Udupi: ಕೂಲಿ ಕೆಲಸ ಅರಸಿ ಬಂದ ಮಹಿಳೆ ಈಗ ಗ್ರಾಮಪಂಚಾಯತಿ ಅಧ್ಯಕ್ಷೆ

ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಜನರ ಮನಸ್ಸನ್ನ ಗೆದ್ದು ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ‌.

ಭೀಮವ್ವ

ಭೀಮವ್ವ

  • Share this:
ಉಡುಪಿ (ಜ. 27):  ಆಕೆ ಕೂಲಿ ಕೆಲಸ (Daily Wage Work) ಅರಸಿ ಊರಿಂದೂರಿಗೆ ಅಲೆಯುವ ಬಡ ಮಹಿಳೆ. ಹೀಗೆ ಊರಿಂದೂರಿಗೆ ಅಲೆಯುವಾಗ ನೆಲೆಯಾಗಿದ್ದು ಕೃಷ್ಣ ನಗರಿ ಉಡುಪಿ (Udupi)> ಇಲ್ಲೇ ಎರಡು ದಶಕಗಳ ಕಾಲ ಜಿಲ್ಲೆಯ ಹಲವೆಡೆ ಕೂಲಿ ಕೆಲಸ ಮಾಡಿದ್ದ ಈ ಮಹಿಳೆ ಈಗ ಪಂಚಾಯತ್ ಅಧ್ಯಕ್ಷೆಯಾಗಿ  (Gram Panchayat President) ಒಂದು ಗ್ರಾಮದ ಚುಕ್ಕಾಣಿಯನ್ನೇ ಹಿಡಿದಿದ್ದಾರೆ. ಮನೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಈಗ ಎಲ್ಲರ ಮೆಚ್ಚುಗೆ ಪಡೆಯುವಂತೆ ಬೆಳೆದು ನಿಂತು ಅನೇಕರಿಗೆ ದಾರಿ ದೀಪವಾಗಿದ್ದಾರೆ. ಅಷ್ಟಕ್ಕೂ ಯಾರು ಇವರು, ಈಕೆ ಹೇಗೆ ಗ್ರಾಮ  ಪಂಚಾಯತಿ ಅಧ್ಯಕ್ಷರಾದರು ಎಂಬ ಕುತೂಹಲ ಸಂಗತಿ ಇಲ್ಲಿದೆ.

ಕೂಲಿ ಕೆಲಸ ಅರಸಿ ಬಂದಿದ್ದ ಭೀಮವ್ವ

ಈಕೆ ಹೆಸರು ಭೀಮವ್ವ. ಬಾಗಲಕೋಟೆ ಮೂಲದ ಭೀಮವ್ವ ಕಳೆದ 27 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿ ವಿವಿಧ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಸದ್ಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಜನರ ಮನಸ್ಸನ್ನ ಗೆದ್ದು ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ‌. ಇನ್ನು ಈಕೆ ಉಡುಪಿಯಲ್ಲೇ ತನ್ನ ನಾಲ್ಕು ಮಕ್ಕಳನ್ನ ಓದಿಸಿ ಓರ್ವ ಮಗನನ್ನ ದೇಶ ಕಾಯುವ ಯೋಧನಾಗಿ ಮಾಡಿದ್ಧಾಳೆ. ಹೀಗೆ ಉಡುಪಿಯಲ್ಲೇ ಅರ್ಧ ಜೀವನ ಕಳೆದ ಭೀಮವ್ವ ಪಂಚಾಯತ್ ಅಧ್ಯಕ್ಷೆಯಾಗಿದ್ರೂ ಕೂಡ ಮೂಲ ಕಸುಬು ಕೂಲಿ ಕೆಲಸ ಇನ್ನೂ ಬಿಟ್ಟಿಲ್ಲ ಅನ್ನೋದೇ ವಿಶೇಷ. ಯಾವುದೇ ರಾಜಕೀಯ ಅರಿವಿರದ ಈಕೆ ಈಗ   ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದೇ ಸ್ಚಾರಸ್ಯ.

ಇದನ್ನು ಓದಿ: ಐಪಿಎಸ್​ ಅಧಿಕಾರಿ ರವಿ ಡಿ ಚನ್ನಣ್ಣನವರ್​ ಸೇರಿ 9 ಅಧಿಕಾರಿಗಳ ವರ್ಗಾವಣೆ

ಪ್ರಾಮಾಣಿಕತೆ ಮೆಚ್ಚಿ ಒಲಿದ ಅಧಿಕಾರ

ಕಳೆದ ಕೆಲ ವರ್ಷಗಳ ಹಿಂದೆ ಕಾಪು ತಾಲೂಕಿನಿಂದ ಕುಂದಾಪುರ ತಾಲೂಕಿಗೆ ಕೂಲಿ ಕೆಲಸಕ್ಕೆ ಅರಸಿ ಬಂದಿದ್ದ ಭೀಮವ್ವ ಅವರನ್ನ ಇಲ್ಲಿನ ಪಂಚಾಯತ್ ಮಾಜಿ ಸದಸ್ಯ ಕರಣ್ ಕುಮಾರ್ ಎಂಬವರು ಕೂಲಿ ಕೆಲಸಕ್ಕೆ ನಿಯೋಜಿಸುತ್ತಾರೆ. ಹೀಗೆ  ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರೋದರ ಜೊತೆಗೆ ಮಗನನ್ನ ದೇಶ ಕಾಯುವ ಯೋಧನಾಗಿ ಮಾಡಿರುವ ಈಕೆ ತನ್ನ ಗ್ರಾಮದ ಸೇವೆ ಪ್ರಾಮಾಣಿಕವಾಗಿ ಮಾಡುತ್ತಾರೆ ಅನ್ನೋದನ್ನ ಅರಿತ ಕರಣ್ ಈಕೆಯ ಮನವೊಲಿಸಿ ಚುನಾವಣೆಯಲ್ಲಿ ಎಸ್ ಟಿ ಮೀಸಲಾತಿ ಇದ್ದ ಸ್ಥಾನಕ್ಕೆ ನಿಲ್ಲಿಸುತ್ತಾರೆ. 2020 ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ  ತಲ್ಲೂರು ಗ್ರಾಮದ ಪ್ರಭಾವಿ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ ಭೀಮವ್ವ 750 ಮತಗಳಲ್ಲಿ 162 ಮತ ಪಡೆದು ಜಯಗಳಿಸುತ್ತಾರೆ.

ಇದನ್ನು ಓದಿ: Uttar Kannada ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ‌ ಪರಿಚಯಕ್ಕೆ ಸಿದ್ಧವಾಯಿತು ಹೊಸ ವೆಬ್​ಸೈಟ್​

ಬಡವರ ಕಷ್ಟ ಅರಿತಿರುವ ಅಧ್ಯಕ್ಷೆ

ಹೀಗೆ ಎಲ್ಲಿಂದಲೋ ಬಂದು ಪ್ರಾಮಾಣಿಕವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುತ್ತಿದ್ದ ಭೀಮವ್ವ ಇಡೀ ಗ್ರಾಮದ ಮತದಾರರ ಮನಸ್ಸನ್ನ ಪ್ರಾಮಾಣಿಕತೆಯಿಂದಲೇ ಗೆಲ್ಲಲು ಯಶಸ್ವಿಯಾಗಿದ್ದಾರೆ. ಹೀಗೆ ಗೆದ್ದ ಬಳಿಕವೂ ಮತದಾರರ ನಂಬಿಕೆಯನ್ನ ಉಳಿಸಿಕೊಂಡು ಬಂದಿದ್ದಾರೆ ಭೀಮವ್ವ. ನಿಜವಾದ ಬಡತನದ ಕಷ್ಟ, ಆಧಾರ್, ರೇಷನ್ ಕಾರ್ಡ್ ನಂತಹ ಸೇವೆಗಳಿಗೆ ಅಲೆದಾಟದ ಕಷ್ಟವನ್ನು ಅನುಭವಿಸಿರುವ ಭೀಮವ್ವ ಇದೀಗ ಅಧ್ಯಕ್ಷೆಯಾಗಿ ಗ್ರಾಮದ ಜನರನ್ನ ಪ‌ಂಚಾಯತ್ ಕಚೇರಿಯಲ್ಲಿ ಕಾಯುವ ಕಷ್ಟವನ್ನ ಈವರೆಗೂ ಕೊಟ್ಟಿಲ್ಲವಂತೆ. ಜನರ ಸೇವೆಗೆ ತಕ್ಷಣ ಸ್ಪಂದಿಸಿ ಗ್ರಾಮದ ಜನರ ನಂಬಿಕೆ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ ಭೀಮವ್ವ.

ಒಟ್ಟಾರೆ ಸಂಕಷ್ಟದ ಸಮಯದಲ್ಲೂ ಪ್ರಾಮಾಣಿಕತೆ ಗಟ್ಟಿಯಾಗಿದ್ದರೆ ದೇವರು ಕೈಬಿಡೋಲ್ಲ ಅನ್ನೋರು ಬೀಮವ್ವ ಜೀವನದಲ್ಲಿ ಸಾಬೀತಾಗಿದೆ. ಪ್ರಾಮಾಣಿಕ ಜನಪರ ಕೆಲಸ ಮತದಾರರ ಮನಸ್ಸನ್ನ ಗೆಲ್ಲಬಹುದು ಅನ್ನೋದನ್ನ ಬೀಮವ್ವ ತೋರಿಸಿಕೊಟ್ಟಿದ್ದಾರೆ.‌ ಭೀಮವ್ವ ಅವರ ಸರಳ ಪ್ರಾಮಾಣಿಕ ಜೀವನ ಸೀಟಿಗಾಗಿ ತಿಕ್ಕಾಟ ನಡೆಸೋ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕಿದೆ.
Published by:Seema R
First published: