ಇತ್ತೀಚಿಗಷ್ಟೇ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ನಿತ್ಯ ಬಳಸಲ್ಪಡುವ ಮೊಸರುಗಳ ಪ್ಯಾಕೆಟಿನ ಹಿಂದಿ ಪದವಾದ "ದಹಿ" ಎಂದು ಬರೆಯಬೇಕೆಂದು ಸೂಚಿಸಿತ್ತು. ಪ್ರಾಧಿಕಾರದ ಈ ಸೂಚನೆಯು ದಕ್ಷಿಣದ ರಾಜ್ಯಗಳಿಗೆ (State) ಸರಿ ಹೋಗಿರಲಿಲ್ಲ. ಕಾರಣ ಹಿಂದಿ ಹೇರಿಕೆಯ ದಬ್ಬಾಳಿಕೆ ಇದೆಂದು ಜಡಿದು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಈ ಪದ ಬಳಕೆಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿತ್ತು. ಪ್ರಸ್ತುತ, ಈ ವಿದ್ಯಮಾನವನ್ನು (Current Affairs) ಆಧಾರಿಸಿ FSSAI ತನ್ನ ವಿವಾದಾತ್ಮಕ ಸೂಚನೆಯನ್ನು ಹಿಂಪಡೆದುಕೊಂಡಿದೆ ಹಾಗೂ ಆಯಾ ಪ್ರಾದೇಶಿಕಗಳಲ್ಲಿ ಮೊಸರನ್ನು ಯಾವ ಪದದಿಂದ ಕರೆಯಲಾಗುತ್ತದೆಯೋ ಅದನ್ನೆ ಬಳಸಲು ಅನುವು ಮಾಡಿಕೊಟ್ಟಿದೆ.
ಈ ವರ್ಷದಾರಂಭದ ಜನವರಿ 11 ರಂದು ಆಹಾರ ಸುರಕ್ಷತಾ ಪ್ರಾಧಿಕಾರವು ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಆ ಅಧಿಸೂಚನೆಯಲ್ಲಿ ಅದು ದಕ್ಷಿಣದ ರಾಜ್ಯಗಳಾದ ಅದರಲ್ಲೂ ವಿಶೇಷವಾಗಿ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಅಲ್ಲಿನ ಸಹಕಾರಿ ಡೈರಿ ಒಕ್ಕೂಟಗಳು ಉತ್ಪಾದಿಸುವ ಮೊಸರಿನ ಪ್ಯಾಕೆಟ್ಟುಗಳ ಮೇಲೆ ಕ್ರಮವಾಗಿ ಮೊಸರು ಹಾಗೂ ತಯೀರ್ ಪದಗಳ ಬದಲು ಹಿಂದಿ ಪದವಾದ ದಹಿ ಎಂಬುದಾಗಿ ಲೇಬಲ್ ಮಾಡಬೇಕೆಂದಿತ್ತು.
FSSAI ನ ಈ ಅಧಿಸೂಚನೆಯು ನಿರೀಕ್ಷೆಯಂತೆ ದಕ್ಷಿಣ ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿತ್ತು. ತಮಿಳುನಾಡು ಮುಖ್ಯಮಂತ್ರಿಯಾದ ಎಂಕೆ ಸ್ಟಾಲಿನ್ ಅವರು ಇದನ್ನು ಬಲವಂತದ ಹಿಂದಿ ಹೇರಿಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತ ಇದು ನಮ್ಮ ಮಾತೃ ಭಾಷೆಗಳ ಮೇಲೆ ಮಾಡಲಾಗುತ್ತಿರುವ ಅವಮಾನವಾಗಿದ್ದು ಇಂತಹ ಕೃತ್ಯ ಎಸಗುತ್ತಿರುವ ಶಕ್ತಿಗಳನ್ನು ತಮಿಳುನಾಡಿನಿಂದ ಶಾಶ್ವತವಾಗಿ ಹೊರಗಟ್ಟಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಸೇವೆ ಮಾಡಿ ಹೆಸರುಗಳಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿರುವ ಅಣ್ಣಾಮಲೈ ಅವರು ಸಹ FSSAI ಗೆ ಪತ್ರ ಬ್ರೆದು ಅದು ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.
ಇತ್ತ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಅವರು ಸಹ ಕೇಂದ್ರದ ಈ ದಬ್ಬಾಳಿಕೆಯನ್ನು ಪ್ರತಿಭಟಿಸುತ್ತ ಇದು ದಕ್ಷಿಣ ಭಾರತೀಯರ ಮೇಲೆ ಬಲವಂತವಾಗಿ ಹಿಂದಿ ಹೇರುವ ಹುನ್ನಾರ ಎಂದು ಖಾರವಾಗಿ ಪ್ರತಿಕ್ರಯಿಸಿದ್ದರು.
ಅಣ್ಣಾಮಲೈ ಅವರು ಈ ಬಗ್ಗೆ ಟ್ವಿಟ್ ಮಾಡುತ್ತ, "FSSAI ನಿಂದ ಹೊರಡಿಸಲಾಗಿರುವ ರಾಜ್ಯ ಒಡೆತನದ ಸಹಕಾರಿ ಒಕ್ಕೂಟಗಳಿಂದ ಉತ್ಪಾದಿಸಲಾದ ಮೊಸರಿನ ಸ್ಯಾಚೆಟ್ ಗಳ ಮೇಲೆ ಹಿಂದಿಯ 'ದಹಿ' ಎಂಬ ಪದಪ್ರಯೋಗದ ಅಧಿಸೂಚನೆಯು ಖಂಡಿತವಾಗಿಯೂ ನಮ್ಮ ಪ್ರಧಾನಿ ಮೋದಿಯವರ ಪ್ರಾದೇಶಿಕ ಭಾಷೆಗಳ ಪ್ರಚಾರ ನೀತಿಯಡಿಯಲ್ಲಿ ಸರಿ ಹೊಂದುವುದಿಲ್ಲ, ಹಾಗಾಗಿ ಈ ಕೂಡಲೇ ಈ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಿ" ಎಂದು ಬರೆದಿದ್ದರು.
ಅವರ ಈ ಟ್ವಿಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೆ ಅವರ ಈ ನಡೆಯನ್ನು ಬಹಳಷ್ಟು ಜನರು ಮೆಚ್ಚಿಕೊಂಡರು. ಕರ್ನಾಟಕದ ಒಬ್ಬ ಟ್ವಿಟರ್ ಬಳಕೆದಾರರಾದ @kvgirish100 ಎಂಬುವವರು ಕರ್ನಾಟಕದ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ನಳೀನ್ ಕುಮಾರ್ ಕಟೀಲ್ ಅವರನ್ನು ಟ್ಯಾಗ್ ಮಾಡುತ್ತ, "ಅಣ್ಣಮಲೈ ಅವರಿ ನೀವು ಇದನ್ನು ಕಲಿಯಬೇಕು....ಸ್ವಲ್ಪ ಧೈರ್ಯ ತೋರಿಸಿ" ಎಂದು ಪ್ರತಿಕ್ರಯಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ವರುಣ ವ್ಯೂಹ; ಸೋಲಿತ್ತೇವೆ ಎಂದ ಬಿಎಸ್ವೈಗೆ ಡಿಕೆಶಿ, ಸಿದ್ದು ಸವಾಲ್!
ಕಳೆದ ಬಾರಿ ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದಾಗ ತಮ್ಮ ರಾಜಕೀಯ ವಿರೋಧಿಗಳನ್ನು ಕುರಿತು ಭಾಷೆಯ ಹೆಸರಿನಲ್ಲಿ ಆಟ ಆಡುವುದನ್ನು ನಿಲ್ಲಿಸಿ ಏಕೆಂದರೆ ಈ ಮೂಲಕ ನೀವು ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವಿರಿ ಎಂದು ಜರಿದಿದ್ದರು. ಈ ಸಂದರ್ಭದಲ್ಲಿ ಅವರು ಕನ್ನಡ ಭಾಷೆಯು ಸಾಕಷ್ಟು ಸಮೃದ್ಧವಾಗಿದ್ದು ಭಾರತಕ್ಕೆ ಹೆಮ್ಮೆ ತರುತ್ತದೆ ಎಂದು ಸಹ ಬಣ್ಣಿಸಿದ್ದರು.
ತಮ್ಮ ವಿರೋಧವನ್ನು ಪ್ರಸ್ತುತಪಡಿಸುತ್ತ ಕುಮಾರಸ್ವಾಮಿಯವರು, "ಕೆಎಂಎಫ್ ನಂದಿನಿ ನಮ್ಮ ಕರ್ನಾಟಕದ ಹೆಮ್ಮೆಯ ಒಕ್ಕೂಟ. ಇದು ಗೊತ್ತಿದ್ದೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಧೈರ್ಯ ತೋರಿದ್ದಾರೆ. ಈ ಹಿಂದಿ ಪದ ಬಳಕೆಯ ಹಿಂದೆ ನಂದಿನಿ ಎಂಬ ಹೆಸರನ್ನೇ ಮರೆ ಮಾಚುವುದಾಗಿದೆಯೆ? ಹಲವು ಬಾರಿ ಪ್ರಯತ್ನಿಸಿ ವಿಫಲಗೊಂಡಿದ್ದರೂ ಈಗ ಬಿಜೆಪಿ ಈ ರೀತಿಯ ಅಸಮಂಜಸ ಮಾರ್ಗಗಳ ಮೂಲಕ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ. " ಎಂದು ಟ್ವಿಟ್ ಮಾಡಿದ್ದರು.
ಹೀಗೆ ಆಕ್ರೋಶಗಳು ಒಂದಾದ ಮೇಲೊಂದರಂತೆ ವ್ಯಾಪಿಸಲಾರಂಭಿಸಿದಾಗ ಎಚ್ಚೆತ್ತ FSSAI ತನ್ನ ಸ್ಪಷ್ಟೀಕರಣ ನೀಡುತ್ತ, "ಈ ಬಗ್ಗೆ ಹಿಂದಿ ಪದ ಹಿಂಪಡೆಯುವಂತೆ ಕೋರಿ ಸಾಕಷ್ಟು ಪ್ರಸ್ತಾವನೆಗಳು ಬಂದಿರುವ ಹಿನ್ನೆಲೆಯಲ್ಲಿ, ಈ ಮುಂದೆ ಸಹಕಾರಿ ಒಕ್ಕೂಟಗಳು ತಮ್ಮ ಉತ್ಪನ್ನವಾದ ಮೊಸರನ್ನು ಆಂಗ್ಲದ ಕರ್ಡ್ ಪದ ಹಾಗೂ ಆಯಾ ಪ್ರದೇಶಗಳಲ್ಲಿ ಬಳಕೆಯಿರುವ ಪದವನ್ನೇ ಮುಂದುವರೆಸುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎನ್ನುವ ಮೂಲಕ ಸದ್ಯ ಮೊಸರಿನ ವಿವಾದಕ್ಕೆ ತೆರೆ ಎಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ