ತೆಂಗಿನ ಗೆರಟೆಯಲ್ಲಿ ಜೇನು ಸಾಕಿ ಯಶಸ್ವಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ

ಜೇನುಗಳ ಗೂಡಿಗಾಗಿ ಅವರು ಆಯ್ದುಗೊಂಡದ್ದು ತೆಂಗಿನ ಗೆರಟೆಯನ್ನು. ಎಣ್ಣೆಯ ಅಂಶವಿರದ ತೆಂಗಿನ ಮೂರು ಗೆರಟೆಗಳನ್ನು ಜೋಡಿಸುವ ಮೂಲಕ ಜೇನುಗಳಿಗೆ ಜೇನು ಸಂಗ್ರಹಿಸಲು, ಪರಾಗ ಸಂಗ್ರಹಿಸಿಡಲು ಹಾಗೂ ತಮ್ಮ ಸಂಸಾರಾಭಿವೃದ್ಧಿಗೆ ಬೇಕಾದಂತಹ ಅವಕಾಶವನ್ನು ಕಲ್ಪಿಸುವ ಮೂಲಕ ವಿನೂತನ ಮಾದರಿಯಲ್ಲಿ ಜೇನು ಸಂಗ್ರಹಿಸುತ್ತಿದ್ದಾರೆ. 

news18-kannada
Updated:September 14, 2020, 3:28 PM IST
ತೆಂಗಿನ ಗೆರಟೆಯಲ್ಲಿ ಜೇನು ಸಾಕಿ ಯಶಸ್ವಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ
ಜೇನು ಸಾಕಿ ಯಶಸ್ಸು ಕಂಡಿರುವ ರೈತ ವೆಂಕಟಕೃಷ್ಣ
  • Share this:
ದಕ್ಷಿಣ ಕನ್ನಡ(ಸೆ.14): ನೂರಾರು ಎಕರೆ ಭೂಮಿಯಲ್ಲಿ ಬೆಳೆ ಬೆಳೆದರೆ ಮಾತ್ರ ಉತ್ತಮ ಉತ್ಪಾದನೆ ಸಾಧ್ಯ ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರೊಬ್ಬರು ಹುಸಿಯಾಗಿಸಿದ್ದಾರೆ. ಕೇವಲ ತೆಂಗಿನ ಗೆರಟೆಯನ್ನೇ ತನ್ನ ಬಂಡವಾಳವನ್ನಾಗಿಸಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಕೃಷಿಕ ಇವರು. ಅತ್ಯಂತ ಬೆಲೆ ಬಾಳುವ ಔಷಧೀಯ ಗುಣಮಟ್ಟದ ಮಿಸ್ರಿ ಜೇನುನೊಣಗಳನ್ನು  ಗೆರಟೆಯಲ್ಲಿ ಬೆಳೆಯುವ ಮೂಲಕ ಲಾಭದಾಯಕ ಕೃಷಿ ನಡೆಸುತ್ತಿದ್ದಾರೆ. ಯಾವ ರೀತಿಯಲ್ಲಿ ಹಳೆಯ ಮಧ್ಯಕ್ಕೆ ಬೆಲೆ ದುಪ್ಪಟ್ಟು ಸಿಗುತ್ತದೋ , ಅದೇ ರೀತಿಯಲ್ಲಿ ಈ ಜೇನು ಹಳತಾದಂತೆ ಬೆಲೆಯು ನಾಲ್ಕು ಪಟ್ಟು ಜಾಸ್ತಿಯಾಗುತ್ತದೆ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯ ಬೈಂಕ್ರೋಡಿ ನಿವಾಸಿ ವೆಂಕಟಕೃಷ್ಣ ಭಟ್ ಬೆಳೆಸುತ್ತಿರುವ ಮಿಸ್ರಿ ಜೇನುಗಳ ಸ್ಪೆಷ್ಯಾಲಿಟಿ.  ಅಡಿಕೆ, ಬಾಳೆ, ತೆಂಗು ಕೃಷಿಯೊಂದಿಗೆ ಸಾಮಾನ್ಯವಾಗಿ ಉಪೇಕ್ಷೆಗೆ  ಒಳಗಾಗಿರುವಂತಹ ಮಿಸ್ರಿ ಜೇನುಗಳ (ಕಿರು ಜೇನು)  ಸಾಕಾಣಿಕೆ ಇವರ ಪ್ರಮುಖ ಕಸುಬು.ಹೆಚ್ಚು ಜೇನು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಕೃಷಿಕರು ತನ್ನ ಕೃಷಿಯೊಂದಿಗೆ ಪೆಟ್ಟಿಗೆ ಜೇನುಗಳನ್ನು ಸಾಕುತ್ತಿದ್ದು, ಇದರಿಂದ ಹೆಚ್ಚಿನ ಜೇನು ಉತ್ಪಾದನೆಯನ್ನೂ ಮಾಡುತ್ತಿದ್ದಾರೆ. ಆದರೆ ವೆಂಕಟಕೃಷ್ಣ ಭಟ್ಟರದ್ದು ಮಾತ್ರ ಕೊಂಚ ಭಿನ್ನ ಆಲೋಚನೆ. ಗೋಡೆಗಳ ನಡುವೆ, ಬಿದಿರಿನ ಕೊಳವೆಯೊಳಗೆ ಹೀಗೆ ಎಲ್ಲೆಂದರಲ್ಲಿ ಗೂಡು ಮಾಡಿಕೊಂಡು ತನ್ನಷ್ಟಕ್ಕೆ ತಾನು ಜೇನು ಸಂಗ್ರಹಿಸಿ ಶೇಖರಿಸಿಡುತ್ತಿರುವ ಮಿಸ್ರಿ ಜೇನುಗಳಿಗೆ ಗೂಡನ್ನು ನಿರ್ಮಿಸಿ ಆ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು ಎನ್ನುವುದನ್ನು ಕಂಡುಕೊಂಡವರು ಈ ವೆಂಕಟಕೃಷ್ಣ.ಮನೆಯ ಸುತ್ತಮುತ್ತ ತನ್ನ ಗೂಡುಗಳನ್ನು ಕಟ್ಟಿಕೊಂಡು ಅವುಗಳ ಹತ್ತಿರಕ್ಕೆ ಹೋದಲ್ಲಿ ಕಿವಿ, ಮೂಗು, ಕಣ್ಣು ಹೀಗೆ ಎಲ್ಲೆಂದರಲ್ಲಿ ನುಗ್ಗಿ ಕಿರಿಕಿರಿ ಉಂಟುಮಾಡುವ ಈ ಮಿಸ್ರಿ ಜೇನುಗಳ ವಿಷಯಕ್ಕೇ ಹೋಗದವರೇ ಹೆಚ್ಚು. ಆದರೆ ವೆಂಕಟಕೃಷ್ಣರು ಈ ಜೇನುನೊಣಗಳಿಂದ ಸಂಗ್ರಹಗೊಳ್ಳುವಂತಹ ಔಷಧೀಯ ಗುಣಮಟ್ಟದ ಜೇನು ಸಂಗ್ರಹಿಸಲು ವಿಶಿಷ್ಟ ರೀತಿಯ ಗೂಡನ್ನೂ ತಯಾರಿಸಿದ್ದಾರೆ.ಜೇನುಗಳ ಗೂಡಿಗಾಗಿ ಅವರು ಆಯ್ದುಗೊಂಡದ್ದು ತೆಂಗಿನ ಗೆರಟೆಯನ್ನು. ಎಣ್ಣೆಯ ಅಂಶವಿರದ ತೆಂಗಿನ ಮೂರು ಗೆರಟೆಗಳನ್ನು ಜೋಡಿಸುವ ಮೂಲಕ ಜೇನುಗಳಿಗೆ ಜೇನು ಸಂಗ್ರಹಿಸಲು, ಪರಾಗ ಸಂಗ್ರಹಿಸಿಡಲು ಹಾಗೂ ತಮ್ಮ ಸಂಸಾರಾಭಿವೃದ್ಧಿಗೆ ಬೇಕಾದಂತಹ ಅವಕಾಶವನ್ನು ಕಲ್ಪಿಸುವ ಮೂಲಕ ವಿನೂತನ ಮಾದರಿಯಲ್ಲಿ ಜೇನು ಸಂಗ್ರಹಿಸುತ್ತಿದ್ದಾರೆ. ಮಿಸ್ರಿ ಜೇನಿಗೆ ಕರಾವಳಿ ಭಾಗದಲ್ಲಿ ಮಾತನಾಡುವಂತಹ ತುಳು ಭಾಷೆಯಲ್ಲಿ ಮೊಜಂಟಿ ಜೇನೆಂದೂ, ಮಲೆಯಾಳ ಭಾಷೆಯಲ್ಲಿ ಚೆರುತೇನೀಜ ಎಂದೂ ಕರೆಯುತ್ತಾರೆ.

ಹೆಚ್ಚಾಗಿ ಕರಾವಳಿ ಭಾಗದ ಕೃಷಿಕರು ತೊಡವೆ ಜೇನು ಅಥವಾ ಪೆಟ್ಟಿಗೆ ಜೇನನ್ನೇ ಸಾಕುತ್ತಿದ್ದು, ಮಿಸ್ರಿ ಜೇನಿನ ಬಗ್ಗೆ ಹೆಚ್ಚಿನ ಕೃಷಿಕರು ಆಸಕ್ತಿಯನ್ನೇ ಹೊಂದಿಲ್ಲ. ಇದಕ್ಕೆ ಕಾರಣ ಪೆಟ್ಟಿಗೆ ಜೇನಿನಲ್ಲಿ ಸಿಗುವಷ್ಟು ಉತ್ಪಾದನೆ ಈ ಜೇನುಗಳಲ್ಲಿ ಸಿಗುವುದಿಲ್ಲ ಎನ್ನುವುದೇ ಆಗಿದೆ. ಆದರೆ ಮಿಸ್ರಿ ಜೇನುಗಳ ಸಂಗ್ರಹಿಸುವ ಜೇನು ಅತ್ಯಂತ ಉತೃಷ್ಟ ಗುಣಮಟ್ಟದ್ದಾಗಿದ್ದು, ಔಷಧೀಯ ಗುಣಗಳನ್ನು ಹೊಂದಿದೆ. ಈ ಜೇನು ನೊಣಗಳಿಂದ ಸಂಗ್ರಹಿಸಲ್ಪಡುವ ಜೇನು ಅಲ್ಪ ಪ್ರಮಾಣದ್ದಾಗಿದ್ದರೂ, ಮಾರುಕಟ್ಟೆಯಲ್ಲಿ ಈ ಜೇನಿಗೆ ದುಬಾರಿ ಬೆಲೆಯೂ ಇದೆ.ಯಾವ ರೀತಿ ಮದ್ಯ ಹಳೆಯದಾದಷ್ಟು ಅದರ ಬೆಲೆ ಏರುತ್ತದೋ, ಅದೇ ಪ್ರಕಾರ ಮಿಸ್ರಿ ಜೇನೂ ಕೂಡಾ ಹಳೆಯದಾದಷ್ಟು ಅದರ ಔಷಧೀಯ ಗುಣಧರ್ಮ ಹೆಚ್ಚುವುದಲ್ಲದೆ, ಬೆಲೆಯೂ ನಾಲ್ಕು ಪಟ್ಟು ಜಾಸ್ತಿಯಾಗುತ್ತದೆ. ವೆಂಕಟಕೃಷ್ಣರ ಪ್ರಕಾರ ಇದೀಗ ಮಾರುಕಟ್ಟೆಯಲ್ಲಿ ಈ ಜೇನಿಗೆ ಕಿಲೋವೊಂದಕ್ಕೆ 2 ಸಾವಿರದಿಂದ 3 ಸಾವಿರದವರೆಗೂ ಬೆಲೆಯಿದ್ದು, ಕೆಲವು ಸಂದರ್ಭಗಳಲ್ಲಿ ಈ  ಬೆಲೆ ಇನ್ನಷ್ಟು ಏರುತ್ತದೆ.ವೆಂಕಟಕೃಷ್ಣರ ಬಳಿ ಇದೀಗ ಸುಮಾರು 100 ಕ್ಕೂ ಮಿಕ್ಕಿ ಮಿಸ್ರಿ ಜೇನುಗಳ ಕುಟುಂಬವಿದ್ದು, ತನ್ನ ತೋಟದ ಸುತ್ತಲೂ ಗೆರಟೆಗಳ ಮೂಲಕ, ಪೆಟ್ಟಿಗೆಗಳ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಇದಲ್ಲದೆ ಸ್ಥಳಾಂತರ ಕೃಷಿಯನ್ನೂ ಮಾಡುತ್ತಿರುವ ಇವರು, ಪರಿಚಯದವರ ತೋಟಗಳಲ್ಲೂ ತನ್ನ ಜೇನು ಕುಟುಂಬಗಳನ್ನು ಇಡುವ ಮೂಲಕ ತೋಟದ ಮಾಲೀಕನ ಜೊತೆಗೆ ತಾನೂ ಲಾಭ ಪಡೆಯುತ್ತಿದ್ದಾರೆ.ಸಾಮಾನ್ಯವಾಗಿ ತೊಡವೆ ಜೇನುಗಳು 3 ರಿಂದ 4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸಿ ಜೇನು ಸಂಗ್ರಹಿಸುವುದರಿಂದ ಈ ಜೇನು ಪೆಟ್ಟಿಗೆಗಳನ್ನು ಇಡುವಾಗ ಒಂದು ಪೆಟ್ಟಿಗೆಯಿಂದ ಇನ್ನೊಂದು ಪೆಟ್ಟಿಗೆಯ ಮಧ್ಯ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಆದರೆ ಮಿಸ್ರಿ ಜೇನುಗಳು ಕೇವಲ 500 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸುತ್ತದೆಯಲ್ಲದೆ, ಅತೀ ಸಣ್ಣ ಹೂಗಳಿಂದಲೂ ಮಕರಂದವನ್ನು ಹೀರುವುದರಿಂದ ತೋಟದ ಅಲ್ಲಲ್ಲಿ ಈ ಗೂಡುಗಳನ್ನು ಇಡಬಹುದಾಗಿದೆ.
Published by: Latha CG
First published: September 14, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading