• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DVS: ಸದಾನಂದಗೌಡರ ರಾಜಕೀಯ ಭವಿಷ್ಯ ಮುಸುಕಾಯಿತಾ? ರಾಜ್ಯ ರಾಜಕಾರಣಕ್ಕ ಮರಳುವರೇ ಡಿವಿಎಸ್?

DVS: ಸದಾನಂದಗೌಡರ ರಾಜಕೀಯ ಭವಿಷ್ಯ ಮುಸುಕಾಯಿತಾ? ರಾಜ್ಯ ರಾಜಕಾರಣಕ್ಕ ಮರಳುವರೇ ಡಿವಿಎಸ್?

ಡಿ ವಿ ಸದಾನಂದ ಗೌಡ

ಡಿ ವಿ ಸದಾನಂದ ಗೌಡ

ಸದಾನಂದಗೌಡ ಮಾತ್ರವಲ್ಲ, ಹಿರಿಯ ಸಚಿವರಾದ ರವಿಶಂಕರಪ್ರಸಾದ್, ಪ್ರಕಾಶ್ ಜಾವ್ಡೇಕರ್ ಅವರನ್ನೂ ಸಂಪುಟದಿಂದ ಕೈಬಿಡಲಾಗಿದೆ. ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲೆಂದೇ ಈ ನಿರ್ಧಾರ ಮಾಡಲಾಯಿತಾ? ಕ್ಯಾಬಿನೆಟ್ ವಿಸ್ತರಣೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

  • Share this:

ನವದೆಹಲಿ, ಜು. 8: ಏಳು ವರ್ಷದಿಂದ ಕೇಂದ್ರ ಸಂಪುಟದಲ್ಲಿ ಮಹತ್ವದ ಖಾತೆಗಳ ಹೊಣೆ ಹೊತ್ತಿದ್ದ ಮಾಜಿ ಮುಖ್ಯಮಂತ್ರಿಯೂ ಆದ ಡಿ.ವಿ. ಸದಾನಂದಗೌಡ (D V Sadananda Gowda) ಅವರನ್ನು ಈಗ ಸಂಪುಟದಿಂದ ಕೈಬಿಡಲಾಗಿದೆ. ಇದು ಒಂದು ರೀತಿಯಲ್ಲಿ ನಿರೀಕ್ಷಿತವಾಗಿಯೂ ಇತ್ತು. ಈ ಹಿನ್ನಲೆಯಲ್ಲಿ ಸದಾನಂದಗೌಡರ ರಾಜಕೀಯ ಭವಿಷ್ಯ ಮುಸುಕಾಯಿತಾ? ಸಚಿವಗಿರಿ ಕಳೆದುಕೊಂಡ ಸದಾನಂದಗೌಡರು ನೇಪಥ್ಯಕ್ಕೆ ಸರಿಯುವರೇ? ಅಥವಾ ಅವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆಯಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.
ಡಿ.ವಿ. ಸದಾನಂದಗೌಡ ಅವರು ಮಾತ್ರವಲ್ಲ, ಹಿರಿಯ ಸಚಿವರಾದ ರವಿಶಂಕರಪ್ರಸಾದ್, ಪ್ರಕಾಶ್ ಜಾವ್ಡೇಕರ್ ಅವರನ್ನೂ ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಆದುದರಿಂದ ಹಿರಿಯರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲೆಂದೇ ಸಂಪುಟದಿಂದ ಕೋಕ್ ನೀಡಲಾಗಿದೆಯಾ? ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಇಷ್ಟು ದಿನ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮತ್ತು ರಾಜಕೀಯ ಪರಿಸ್ಥಿತಿಗಳ ನಿರ್ವಹಣೆ ಹಾಗೂ ಚುನಾವಣಾ ತಂತ್ರಗಾರಿಕೆಯಲ್ಲಿ ಹೆಸರುವಾಸಿಯಾಗಿದ್ದ ಭೂಪೇಂದ್ರ ಯಾದವ್ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ.


ಸದಾನಂದಗೌಡ ಅವರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂದರೆ, ಅವರು ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುವರೇ? ಅಥವಾ ರಾಷ್ಟ್ರೀಯ ರಾಜಕಾರಣದಲ್ಲಿರುವರೇ ಎಂಬ ಕುತೂಹಲವೂ ಹುಟ್ಟುಕೊಂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕ್ಷಮತೆ ಬಗ್ಗೆ ಪಕ್ಷದಲ್ಲಿ ಭಾರೀ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಸದಾನಂದಗೌಡ‌ ಅವರಿಗೆ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷಗಾದಿ ಒಲಿಯುವುದೇ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನ ಬದಲಿಸಿದರೆ ಆಗುವ ಸಂಚಲನವನ್ನು ಸಂಬಾಳಿಸಲು ಡಿವಿಎಸ್ ಅವರಿಗೆ ಅವಕಾಶ ನೀಡಲಾಗುವುದೇ? ಎಂದು ಚರ್ಚೆ ಆಗುತ್ತಿದೆ.


ಇದನ್ನೂ ಓದಿ: ಮೋದಿ ಕ್ಯಾಬಿನೆಟ್​ 2.0| ಮೆಗಾ ರೀಬೂಟ್​ ನಂತರ ಇಂದು ಅಧಿಕಾರ ವಹಿಸಲಿದ್ದಾರೆ ನೂತನ ಸಚಿವರು!


ಸದಾನಂದಗೌಡ ಅವರು ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2008ರಲ್ಲಿ ಸದಾನಂದಗೌಡ ಅಧ್ಯಕ್ಷರಾಗಿದ್ದಾಗಲೇ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೇ ಅನುಭವದ ಹಿನ್ನಲೆಯಲ್ಲಿ ಸದಾನಂದಗೌಡರಿಗೆ ಮತ್ತೊಮ್ಮೆ ಒಲಿಯುವುದೇ ಅವಕಾಶ ಎಂದು ಚರ್ಚೆ ಆಗುತ್ತಿದೆ. ಅಥವಾ ರಾಷ್ಟ್ರೀಯ ರಾಜಕಾರಣದಲ್ಲೇ ಮುಂದುವರೆಯುವರೇ? ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಗುತ್ತಾ? ಎಂದು ಕೂಡ ಹೇಳಲಾಗುತ್ತಿದೆ. ಸದಾನಂದಗೌಡ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಆಗುತ್ತಿರಲು ರಾಜೀನಾಮೆ ಪಡೆಯುವಾಗ ಪಕ್ಷದ ವರಿಷ್ಠರು ನೀಡಿರುವ ಭರವಸೆ ಮಾತುಗಳೇ ಕಾರಣ ಎನ್ನಲಾಗುತ್ತಿದ್ದು ಡಿ.ವಿ. ಸದಾನಂದಗೌಡ ಅವರ ರಾಜಕೀಯ ಪಯಣ ನಿರ್ಣಾಯಕ ಘಟ್ಟ ತಲುಪಿದೆ.
ಈ ನಡುವೆ ತಮ್ಮ ವಿರುದ್ಧದ ಸಿಡಿಯೊಂದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದೇ ಸದಾನಂದಗೌಡ ಅವರಿಗೆ ಮುಳುವಾಯಿತು. ಮುಂದೆ ಸಿಡಿ ಹೊರಗಡೆ ಬಂದರೆ ಇರುಸು ಮುರುಸು ಉಂಟಾಗುತ್ತದೆ. ಅವರ ವೈಯಕ್ತಿಕ ಸಮಸ್ಯೆಯಿಂದ ಪಕ್ಷ ಮುಜುಗರಕ್ಕೆ ಸಿಲುಕಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಅವರಿಂದ ಕೇಂದ್ರದ ನಾಯಕರು ರಾಜೀನಾಮೆ ಪಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

top videos
    First published: