ಬೆಂಗಳೂರು: ಮಾಂಡೋಸ್ ಸೈಕ್ಲೋನ್ (Cyclone Mandous) ಪ್ರಭಾವದಿಂದ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಶುಕ್ರವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದೇ ವೇಳೆ ಶೀತ ಗಾಳಿಯ (Very Cold Wind) ಪ್ರಭಾವ ನಗರ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದ್ದು, ಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇತ್ತ ರೈತರು ಕೂಡ ಸೈಕ್ಲೋನ್ ಹೊಡೆತಕ್ಕೆ ಸಿಲುಕಿದ್ದು, ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯನ್ನುಎದುರಿಸಿದ್ದಾರೆ. ಈ ನಡುವೆ ಶೀತಗಾಳಿ, ನಿರಂತರ ಮಳೆಯಾಗುತ್ತಿರುವುದು ಮಕ್ಕಳು ಹಾಗೂ ವೃದ್ಧರ ಆರೋಗ್ಯದಲ್ಲಿ ಏರುಪೇರಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ (Health Department) ಪೋಷಕರಿಗೆ ಸಲಹೆಗಳನ್ನು ನೀಡಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಆಗ್ನೇಯ ಬಂಗಾಳ ಕೊಲ್ಲೆಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಮಾಂಡೋಸ್ ಸೈಕ್ಲೋನ್ ರೂಪ ತಾಳಿ ರಾಜ್ಯ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆ ಆಗುತ್ತಿರುವುದರಿಂದ ಸಾಕಷ್ಟು ಜನರು ಅನಾರೋಗ್ಯ ಒಳಗಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಜನರಲ್ಲಿ ಶೀತ, ಜ್ವರ, ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ಕೊರೊನಾ ಸೋಂಕಿನ ಭೀತಿಯನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಡಿಸೆಂಬರ್ ತಿಂಗಳಾಗಿರುವ ಕಾರಣ ಚಳಿಗಾಲದ ನಡುವೆ ಸೈಕ್ಲೋನ್ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಉಂಟು ಮಾಡುತ್ತಿದೆ. ಆದ್ದರಿಂದ ವೃದ್ಧರು, ಮಕ್ಕಳು ಹಾಗೂ ಈಗಾಗಲೇ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಸಾಕಷ್ಟು ಎಚ್ಚರಿಕೆಯಿಂದ ಇರ್ಬೇಕು. ಉಸಿರಾಟ ಸಮಸ್ಯೆ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ವೈದ್ಯರಿಗೂ ಎಚ್ಚರಿಕೆಯಿಂದ ಇರಲು ಸಭೆ ಕರೆದು ಸೂಚನೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Shivamogga: ತಾವೇ ಮುಂದೆ ನಿಂತು ಅಪ್ಪನಿಗೆ 2ನೇ ಮದುವೆ ಮಾಡಿಸಿದ್ರು, ಆಸ್ತಿ ಕೊಡದಾಗ ಸುಪಾರಿ ಕೊಟ್ಟು ಮುಗಿಸಿದ್ರು
ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆ
ಇದೇ ವೇಳೆ ಝೀಕಾ ವೈರಸ್ ಕುರಿತಂತೆ ಮಾಹಿತಿ ನೀಡಿದ ಸಚಿವರು, ಲ್ಯಾಬ್ ನಿಂದ ರಿಪೋರ್ಟ್ ಬಂದಿದ್ದು, ಹೆಣ್ಣು ಮಗುವಿಗೆ ಝೀಕಾ ವೈರಸ್ ಸೋಂಕು ದೃಢವಾಗಿದೆ. ಸದ್ಯ ಮಗುವಿನ ಆರೋಗ್ಯ ಮೇಲೆ ನಾವು ನಿಗಾ ಇಟ್ಟಿದ್ದೇವೆ. ರಾಜ್ಯದಲ್ಲಿ ಮೊದಲ ಬಾರಿ ಝೀಕಾ ವೈರಸ್ ದೃಢವಾಗಿದೆ. ರಾಯಚೂರು ಹಾಗೂ ನೆರೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಆದರೆ ಯಾರು ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಈ ಕುರಿತಂತೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ 14 ರಂದು ನಮ್ಮ ಕ್ಲಿನಿಕ್ ಲೋಕಾರ್ಪಣೆ
ರಾಜ್ಯಾದ್ಯಂತ ನಮ್ಮ ಕ್ಲಿನಿಕ್ ಯೋಜನೆ ಜಾರಿ ಮಾಡಲಾಗುತ್ತಿದೆ. ಡಿಸೆಂಬರ್ 14ರಂದು ಸಿಎಂ ಬೊಮ್ಮಾಯಿ ಅವರು ಧಾರವಾಡದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ 144 ಕ್ಲಿನಿಕ್ಗಳು ಏಕಕಾಲದಲ್ಲಿ ಲೋಕಾರ್ಪಣೆ ಆಗಲಿದೆ. ಒಟ್ಟು 438 ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಮಾತ್ರ ಜನವರಿ ತಿಂಗಳಿನಲ್ಲಿ 150 ನಮ್ಮ ಕ್ಲಿನಿಕ್ ತೆರೆಯಲಾಗುತ್ತೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 248 ನಮ್ಮ ಕ್ಲಿನಿಕ್ ತೆರೆಯಲಾಗುತ್ತದೆ. ಇದರಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ಉಪಯೋಗ ಆಗಲಿದೆ. 20 ಸಾವಿರ ಜನರಿಗೆ ಒಂದು ನಮ್ಮ ಕ್ಲಿನಿಕ್ ಎಂಬ ಅನುಪಾತದಲ್ಲಿ ನಮ್ಮ ಕ್ಲಿನಿಕ್ ಸೇವೆ ಒದಗಿಸಲಿದೆ.
ಆರೋಗ್ಯ ಸೌಧದಲ್ಲಿ ಇಂದು ನಡೆದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
₹200 ಕೋಟಿ ವೆಚ್ಚದಲ್ಲಿ ಭೀಮನಕುಪ್ಪೆ ಬಳಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಗತಿ ಸೇರಿದಂತೆ ಇಲಾಖೆಗೆ ಸಂಬಂಧಪಟ್ಟ ಅನೇಕ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
1/4 pic.twitter.com/y88LUcsD6A
— Dr Sudhakar K (@mla_sudhakar) December 12, 2022
ನಮ್ಮ ಕ್ಲಿನಿಕ್ನಲ್ಲಿ ಲಭ್ಯವಾಗಲಿದೆ 12 ಪ್ರಮುಖ ಸೇವೆ
ಗರ್ಭಿಣಿ ಹಾರೈಕೆ, ಶಿಶುವಿನ ಹಾರೈಕೆ, ಮಕ್ಕಳ ಸೇವೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಂಪೂರ್ಣ ಓಪಿಡಿ ಸೇವೆಗಳು, ಮಧುಮೇಹ, ರಕ್ತದೊತ್ತಡ ಚೆಕ್ ಅಪ್, ಕ್ಯಾನ್ಸರ್ ಸ್ಕ್ರೀನಿಂಗ್ ಸೇವೆ, ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ, ಕಣ್ಣಿನ ತಪಾಸಣೆ, ಮೂಗು, ಗಂಟಲು ENT ಸೇವೆಗಳು, ಮಾನಸಿಕ ಆರೋಗ್ಯ ಸ್ಕ್ರೀನಿಂಗ್ ಸೇವೆ, ವೃದ್ಧಾಪ್ಯ ಹಾರೈಕೆ ಹಾಗೂ ತುರ್ತು ವೈದ್ಯಕೀಯ ಸೇವೆಗಳು ಲಭ್ಯವಾಗಲಿದೆ.
ಇಲ್ಲಿ ಯಾವುದೇ ಯೂಸರ್ ಫೀ ಇರೋದಿಲ್ಲ, ಎಲ್ಲಾ ಸೇವೆಗಳು ಉಚಿತ. ಔಷಧಿಗಳೂ ಕೂಡ ಸಂಪೂರ್ಣ ಉಚಿತ, ಪ್ರಯೋಗಾಲಯ ಸೇವೆಗಳೂ ಉಚಿತವಾಗಿ, 14 ಮಾದರಿಯ ಟೆಸ್ಟ್ ಗಳು ಸಂಪೂರ್ಣ ಉಚಿತ ಲಭ್ಯವಾಗಲಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ