ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ (Cyclone Mandous) ಪರಿಣಾಮ ಹೆಚ್ಚಾಗಿದ್ದು, ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ (India Meteorological Department) ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಡಿಸೆಂಬರ್ 12ರವರೆಗೆ ಮೋಡ ಕವಿದ ವಾತಾವರಣ, ಚಳಿಯ ಜೊತೆಗೆ ಮಳೆ ಸುರಿಯಲಿದೆ. ಮತ್ತೊಂದೆಡೆ ಕೆ.ಆರ್. ಮಾರ್ಕೆಟ್ನಲ್ಲಿ (K.R.Market) ಜನಜೀವನ ಅಸ್ತವ್ಯಸ್ತವಾಗಿದ್ದು, ವ್ಯಾಪಾರ ಮಾಡಲಾಗದೇ ವ್ಯಾಪಾರಿಗಳು ಪರದಾಡುತ್ತಿದ್ದಾರೆ.
ಇನ್ನೂ 3 ದಿನಗಳ ಕಾಲ ಮಳೆ ಮುಂದುವರಿಕೆ
ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ನಾಳೆ ಕೂಡ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಇನ್ನೂ 3 ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಒಳನಾಡಿನ ಚಿತ್ರದುರ್ಗ, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು ಜೆಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ
ಚಂಡಮಾರುತದ ಪರಿಣಾಮದಿಂದ ಸಿಲಿಕಾನ್ ಸಿಟಿಯಲ್ಲಿ ತಾಪಮಾನ ಇಳಿಕೆಯಾಗಿದ್ದು, ಕೆಲ ಭಾಗಗಳಲ್ಲಿ ಮಳೆಯಾಗುತ್ತಿದ್ದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಇನ್ನೂ ಮಳೆಗೆ ಸಿಲಿಕಾನ್ ಸಿಟಿಯ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೆಸರು ಗದ್ದೆಯಂತಾದ ಕೆ.ಆರ್ ಮಾರ್ಕೆಟ್
ಚಳಿ ಹಾಗೂ ತುಂತುರು ಮಳೆ ಹಿನ್ನೆಲೆ ಕೆ. ಆರ್ ಮಾರ್ಕೆಟ್ನ ವ್ಯಾಪಾರಿಗಳಿಗೂ ತೊಂದರೆಯುಂಟಾಗಿದೆ. ಕೆ.ಆರ್ ಮಾರ್ಕೆಟ್ ಅಂತು ಸದ್ಯ ಕೆಸರು ಗದ್ದೆಯಂತಾಗಿದ್ದು, ವ್ಯಾಪಾರಿಗಳು ವ್ಯಾಪಾರ ಮಾಡಲಾಗದೇ ಒದ್ದಾಡುತ್ತಿದ್ದಾರೆ.
ವ್ಯಾಪಾರವಿಲ್ಲದೇ ವ್ಯಾಪಾರಿಗಳ ಅಳಲು
ಮಳೆ ಹಿನ್ನೆಲೆ ವ್ಯಾಪಾರ ಮಾಡುವುದಕ್ಕೂ ಆಗುತ್ತಿಲ್ಲ. ಗ್ರಾಹಕರು ಕೂಡ ಬರುತ್ತಿಲ್ಲ. ಕಳೆದ ಮೂರು ದಿನದಿಂದ ವ್ಯಾಪಾರ ಇಲ್ಲ. ಮಧ್ಯರಾತ್ರಿ 2 ಗಂಟೆಗೆ ಬಂದು ವ್ಯಾಪಾರ ಮಾಡಿದರೂ ಸಹ ಅಸಲು ಹಣ ಕೂಡ ಸಿಗುತ್ತಿಲ್ಲ.
ಇದೇ ವಾರದಲ್ಲಿ ಧನುರ್ಮಾಸ ಕೂಡ ಶುರುವಾಗುತ್ತದೆ. ಧನುರ್ಮಾಸದಲ್ಲಿ ವ್ಯಾಪಾರ ಕಡಿಮೆ ಇರುತ್ತದೆ. ಹೀಗೆ ಆದರೆ ನಾವು ಹೇಗೆ ಜೀವನ ನಡೆಸುವುದು. ನಾವು ದಿನದ ವ್ಯಾಪಾರ ನಂಬಿ ಜೀವನ ನಡೆಸುವವರು ಎಂದು ರಸ್ತೆ ಬದಿ ವ್ಯಾಪಾರಿಗಳು ಅಳಲು ತೊಡಿಕೊಂಡಿದ್ದಾರೆ.
ಮಳೆಗೆ ಸಿಲಿಕಾನ್ ಸಿಟಿಮಂದಿ ಮನೆಯಲ್ಲೇ ಲಾಕ್
ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನ ಮನೆಬಿಟ್ಟು ರಸ್ತೆಗಿಳಿಯುತ್ತಿಲ್ಲ. ಎಡಬಿಡದೇ ಸುರಿಯುತಿರೋ ಮಳೆಗೆ ಸಿಲಿಕಾನ್ ಸಿಟಿ ಮಂದಿ ಕಂಗಾಲಾಗಿದ್ದಾರೆ.
ಸದ್ಯ ಬೆಂಗಳೂರು ಕಾಶ್ಮೀರದಂತೆ ಮೈಕೊರೆಯುವ ಚಳಿಯಿಂದ ಕೂಡಿದೆ. ವ್ಯಾಪಾರವಿಲ್ಲದೇ ಆಟೋ, ಟ್ಯಾಕ್ಸಿ ಚಾಲಕರು ಹಾಗೂ ವ್ಯಾಪಾರಸ್ಥರು ಜಿಟಿಜಿಟಿ ಮಳೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಆರೋಗ್ಯ ಹದಗೆಡೋ ಆತಂಕ, ವೈದ್ಯರ ಸಲಹೆ
ಮಳೆಯಿಂದಾಗಿ ವ್ಯಾಪಾರ ಹದಗೆಡುವ ಸಾಧ್ಯತೆಯಿದ್ದು, ಮಕ್ಕಳು ಮತ್ತು ವೃದ್ಧರಿಗೆ ಚಳಿಗೆ ಮೈವೊಡ್ಡದಿರುವಂತೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಹೆಚ್ಚಿದ ಸ್ವೆಟರ್ ಟೋಪಿ ಖರೀದಿ
ಇದೀಗ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಉಣ್ಣೆ ಸ್ವೆಟರ್, ಟೋಪಿ ಮೊರೆ ಹೋಗಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಟೋಪಿ, ಸ್ವೆಟರ್ಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ