ಮಂಗಳೂರು (ಅ. 27): ಜನಪ್ರತಿನಿಧಿಯೋ, ಸೆಲೆಬ್ರಿಟಿಯೋ ನಿಧನ ಹೊಂದಿದರೆ ಯಾವ ರೀತಿ ಮೆರವಣಿಗೆಯ ಮೂಲಕ ಅಂತ್ಯಸಂಸ್ಕಾರ ನೆರವೇರುತ್ತದೋ ಅದೇ ರೀತಿಯ ಗೌರವ ಭಿಕ್ಷುಕನಿಗೆ ದೊರೆತರೆ ಅದು ಆತನಿಗೆ ಸಮಾಜ ನೀಡುವ ನಿಜವಾದ ಗೌರವ. ಹೌದು, ಇದೇ ರೀತಿಯ ಗೌರವ ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ, ಕೊಕ್ಕಡ ಪರಿಸರದಲ್ಲಿ ಭಿಕ್ಷೆ ಬೇಡಿ ಅಲೆಮಾರಿಯಂತೆ ತಿರುಗುತ್ತಿದ್ದ ಭಿಕ್ಷುಕನೋರ್ವನಿಗೆ ಸಂದಿದೆ. 25 ವರ್ಷಗಳ ಹಿಂದೆ ನೆಲ್ಯಾಡಿ ಹಾಗೂ ಕೊಕ್ಕಡ ಪರಿಸರದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ ಆ ಭಿಕ್ಷುಕನ ಹಾವ-ಭಾವ ಕಂಡು ಆ ಭಾಗದ ಜನ ಆತನನ್ನು ಭಿಕ್ಷುಕ ಎಂದು ಗುರುತಿಸಿಯೇ ಇರಲಿಲ್ಲ. ಅಜಾನುಬಾಹುವಾಗಿದ್ದ ಆ ಭಿಕ್ಷುಕನನ್ನು ಆರಂಭದಲ್ಲಿ ಯಾವುದೋ ಪ್ರಕರಣ ಭೇದಿಸಲು ಬಂದಿರುವ ಸಿಐಡಿಯೇ ಇರಬೇಕೆಂದು ಊಹಿಸಿದ್ದರು!
ಯಾರ ಬಳಿಯೂ ಮಾತನಾಡದೆ, ತನ್ನ ಪಾಡಿಗೆ ತಾನು ಇರುತ್ತಿದ್ದ ಈತನನ್ನು ನೆಲ್ಯಾಡಿ ಭಾಗದ ಜನ ಸಿಐಡಿ ಶಂಕರ್ ಎಂದೇ ಸಂಭೋದಿಸುತ್ತಿದ್ದರು. ಪರಿಸರದ ಹೋಟೆಲ್ ಮಂದಿ ನೀಡುವ ಊಟೋಪಚಾರವನ್ನು ಸ್ವೀಕರಿಸಿ, ಗ್ರಾಮ ಪಂಚಾಯತ್ ಅಥವಾ ಇನ್ಯಾವುದೋ ಕಟ್ಟಡದ ಮುಂದೆ ರಾತ್ರಿ ಕಳೆಯುತ್ತಿದ್ದ ಶಂಕರ್ ಆ ಭಾಗದ ಜನರ ಅತ್ಯಂತ ಪ್ರೀತಿಗೂ ಪಾತ್ರನಾಗಿದ್ದರು. ಅಂಗಡಿ ಅಂಗಡಿಗೆ ತೆರಳಿ ಭಿಕ್ಷೆ ಬೇಡಲು ಹೋಗುವ ಸಂದರ್ಭದಲ್ಲಿ ತನಗೆ ಬೇಕಾದ ನಾಣ್ಯ ಸಿಗದೇ ಹೋದರೆ ಆ ಅಂಗಡಿಯಿಂದ ಒಂದಿಂಚೂ ಕದಲದೆ ತಾನು ಬಯಸಿದ ನಾಣ್ಯಕ್ಕಾಗಿ ಅಲ್ಲೇ ನಿಲ್ಲುತ್ತಿದ್ದ ಶಂಕರ್ ಗುಣ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ತಾನು ಭಿಕ್ಷೆ ಮೂಲಕ ಸಂಗ್ರಹಿಸಿದ ಹಣವನ್ನು ತನಗೆ ಅನ್ನ ನೀಡಿದ ಹೋಟೆಲ್ ಹಾಗೂ ಇತರ ಅಂಗಡಿಯ ಟೇಬಲ್ ನಲ್ಲಿ ಹಾಕಿ ಹೋಗುತ್ತಿದ್ದ. ಹೀಗೆ ಆ ಭಾಗದ ಜನರ ಒಡನಾಡಿಯಾಗಿದ್ದ ಶಂಕರ್ ನಿನ್ನೆ ಅಸ್ವಸ್ಥಗೊಂಡು ನಿಧನರಾಗಿದ್ದಾರೆ.
ಇದನ್ನೂ ಓದಿ: ಕಳ್ಳತನಕ್ಕೂ ಗೂಗಲ್ ಮೊರೆ!; ಮ್ಯಾಪ್ ಸಹಾಯದಿಂದ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ
ರಸ್ತೆ ಬದಿಯಲ್ಲಿದ್ದ ಕೆಸರನ್ನೆಲ್ಲಾ ಮೈಗೊತ್ತಿಕೊಂಡು ಅಲೆದಾಡುತ್ತಿದ್ದ ಶಂಕರ್ ಗೆ ನೆಲ್ಯಾಡಿ ಹಾಗೂ ಕೊಕ್ಕಡ ಭಾಗದ ಜನ ಚಿಕಿತ್ರೆಯನ್ನೂ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ನಿಧನರಾದ ಸುದ್ಧಿ ತಿಳಿದ ಪರಿಸರದ ಜನ ಜಾತಿ-ಧರ್ಮದ ಎಲ್ಲೆ ಮೀರಿ ಆತನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಪೋಲೀಸರೂ ಶಂಕರ್ ನಿಧನಕ್ಕೆ ಗೌರವ ಸಲ್ಲಿಸಿದ್ದರು. ಬೈಕ್, ಆಟೋ, ಕಾರು ಸೇರಿದಂತೆ ನೂರಕ್ಕೂ ಮಿಕ್ಕಿದ ವಾಹನಗಳಲ್ಲಿ ಆತನ ಮೃತದೇಹದ ಮೆರವಣಿಗೆ ನಡೆಸಲಾಗಿತ್ತು. ಊರು ಕೇರಿ , ಜಾತಿ, ಧರ್ಮ ಯಾವುದೆಂದು ತಿಳಿಯದೆ ಸಮಾಜದ ಎಲ್ಲಾ ಜನ ಶಂಕರ್ ಮೃತದೇಹಕ್ಕೆ ಅಶ್ರುತರ್ಪಣ ಸಲ್ಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ