ಬೆಂಗಳೂರು: ಬಿಎಸ್ ಯಡಿಯೂರಪ್ಪ (BS Yediyurappa) ಅವರ ನಿವಾಸ ಮೇಲೆ ಕಲ್ಲೆಸೆತ ಪ್ರಕರಣದಲ್ಲಿ, ಮಾಜಿ ಸಿಎಂ ನಿವಾಸದ ಎದುರು ನಡೆದ ಪ್ರತಿಭಟನೆ ಹಿಂದೆ ಕಾಂಗ್ರೆಸ್ (Congress) ಕೈವಾಡವಿದೆ ಎಂದು ಬಿಜೆಪಿಗೆ ಆರೋಪ ಮಾಡಿತ್ತು. ಈ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ಕೊಟ್ಟಿದ್ದಾರೆ. ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರೇ ಹೊರಟಿದ್ದಾರೆ ಅಂತ ಆರೋಪಿಸಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ (Shivamogga) ಬಂಜಾರ ಸಮುದಾಯದ ಕಿಚ್ಚು ತಣ್ಣಗಾಗಿಲ್ಲ. ಇಂದು ಸಹ ಒಳ ಮೀಸಲಾತಿ ಜಾರಿ ವಿರೋಧಿಸಿ ಬಂಜಾರ ಸಮುದಾಯದವರು (Banjara Community) ಶಿವಮೊಗ್ಗ-ಶಿಕಾರಿಪುರ ನಡುವೆ ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು.
ಯಡಿಯೂರಪ್ಪರನ್ನು ರಾಜಕೀಯ ಮುಗಿಸಲು ಹೀಗೆ ಮಾಡಿಸುತ್ತಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ವಿಚಾರದಲ್ಲಿ ದೊಡ್ಡ ಗೊಂದಲ ಸೃಷ್ಟಿ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನ ರಾಜಕೀಯ ಮುಗಿಸಲು ಹೀಗೆ ಮಾಡಿಸುತ್ತಿದ್ದಾರೆ. ಅಧಿಕಾರದಲ್ಲಿರುವ ಸಿಎಂ ಬೊಮ್ಮಾಯಿ ಮನೆ ಮೇಲೆ ಕಲ್ಲು ತೂರಾಟ ಮಾಡಿದರೆ ಪರವಾಗಿಲ್ಲ. ಆದರೆ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇಲ್ಲ, ಅವರ ಮನೆ ಮೇಲೆ ಯಾಕೆ ಕಲ್ಲು ತೂರಾಟ ಮಾಡುತ್ತಾರೆ.
ಇದನ್ನೂ ಓದಿ: Bhavani Revanna: ಭವಾನಿಗೆ ಹಾಸನ ಟಿಕೆಟ್ ಫಿಕ್ಸಾ? ಭಾರೀ ಚರ್ಚೆಗೆ ಕಾರಣವಾಯ್ತು ಜೆಡಿಎಸ್ ಕಿರುಹೊತ್ತಿಗೆ ಫೋಟೋ!
ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಫೋನ್ ಕಿತ್ತುಕೊಳ್ಳುತ್ತಿದೆ
ಬಿಜೆಪಿ ಪಕ್ಷದಲ್ಲಿ ಆಂತರಿಕ ಗೊಂದಲಗಳಿಗೆ, ಯಡಿಯೂರಪ್ಪ ಅವರನ್ನು ಬಿಜೆಪಿ ಮೂಲೆ ಗುಂಪು ಮಾಡಿದ್ದು ನಿಜ. ಈಗ ಯಡಿಯೂರಪ್ಪ ಅವರನ್ನು ಸೆಂಟರ್ ಸ್ಟೇಜ್ಗೆ ತರಲು ಹೊರಟಿದ್ದಾರೆ. ಹೈಕಮಾಂಡ್ ನಾಯಕರು ಅವರ ಮನೆಗೆ ಹೋಗುತ್ತಿದ್ದಾರೆ. ತಿಂಡಿ ತಿಂದು ಬೆನ್ನು ತಟ್ಟುತ್ತಿದ್ದಾರೆ. ಬಿಜೆಪಿಯಲ್ಲಿ ಬೇಕಾದಷ್ಟು ಆಂತರಿಕ ಗೊಂದಲ ಇವೆ, ನಾನು ಅದನ್ನು ಚರ್ಚೆ ಮಾಡಲು ಹೋಗಲ್ಲ.
ಪಕ್ಷದಲ್ಲಿನ ಆಂತರಿಕ ಕುತಂತ್ರದಿಂದ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿಸಿದ್ದಾರೆ. ರಾಜಕೀಯವಾಗಿ ಅವರನ್ನು ಮುಗಿಸಲು ಬಿಜೆಪಿಯವರೇ ಹೊರಟಿದ್ದಾರೆ. ಪಕ್ಷದಲ್ಲಿನ ಆಂತರಿಕ ಕಚ್ಚಾಟ ಸರಿ ಮಾಡಲು ಬೆಳಗ್ಗೆ ಎದ್ದರೆ, ಹೈಕಮಾಂಡ್ ಬಂದು ಎಲ್ಲರನ್ನು ಹೆದರಿಸಿ, ಫೋನ್ಗಳನ್ನ ಕಿತ್ತುಕೊಂಡು ಎಲ್ಲೂ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಬಂದ ಮೇಲೆ ಬಿಜೆಪಿಯ ಮೀಸಲಾತಿ ರದ್ದು
ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಮಾಡಿರುವ ಮೀಸಲಾತಿಯನ್ನು ನಾನು ಒಪ್ಪುವುದಿಲ್ಲ. 40 ದಿನ ಆದಮೇಲೆ ನಮ್ಮ ಸರ್ಕಾರ ಬರುತ್ತೆ. ಈಗ ಘೋಷಣೆಯಾಗಿರುವ ಮೀಸಲಾತಿಯನ್ನ ರದ್ದು ಮಾಡುತ್ತೇವೆ.
ಮೀಸಲಾತಿ ರಾಜ್ಯದಲ್ಲಿ ಅಲ್ಲ ಇಡೀ ರಾಷ್ಟ್ರದಲ್ಲೇ ಗೊಂದಲ ಉಂಟು ಮಾಡಿದೆ. ಕಾನೂನಿನಲ್ಲಿ ಇಲ್ಲದೆ ಇರುವಂತದ್ದು, ಸುಪ್ರೀಂ ಕೋರ್ಟ್ ವಿರುದ್ಧವಾಗಿರುವ ಮೀಸಲಾತಿ ಇದು. ಯಾರೋ ಇಬ್ಬರು ಮಂತ್ರಿಗಳು ಮಾಡಿರುವ ಮೀಸಲಾತಿ ಇದು. ಹಿಂದುಳಿದ ಆಯೋಗದ ವರದಿ ಎಲ್ಲಿದೆ? ಚುನಾವಣೆಗಾಗಿ ಮೀಸಲಾತಿ ಘೋಷಣೆ ಮಾಡುವುದು ಸರಿಯಲ್ಲ ಎಂದರು.
ಜನಸಂಖ್ಯೆ ಆಧಾರದ ಮೇಲೆ ನಮಗೆ ಪ್ರತ್ಯೇಕ ಮೀಸಲಾತಿ ಕೊಡಲಿ
ಅಲ್ಲದೆ, ಈ ದೇಶದಲ್ಲಿ ಅಲ್ಪ ಸಂಖ್ಯಾತರು ಇಲ್ವಾ, ಅವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ಮೀಸಲಾತಿ ಕಿತ್ತು ನಮಗೆ ಕೊಡಿ ಅಂತ ಲಿಂಗಾಯಿತ, ಒಕ್ಕಲಿಗ ಸ್ವಾಮೀಜಿಗಳು ಕೇಳಿದ್ದಾರಾ? ನಾನು ಮೀಸಲಾತಿಗಾಗಿ ಅಶೋಕ್ಗೆ ಅರ್ಜಿ ಕೊಟ್ಟಿದ್ದು ನಿಜ. ಶೇಕಡಾ 12 ಅಥವಾ 15 ಜನಸಂಖ್ಯೆಗೆ ಆಧಾರವಾಗಿ ಮಾಡಿ ಕೊಡುತ್ತೇವೆ ಅಂದಿದ್ದು ನಿಜ.
ವೀರಶೈವ, ಒಕ್ಕಲಿಗ ಜನಸಂಖ್ಯೆ ಎಷ್ಟಿದೆ? ಅದರ ಆಧಾರದ ಮೇಲೆ ನಮಗೆ ಪ್ರತ್ಯೇಕ ಮೀಸಲಾತಿ ಕೊಡಲಿ. ಅಲ್ಪಸಂಖ್ಯಾತರ ಮೀಸಲಾತಿ ನಮಗೆ ಬೇಡ ಅವರಿಗೆ ವಾಪಸ್ ಕೊಡಲಿ. ಲಿಂಗಾಯತರು, ಒಕ್ಕಲಿಗರು ಈ ನಾಡಿನ ಅನ್ನ ನೀಡುವ ಅನ್ನದಾತರು. ಅವರಿಗೆ ಕೊಡುವುದಾದರೆ ಸರಿಯಾಗಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಿ. 2A ಸೇರಿದಂತೆ ಯಾರಿಗೂ ತೊಂದರೆ ಮಾಡುವುದು ಬೇಡ ಅವರು ಹಿಂದುಳಿದ ವರ್ಗದವರು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ