ಮಂಗಳೂರು(ಮಾ.08): ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರ ವಿವಾದಾತ್ಮಕ ಹೇಳಿಕೆಗಳು ಸದ್ದು ಮಾಡುವುದು ಸಹಜ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುವುದರೊಂದಿಗೆ ಮತದಾರರ ಮನದಲ್ಲೂ ಅಚ್ಚಳಿಯದೆ ಉಳಿಯುತ್ತವೆ. ಇನ್ನೂ ಕೆಲ ಬಾರಿ ಇಂತಹ ಹೇಳಿಕೆಗಳು ರಾಜಕೀಯ ನಾಯಕರ ರಾಜಕೀಯ ಭವಿಷ್ಯಕ್ಕೇ ಸಂಚಕಾರ ಉಂಟು ಮಾಡುತ್ತವೆ. ಈ ಹಿಂದೆಯೂ ಹಲವು ಬಾರಿ ಇಂತಹ ಹೇಳಿಕೆಗಳಿಂದ ರಾಜಕೀಯ ನಾಯಕರು ಇಂತಹ ಸಂಕಷ್ಟಕ್ಕೀಡಾಗಿರುವ ಉದಾಹರಣೆಗಳಿವೆ. ಸದ್ಯ ಡಿಕೆಶಿ ಆಪ್ತ, ಕರಾವಳಿ ಜಿಲ್ಲೆಯ ನಾಯಕ ಉಡುಪಿ ಮಠಕ್ಕೆ (Sri Krishna Mutt, Udupi) ಜಾಗ ಕೊಟ್ಟಿದ್ದು ಮುಸಲ್ಮಾನ (Muslim) ರಾಜ ಎಂದು ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸುವ ಸುಳಿವು ನೀಡಿದೆ.
ಹೌದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (DK Shivakumar) ಆಪ್ತರಲ್ಲಿ ಗುರುತಿಸಿಕೊಂಡಿರುವ ಹಾಗೂ ಮೂಡಬಿದ್ರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಿಥುನ್ ರೈ (Mithun Rai) ಚುನಾವಣೆ ಹೊಸ್ತಿಲಲ್ಲಿ ಇಂತಹುದ್ದೊಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ 'ನಮ್ಮೂರ ಮಸೀದಿ ನೋಡ ಬನ್ನಿ' ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ 'ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರುಗಳು' ಎಂಬ ಹೇಳಿಕೆ ನೀಡಿದ್ದಾರೆ. ತುಳು ಭಾಷೆಯಲ್ಲಿ ಮಾತನಾಡಿದ ಅವರ ಭಾಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Karnataka 2nd PUC Exam: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ- ಈ ಷರತ್ತು ಅನ್ವಯ
ರಘುಪತಿ ಭಟ್ ತಿರುಗೇಟು
ಇನ್ನು ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಹೇಳಿಕೆಗೆ ಖಾರವಾಗೇ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಕೆ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ. ಮಿಥುನ್ ರೈ ಹೇಳಿಕೆ ಖಂಡಿಸಿರುವ ರಘುಪತಿ ಭಟ್ ಮುಸಲ್ಮಾನ ಅರಸರು ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ ಅನಂತೇಶ್ವರಕ್ಕಾಗಲಿ ನೀಡಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಭೂಮಿ ಕೊಟ್ಟ ಬಗ್ಗೆ ಉಲ್ಲೇಖ ಇದೆ, ಮುಂದೆ ಆ ಭೂಮಿಯೆ ಕೃಷ್ಣ ಮಠಕ್ಕೆ ಬಳಕೆಯಾಗಿದೆ. ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆ ಎಂದಿದ್ದಾರೆ.
ಮಸೀದಿಯೇ ಜಂಗಮರ ಮಠದಲ್ಲಿತ್ತು
ಈ ಬಗ್ಗೆ ಮತ್ತಷ್ಟು ಮಾತನಾಡಿರುವ ರಘುಪತಿ ಭಟ್ ಸದ್ಯ ಇರುವ ಜಾಮಿಯಾ ಮಸೀದಿ ಕೂಡ ಜಂಗಮರ ಮಠದ ಜಾಗದಲ್ಲಿತ್ತು ಎಂದು ಹೇಳಲಾಗುತ್ತೆ. ಶೋಕಮಾತಾ ಚರ್ಚ್ ಕೃಷ್ಣ ಮಠದವರು ಕೊಟ್ಟ ಲೀಸ್ ಭೂಮಿಯಲ್ಲಿದೆ. ಉಡುಪಿ ಸೌಹಾರ್ದತೆಗೆ ಹೆಸರಾದ ಕ್ಷೇತ್ರ, ಮುಸಲ್ಮಾನರಿಗೂ ಮಸೀದಿ ಕಟ್ಟಲು ಜಂಗಮರ ಮಠ ಜಾಗ ಕೊಟ್ಟಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ಕಟ್ಟಲು ಕೃಷ್ಣಾಪುರ ಮಠ ಭೂಮಿ ಕೊಟ್ಟಿದೆ. ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ ಉಲ್ಲೇಖವಿದೆ. ಮಿಥುನ್ ರೈ ಯಾವ ಮುಸಲ್ಮಾನ ರಾಜನ ಬಗ್ಗೆ ಮಾತನಾಡುತ್ತಾರೋ ಗೊತ್ತಿಲ್ಲ. ಮಧ್ವಾಚಾರ್ಯರು 850 ವರ್ಷಗಳ ಹಿಂದೆ ಕೃಷ್ಣಮಠ ಸ್ಥಾಪಿಸಿದರು. ಮಿಥುನ್ ರೈ ಅಯೋಧ್ಯೆಯ ಪರಿಸ್ಥಿತಿ ಬಗ್ಗೆ ಚಿಂತನೆ ಮಾಡಲಿ. ಮಥುರಾದಲ್ಲಿ ಕೃಷ್ಣ ಮಂದಿರ, ಕಾಶಿ ಬಗ್ಗೆ ದೇಶದ ಜನತೆಗೆ ಗೊತ್ತಿದೆ, ಈಗ ಒಂದೊಂದೇ ಕ್ಷೇತ್ರಗಳು ಮುಕ್ತವಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: KS Eshwarappa: ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಬಂದ್ ಕರೆ ಕೊಟ್ಟಿದ್ದಾರೆ; ಕಾಂಗ್ರೆಸ್‌ಗೆ ಈಶ್ವರಪ್ಪ ಟಾಂಗ್
ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ ಮುಖಗಳು: ಸಿ. ಟಿ ರವಿ
ಇನ್ನು ಮಿಥುನ್ ರೈ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ಪ್ರತಿಕ್ರಿಯಿಸಿದ್ದು, ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದು, ಅವರೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು ಎಂದು ಹೇಳಿದ್ರೂ ಅಚ್ಚರಿ ಪಡಬೇಕಿಲ್ಲ. ಅಷ್ಟೇ ಯಾಕೆ ಭಾರತ ಎಂಬ ಹೆಸರು ಕೂಡಾ ಮುಸಲ್ಮಾನರೇ ನೀಡಿದ್ದು ಎಂದೂ ಹೇಳಬಹುದು. ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಗುಡುಗಿದ್ದಾರೆ.
ಪೇಜಾವರ ಶ್ರೀಗಳ ಮಾತನ್ನೇ ಪುನರುಚ್ಚರಿಸಿದ್ದೇನೆ: ಮಿಥುನ್ ರೈ
ನಾನು ಯಾವುದೇ ಇತಿಹಾಸಕಾರನಲ್ಲ. ನಾನು ಹೇಳಿಕೆ ನೀಡುವಾಗ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಕೂಡ ವೇದಿಕೆಯಲ್ಲಿದ್ರು, ಜಿಲ್ಲೆಯಲ್ಲಿ ಸೌಹಾರ್ದತೆಯ ಒಡಕು ಮೂಡಬಾರದು ಎಂದು ಈ ವಿಚಾರ ನಾನು ಮಾತನಾಡಿದೆ. ನಾನು ಉಡುಪಿ ಮಠದ ಪೇಜಾವರ ಶ್ರೀಗಳು ಈ ಹಿಂದೆ ಹೇಳಿದ್ದನ್ನೇ ಪುನರುಚ್ಚರಿಸಿದ್ದೇನೆ. ಅವರು ಹೇಳಿದ ಮಾತನ್ನೇ ಪತ್ರಿಕೆಯಲ್ಲಿ ವರದಿ ಮಾಡಿದ್ದರು, ಅದನ್ನೇ ನಾನು ಉಲ್ಲೇಖಿಸಿದ್ದೇನೆ. ನಾನು ತಪ್ಪು ಸಂದೇಶ ನೀಡಲು ಹೊರಟಿರಲಿಲ್ಲ. ತಪ್ಪಾಗಿದ್ರೆ ನಾನು ಕ್ಷಮೆ ಬೇಕಾದ್ರು ಕೇಳುತ್ತೇನೆ. ಉಡುಪಿ ಶಾಸಕ ರಘುಪತಿ ಭಟ್ ಪೇಜಾವರ ಶ್ರೀಗಳನ್ನ ಈ ಬಗ್ಗೆ ಹೋಗಿ ಕೇಳಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ