ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ನಿರ್ಮಾಣವಾದ ಪರಿಸರ ಸ್ನೇಹಿ ತರಗತಿ ಕೊಠಡಿ‌

ಒಂದು ಕಡೆ ಬೇಸಿಗೆಯ ವಿಪರೀತ ಉಷ್ಣಾಂಶದಿಂದ ಕಾಂಕ್ರೀಟ್ ಕಟ್ಟಡದ ಒಳಗೆ ಕುಳಿತು ತರಗತಿ ಕೇಳುವುದು ಒಂದು ರೀತಿಯ ಶಿಕ್ಷೆಯಾಗಿರುವ ಕಾರಣ, ವಿದ್ಯಾರ್ಥಿಗಳಿಗಾಗಿ ಇಕೋ ಫ್ರೆಂಡ್ ಲೀ ಕ್ಲಾಸ್ ರೂಂ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿತ್ತು.

ಪರಿಸರ ಸ್ನೇಹಿ ಶಾಲೆ

ಪರಿಸರ ಸ್ನೇಹಿ ಶಾಲೆ

  • Share this:
ದಕ್ಷಿಣ ಕನ್ನಡ(ಏ.12): ದೇಶದ ಬಹುತೇಕ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಇರೋದು ಸಾಮಾನ್ಯವೇ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಕೊಠಡಿಗಳ ಸಮಸ್ಯೆ ಹೆಚ್ಚಾಗಿದ್ದು, ಕೊಠಡಿ ನಿರ್ಮಿಸಿಕೊಡುವಂತೆ ಅಧಿಕಾರಿಗಳ, ಜನಪ್ರತಿನಿಧಿಗಳ ಹಿಂದೆ ದಂಬಾಲು ಬೀಳೋದು ಅನಿವಾರ್ಯವೂ ಆಗಿ ಹೋಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಸರಕಾರಿ ಕಾಲೇಜಿನ ಮಕ್ಕಳು ತರಗತಿಯ ಕೊರತೆಗೆ ಪರಿಹಾರವೊಂದನ್ನು ಹುಡುಕಿಕೊಂಡಿದ್ದಾರೆ. ಗ್ರಾಮಸ್ಥರಿಂದ ಸೋಗೆ, ಅಡಿಕೆ ಮರದ ಕಂಬ ಹೀಗೆ ಹಲವು ರೀತಿಯ ಪರಿಸರದಿಂದ ಸಿಗುವ ವಸ್ತುಗಳನ್ನು ಸಂಗ್ರಹಿಸಿ ಇಕೋ ಫ್ರೆಂಡ್ ಲೀ ಕ್ಲಾಸ್ ರೂಂ ಒಂದನ್ನು ನಿರ್ಮಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಕಾಂಕ್ರೀಟ್ ಕಟ್ಟಡದಲ್ಲಿ ಬೇಯುತ್ತಿದ್ದ ವಿದ್ಯಾರ್ಥಿಗಳಿಗೆ ಇದೀಗ ಈ ನಿರ್ಮಾಣವೇ ಅತ್ಯಂತ ಅಚ್ಚುಮೆಚ್ಚಿನ ಕ್ಲಾಸ್ ರೂಮ್ ಈಗಿ ಬದಲಾಗಿದೆ.

ಹೌದು,  ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕ್ಲಾಸ್ ರೂಂ ನ ಸ್ಟೋರಿ. ಪ್ರತೀ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಇರುವಂತೆ ಕೆಯ್ಯೂರು ಪದವಿ ಪೂರ್ವ ಕಾಲೇಜಿನಲ್ಲೂ ತರಗತಿಯ ಕೊರತೆಯಿದೆ. ಹಾಗೆಂದು ಈ ಸಮಸ್ಯೆಯನ್ನು ಇಲ್ಲಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಂಬಂಧಪಟ್ಟ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಸರಕಾರದ ಕೆಲವೊಂದು ನಿಯಮ-ನಿಬಂಧನೆಗಳಿಗೆ ಅನುಗುಣವಾಗಿಯೇ ಅನುದಾನಗಳನ್ನು ಒದಗಿಸುವ ಕಾರಣ, ಈವರೆಗೂ ಸರಕಾರದಿಂದ ಅನುದಾನ ಬಂದಿಲ್ಲ. ಆದರೆ ತರಗತಿಯ ಕೊರತೆಯನ್ನು ಈ ಬಾರಿ ವಿದ್ಯಾರ್ಥಿಗಳೇ ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಕಾಲೇಜಿನ ಪ್ರಾಂಶುಪಾಲರೂ ಇದಕ್ಕೆ ಕೈಜೋಡಿಸಿದ್ದಾರೆ.

Maski By Election: ಬಿಜೆಪಿ ಅಭ್ಯರ್ಥಿಗೆ ಕೊರೋನಾ ಪಾಸಿಟಿವ್; ಘಟಾನುಘಟಿ ನಾಯಕರಿಂದ ಭರ್ಜರಿ ಪ್ರಚಾರ

ಒಂದು ಕಡೆ ಬೇಸಿಗೆಯ ವಿಪರೀತ ಉಷ್ಣಾಂಶದಿಂದ ಕಾಂಕ್ರೀಟ್ ಕಟ್ಟಡದ ಒಳಗೆ ಕುಳಿತು ತರಗತಿ ಕೇಳುವುದು ಒಂದು ರೀತಿಯ ಶಿಕ್ಷೆಯಾಗಿರುವ ಕಾರಣ, ವಿದ್ಯಾರ್ಥಿಗಳಿಗಾಗಿ ಇಕೋ ಫ್ರೆಂಡ್ ಲೀ ಕ್ಲಾಸ್ ರೂಂ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿತ್ತು. ಪ್ರಾಂಶುಪಾಲರು ಕ್ಲಾಸ್ ರೂಂ ಯಾವ ರೀತಿ ಆಗಬೇಕು ಎನ್ನುವ ರೂಪುರೇಶೆ ಸಿದ್ಧಪಡಿಸಿ ನೀಡಿದ್ದು, ಉಳಿದ ಕೆಲಸವನ್ನೆಲ್ಲಾ ವಿದ್ಯಾರ್ಥಿಗಳೇ ಮಾಡಿ ಮುಗಿಸಿದ್ದಾರೆ. ಕ್ಲಾಸ್ ರೂಂ ನಿರ್ಮಾಣಕ್ಕೆ ಬೇಕಾದ ಕಂಬ, ಸೋಗೆಗಳನ್ನು ಸ್ಥಳೀಯ ಕೃಷಿಕರೇ ಉದಾರವಾಗಿ ನೀಡಿದ್ದು, ಇವುಗಳನ್ನು ಬಳಸಿಕೊಂಡೇ ಪೂರ್ಣಗೊಳಿಸಲಾಗಿದೆ. ಕ್ಲಾಸ್ ರೂಂ ನ ಸುತ್ತಲೂ ಗ್ರೀನ್ ನೆಟ್ ಬಳಸಿ ತರಗತಿಯ ಒಳಗೆ ತಂಪಾಗುವಂತೆ ನೋಡಿಕೊಳ್ಳಲಾಗಿದ್ದು, ಛಾವಣಿಗೆ ಅಡಿಕೆ ಹಾಗೂ ತೆಂಗಿನ ಸೋಗೆಯನ್ನು ಬಳಸಲಾಗಿದೆ.

ಪ್ರಕೃತಿಯಿಂದಲೇ ಸಿಗುವ ವಸ್ತುಗಳನ್ನೇ ಬಳಸಿ ಈ ತರಗತಿಯನ್ನು ನಿರ್ಮಿಸಲಾಗಿದ್ದು, ಎರಡು ತರಗತಿಗಳನ್ನು ಆರಾಮವಾಗಿ ನಡೆಸುವಂತಹ ವಿಸ್ತ್ರೀರ್ಣವನ್ನೂ ಈ ಪರಿಸರ ಸ್ನೇಹಿ ಕೊಠಡಿ ಹೊಂದಿದೆ.ಈ ಕೊಠಡಿ ನಿರ್ಮಾಣದ ಮುಖ್ಯ ಉದ್ದೇಶ  ವಿದ್ಯಾರ್ಥಿಗಳು ಪ್ರಕೃತಿದತ್ತವಾದ ಅನುಭವ ಪಡೆದುಕೊಳ್ಳುವುದು ಹಾಗೂ ಕಾಲೇಜಿನಲ್ಲಿ ಇರುವ ಕೊಠಡಿ ಕೊರತೆಯ ಸಮಸ್ಯೆಯನ್ನು ಸದ್ಯದ ಮಟ್ಟಿಗೆ ನೀಗಿಸುವುದಾಗಿದೆ. ಸುಮಾರು 10 ಸಾವಿರ ರೂಪಾಯಿಗಳಲ್ಲಿ ಈ ಕ್ಲಾಸ್ ರೂಂ ಸಿದ್ಧಗೊಂಡಿದ್ದು, ಇದೇ ವಿಸ್ತ್ರೀರ್ಣದ ಕಾಂಕ್ರೀಟ್ ಕಟ್ಟಡಕ್ಕೆ ಸರಕಾರಿ ಅಂದಾಜಿನ ಪ್ರಕಾರ 23 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಟ್ಟಿರುವ ಈ ವಿದ್ಯಾಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳತೊಡಗಿದೆ. ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿರುವ ಈ ವಿದ್ಯಾ ಸಂಸ್ಥೆಯ ಕಾಲೇಜು ವಿಭಾಗಕ್ಕೆ ತರಗತಿ ಕೊಠಡಿಗಳ ಕೊರತೆಯೂ ಇರುವುದರಿಂದ ಈ ಪರಿಸರ ಸ್ನೇಹಿ ಕುಟೀರ ಅನಿವಾರ್ಯತೆಯ ನೆಲೆಯಲ್ಲಿಯು ನಿರ್ಮಾಣವಾಗಿದೆ. ಆದರೆ ಇದೀಗ ಇಲ್ಲಿನ ವಿದ್ಯಾರ್ಥಿಗಳಿಗೆ ಕಾಂಕ್ರೀಟ್ ಕಟ್ಟಡಕ್ಕಿಂತ ಈ ಕುಟೀರದಲ್ಲೇ ಪಾಠ ಕೇಳುವುದು ಇಷ್ಟವಾಗಿದೆ. ಬೇಸಿಗೆಯಲ್ಲಿ ಅತ್ಯಂತ ತಂಪಿನ ಅನುಭವವನ್ನು ಈ ಕುಟೀರ ನೀಡುತ್ತಿದ್ದು, ಹಿಂದಿನ ಕಾಲದ ವಿದ್ಯಾರ್ಜನೆಯ ಅನುಭವವನ್ನೂ ಇದು ನೀಡುತ್ತಿದೆ.

ಕಲಾ, ವಾಣಿಜ್ಯ, ವಿಜ್ಞಾನ ಹೀಗೆ ಮೂರು ವಿಭಾಗಗಳು ಇರುವ ಕಾಲೇಜಿಗೆ 6 ತರಗತಿ ಕೊಠಡಿಗಳು, 3 ಪ್ರಯೋಗಾಲಯ ಕೊಠಡಿ, 1 ಗ್ರಂಥಾಲಯ ಕೊಠಡಿ, 1 ಕಂಪ್ಯ್ಯೂಟರ್ ಕೊಠಡಿ ಸೇರಿದಂತೆ ಒಟ್ಟು 11 ಕೊಠಡಿಗಳ ಕೊರತೆಯಿದೆ. ಪ್ರೌಢಶಾಲಾ ವಿಭಾಗದಿಂದ 3 ಕೊಠಡಿಗಳನ್ನು ಎರವಲು ಪಡೆದು ಕಾಲೇಜು ವಿಭಾಗದ ತರಗತಿಗಳನ್ನು ನಡೆಸಲಾಗುತ್ತಿದೆ.
Published by:Latha CG
First published: