ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕುಟುಂಬ ಸಮೇತರಾಗಿ ತೆರಳಿ ಇಂದು ಕನಕಪುರ (Kanakapura) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಕನಕಪುರದ ಕಬ್ಬಾಳಮ್ಮ ದೇವಿಗೆ (Kabbalamma Temple) ವಿಶೇಷ ಪೂಜೆ ಸಲ್ಲಿಕೆ ಮಾಡಿದ ಡಿಕೆ ಶಿವಕುಮಾರ್ ಅವರು ದೇವಸ್ಥಾನದಲ್ಲಿ ಈಡುಗಾಯಿ ಒಡೆದು ದೇವರಲ್ಲಿ ಹರಕೆ ತೀರಿಸಿದ್ದಾರೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿಯಾಗಬೇಕು (Chief Minister) ಎಂದು ಹರಕೆ ಕಟ್ಟಿಕೊಂಡು ದೇವಸ್ಥಾನ ಹುಂಡಿಗೆ ಕಂತೆ ಕಂತೆ ನೋಟುಗಳನ್ನು ಕಾಣಿಕೆಯಾಗಿ ಹಾಕಿದ್ದಾರೆ. ಕನಕಪುರ ಕ್ಷೇತ್ರದ ಕಬ್ಬಾಳಮ್ಮ ದೇವಿಗೆ ಹರಕೆ ಮಾಡಿಕೊಂಡರೆ ಮನದ ಆಸೆ ಈಡೇರುತ್ತದೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದು, ಡಿಕೆ ಶಿವಕುಮಾರ್ ಅವರು ಕೂಡ ಕಬ್ಬಾಳಮ್ಮ ದೇವಿಯಲ್ಲಿ ಹರಕೆ ಕಟ್ಟಿಕೊಂಡು ಬಂದು ನಾಮಪತ್ರ (Nomination) ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಣಿಕೆ ಹಾಕಲು ಡಿಕೆಶಿ ಹರಸಾಹಸ
ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕಲು ಡಿಕೆ ಶಿವಕುಮಾರ್ ಅವರು ಹರಸಾಹಸ ಪಟ್ಟ ಘಟನೆಯೂ ಇದೇ ವೇಳೆ ನಡೆದಿದ್ದು, ದೇವಸ್ಥಾನದ ಹುಂಡಿಯ ಬಾಯಿ ಚಿಕ್ಕದಾಗಿದ್ದ ಕಾರಣ ಡಿಕೆಶಿ ಅವರಿಗೆ ಹಣ ಕಂತೆ ಹಾಕಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಕಂತೆ ಕಂತೆ ನೋಟಿನ ಕಟ್ಟನ್ನು ಭಾಗ ಮಾಡಿ ಕಾಣಿಕೆಯನ್ನು ಹುಂಡಿಕೆ ಹಾಕಿದರು. 500 ರೂಪಾಯಿ ಇರುವ ದೊಡ್ಡ ನೋಟಿನ ಕಂತೆ ಹಣವನ್ನು ಡಿಕೆ ಶಿವಕುಮಾರ್ ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.
ಇನ್ನು, ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಕಬ್ಬಾಳಮ್ಮ, ಕೆಂಕೇರಮ್ಮ, ದೇಗುಲ ಮಠದಲ್ಲಿ ಪೂಜೆ ಮಾಡುವ ಪದ್ದತಿ ಇದೆ. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಸ್ವಲ್ಪ ತಡವಾಯಿತು. ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕನಕಪುರದಲ್ಲಿ ಡಿಕೆ ಶಿವಕುಮಾರ್ ಅಭ್ಯರ್ಥಿ ಅಲ್ಲ, ಇಲ್ಲಿನ ಪ್ರತಿಯೊಬ್ಬ ಮತದಾರ ಕೂಡ ಡಿಕೆ ಶಿವಕುಮಾರ್ ಎಂದು ಹೇಳುವ ಮೂಲಕ ತಾವೇ ಗೆಲುವು ಪಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapura: ಅಲ್ಲಾ, ಗಣೇಶ, ಯೇಸು ಫೋಟೋ ಹಿಡಿದು ಕಾಂಗ್ರೆಸ್ ಅಭ್ಯರ್ಥಿಯಿಂದ ಆಣೆ - ಪ್ರಮಾಣ! ಕಾರಣವೇನು?
ಕಬ್ಬಾಳಮ್ಮ ದೇವಿಯ ಚರಿತ್ರೆ ಒಂದು ಸಾರಿ ಕೇಳಿ
ಇದೇ ವೇಳೆ ಸಿಎಂ ಆಸೆಯ ಪ್ರಾರ್ಥನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದಲ್ಲಿ ಕಳೆದ 35 ವರ್ಷದಿಂದ ಜನರ ಸೇವೆ ಮಾಡಿದ್ದೇನೆ. ಅದರ ಪ್ರತಿಫಲ ಚುನಾವಣೆಯಲ್ಲಿ ಗೆಲುವು ರೂಪದಲ್ಲಿ ನನ್ನದಾಗಲಿದೆ. ರಾಜ್ಯ ಪ್ರವಾಸ ಮಾಡಿದ ನಂತರ ಒಂದು ದಿನ ನಾನು ಕನಕಪುರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ.
ಕಬ್ಬಾಳಮ್ಮ ದೇವಿಯ ಚರಿತ್ರೆ ಒಂದು ಸಾರಿ ಕೇಳಿ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಕನಕಪುರದ ನನ್ನ ಚುನಾವಣೆಯನ್ನು ನಾನು ನೀರು ಹಾಕಿ ಬೆಳೆಸಿದ ನಾಯಕರು ಮಾಡುತ್ತಾರೆ. ನಾನು 35 ವರ್ಷಗಳ ಕಾಲ ವ್ಯವಸಾಯದಂತೆ ರಾಜಕಾರಣದಲ್ಲಿ ನೂರಾರು ನಾಯಕರನ್ನು ಬೆಳೆಸಿದ್ದೇನೆ. ಅವರೇ ನನ್ನ ಚುನಾವಣೆಯನ್ನು ಮಾಡುತ್ತಾರೆ. ಅಂತಿಮವಾಗಿ ಒಳ್ಳೆಯ ಬೆಳೆ, ಬೆಳೆಗೆ ಉತ್ತಮವಾದ ಬೆಲೆಯನ್ನು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಜನರು ಕೊಡುತ್ತಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ