದೆ. 27 ಇದ್ದ ವಾರ್ಡ್ ಗಳ ಸಂಖ್ಯೆ ಇದೀಗ 31 ಕ್ಕೆ ಏರಿದ್ದು, ಒಟ್ಟು 102 ಅಭ್ಯರ್ಥಿಗಳು ಇದೀಗ ಕಣದಲ್ಲಿದ್ದಾರೆ. ಕಾಂಗ್ರೆಸ್ 31, ಬಿಜೆಪಿ 24, ಜೆಡಿಎಸ್ 21, ಎಸ್.ಡಿ.ಪಿ.ಐ 9, ಸಿ.ಪಿ.ಐ 5 ಹಾಗೂ ಪಕ್ಷೇತರ 1 ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆ. ರಾಜ್ಯ ಜೆಡಿಎಸ್ ನಲ್ಲಿರುವಂತೆ ಉಳ್ಳಾಲ ನಗರಸಭಾ ಚುನಾವಣೆಯಲ್ಲೂ ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ. ಇಲ್ಲಿನ ನಾಲ್ಕು ವಾರ್ಡ್​ಗಳಲ್ಲಿ ಗಂಡ -ಹೆಂಡತಿ, ಅಣ್ಣ-ತಮ್ಮ ಜೆಡಿಎಸ್ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ಕಾರಣ ಹಾಗೂ ಅಲ್ಪಸಂಖ್ಯಾತ ಮತಗಳೇ ಹೆಚ್ಚಾಗಿರುವ ಕಾರಣ ಈ ಬಾರಿಯೂ ಕಾಂಗ್ರೆಸ್ ಗೆ ಇಲ್ಲಿ ಅದೃಷ್ಟ ಖುಲಾಯಿಸುವ ಸಾಧ್ಯೆತೆಗಳು ಹೆಚ್ಚಾಗಿದೆ. ಈ ನಡುವೆ ಜೆ.ಡಿ.ಎಸ್ ಕೂಡ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿರುವ ಕಾರಣ ಉಳ್ಳಾಲದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯೂ ಇದೆ.

ಬಂಟ್ವಾಳ ಪುರಸಭೆ

ನಿರಂತರವಾಗಿ ಬಿಜೆಪಿಯ ಕೈಯಲ್ಲಿದ್ದ ಬಂಟ್ವಾಳ ಪುರಸಭೆಯನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಕೈ ವಶ ಮಾಡಿಕೊಂಡಿತ್ತು. ಕಳೆದ ಬಾರಿ 23 ವಾರ್ಡ್ ಗಳನ್ನು ಹೊಂದಿದ್ದ ಬಂಟ್ವಾಳ ಪುರಸಭೆಗೆ ಈ ಬಾರಿ ನಾಲ್ಕು ವಾರ್ಡ್​ಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದು, ವಾರ್ಡ್​ಗಳ ಸಂಖ್ಯೆ ಇದೀಗ 27 ಆಗಿದೆ. 27 ವಾರ್ಡ್​ಗಳಿಗೆ ಇದೀಗ ಕಣದಲ್ಲಿ 71 ಅಭ್ಯರ್ಥಿಗಳಿದ್ದು, ಬಿಜೆಪಿ 27, ಕಾಂಗ್ರೆಸ್ 25, ಜೆಡಿಎಸ್ 5, ಎಸ್.ಡಿ.ಪಿ.ಐ 12, ಸಿಪಿಐಎಂ 1 ಹಾಗೂ ಪಕ್ಷೇತರ 1 ಸ್ಥಾನಕ್ಕೆ ಅಭ್ಯರ್ಥಿಗಳು  ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಈ ಬಾರಿ ಐವರು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅಲ್ಪಸಂಖ್ಯಾತ ಮತಗಳ ಓಲೈಕೆಗೂ ಮುಂದಾಗಿದೆ. ಈ ಬಾರಿ ಬಂಟ್ವಾಳದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಮೊದಲ ಬಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ರಾಜೇಶ್ ನಾಯ್ಕ್ ಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಈ ಬಾರಿ ಬಂಟ್ವಾಳ ಪುರಸಭೆಯ ಅಧಿಕಾರವನ್ನು ಪಡೆಯುವ ತಂತ್ರದಲ್ಲಿ ನಿರತರಾಗಿದ್ದಾರೆ.
Loading...

ಯಾವುದೇ ಕಾರಣಕ್ಕೂ ಮೂರೂ ಸ್ಥಳೀಯ ಸಂಸ್ಥೆಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ರಣತಂತ್ರಗಳನ್ನು ಹೆಣೆದುಕೊಂಡಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ