ಬೆಂಗಳೂರು (ಅ. 30): ಶಿರಾ ಮತ್ತು ಆರ್ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇವಲ 4 ದಿನಗಳು ಬಾಕಿ ಇವೆ. ಹೀಗಾಗಿ, ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಜೋರಾಗಿದೆ. ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿನಿಮಾ ನಿರ್ಮಾಪಕರೂ ಆಗಿರುವ ಮುನಿರತ್ನ ಸ್ಪರ್ಧಿಸುತ್ತಿರುವುದರಿಂದ ಸಿನಿತಾರೆಯರು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ಆರ್ ನಗರದಲ್ಲಿ ಮುನಿರತ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆ. ನಿನ್ನೆಯೇ ದರ್ಶನ್ ಆರ್ಆರ್ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಪ್ರಚಾರದ ರ್ಯಾಲಿಯನ್ನು ಇಂದಿಗೆ ಮುಂದೂಡಲಾಗಿತ್ತು.
ಕುರುಕ್ಷೇತ್ರ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಡಿಬಾಸ್ ದರ್ಶನ್ ಇಂದು ಮುನಿರತ್ನ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ದರ್ಶನ್ ಆಗಮನದ ಸುದ್ದಿ ಕೇಳಿ ಸಾಕಷ್ಟು ಅಭಿಮಾನಿಗಳು ಸೇರುವ ಸಾಧ್ಯತೆ ಇರುವುದರಿಂದ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಹೊರ ಊರುಗಳಿಂದಲೂ ಆರ್ಆರ್ ನಗರದತ್ತ ಆಗಮಿಸುತ್ತಿದ್ದಾರೆ. ಯಶವಂತಪುರದಿಂದ ದರ್ಶನ್ ರೋಡ್ ಶೋ ಆರಂಭವಾಗುವುದರಿಂದ ಯಶವಂತಪುರ ರೈಲ್ವೆ ಸ್ಟೇಷನ್ ಬಳಿ ಸಾಕಷ್ಟು ಅಭಿಮಾನಿಗಳು ಸೇರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ರೋಡ್ ಶೋ ವೇಳೆ ರಕ್ಷಣೆ ಕೊಡಲು ಅವರ ಮನೆ ಬಳಿ 10ಕ್ಕೂ ಹೆಚ್ಚು ಬೌನ್ಸರ್ಗಳು ಕಾಯುತ್ತಿದ್ದಾರೆ.
ಎರಡು ದಿನಗಳ ಹಿಂದೆ ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಕೂಡ ಮುನಿರತ್ನ ಪರವಾಗಿ ಆರ್ಆರ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಇಂದು ನಟ ದರ್ಶನ್ ಮಾತ್ರವಲ್ಲದೆ ನಟಿ ಅಮೂಲ್ಯ ಕೂಡ ಮುನಿರತ್ನ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಜೊತೆಗೆ ಸಚಿವ ಹಾಗೂ ಹಿರಿಯ ನಟ ಬಿ.ಸಿ ಪಾಟೀಲ್ ಕೂಡ ಆರ್ಆರ್ ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ. ಹೀಗಾಗಿ, ಆರ್ಆರ್ ನಗರದಲ್ಲಿ ತಾರಾ ಮೆರುಗು ಹೆಚ್ಚಾಗಿದೆ.
ಇದನ್ನೂ ಓದಿ: Karnataka Weather: ಕರಾವಳಿ, ಕೊಡಗು, ಮಲೆನಾಡಿನಲ್ಲಿ ಇಂದಿನಿಂದ ನ. 3ರವರೆಗೆ ಮಳೆ ಹೆಚ್ಚಳ
ಕೇವಲ ರಾಜಕಾರಣಿಯಲ್ಲದೆ ನಿರ್ಮಾಪಕರೂ ಆಗಿರುವ ಮುನಿರತ್ನ ಪರ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪ್ರಚಾರ ನಡೆಸಲಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ದರ್ಶನ್ ಅವರು ಮುನಿರತ್ನ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಇಂದು ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ದರ್ಶನ್ ಪ್ರಚಾರದಿಂದ ಆರ್ಆರ್ ನಗರ ಇಂದು ಮತ್ತಷ್ಟು ರಂಗೇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ