HOME » NEWS » State » CULTURAL PROGRAMS FROM ACROSS NATION EXHIBITED AT ALVAS NUDISIRI IN CHIKKAMAGALURU SNVS

ಆಳ್ವಾಸ್ ನುಡಿಸಿರಿ: ಚಿಕ್ಕಮಗಳೂರಿನಲ್ಲಿ ಮೇಳೈಸಿದ ದೇಶದ ಸಾಂಸ್ಕೃತಿಕ ವೈಭವ..!

ದೇಶದ ವಿವಿಧ ಕಲಾ ಪ್ರಕಾರಗಳೇ ಅಲ್ಲಿ ಅನಾವರಣಗೊಂಡಿತ್ತು. ನೃತ್ಯ, ಭರತನಾಟ್ಯ, ಮೋಹಿನಿಯಾಟ್ಟಂನಂತಹ ದೇಶೀಯ ನೃತ್ಯ ಕಲೆಗಳೊಂದಿಗೆ ಶ್ರೀಲಂಕಾದ ಕ್ಯಾಂಡಿಯನ್, ಸ್ಟಿಕ್ ಡ್ಯಾನ್ಸ್ ಗಳು ಕೂಡ ನೆರೆದಿದ್ದವರ ಮನ ತಣಿಸಿದವು. ಕರಾವಳಿಯ ಗಂಡು ಕಲೆಯೆನಿಸಿರೋ ಯಕ್ಷಗಾನದೊಂದಿಗೆ ಬಂಜಾರ ನೃತ್ಯ, ಕೇರಳದ ಒಪ್ಪಣಂ, ಕಥಕ್ ಸಮ್ಮೋಹನಂ ನೃತ್ಯಗಳು ಎಲ್ಲರ ಗಮನ ಸೆಳೆದವು.

news18
Updated:January 27, 2020, 7:28 AM IST
ಆಳ್ವಾಸ್ ನುಡಿಸಿರಿ: ಚಿಕ್ಕಮಗಳೂರಿನಲ್ಲಿ ಮೇಳೈಸಿದ ದೇಶದ ಸಾಂಸ್ಕೃತಿಕ ವೈಭವ..!
ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ದೃಶ್ಯ
  • News18
  • Last Updated: January 27, 2020, 7:28 AM IST
  • Share this:
ಚಿಕ್ಕಮಗಳೂರು: ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ಮಲೆನಾಡಿನಲ್ಲಿ ನಡೆಸಿದ ಸಾಂಸ್ಕೃತಿಕ  ವೈಭವ ಕಾರ್ಯಕ್ರಮ ನೆರೆದವರನ್ನು ಮೂಕವಿಸ್ಮಿತರನ್ನಾಗಿಸಿತು. ಕರಾವಳಿಯ ಗಂಡುಕಲೆಯೆನಿಸಿರೋ ಬಡಗು ತೆಂಕು ತಿಟ್ಟಿನ ಯಕ್ಷಗಾನ ಕಲೆಯನ್ನು ನಿರೂಪಿಸುತ್ತಿರೋ ಹೆಂಗಳೆಯರು. ಅಪರೂಪದ ಮೋಹಿನಿಯಾಟ್ಟಂ ನೃತ್ಯವನ್ನು ಸಿಂಗಾರದಿಂದ ಮಾಡುತ್ತಿರೋ ಕಲಾವಿದರು. ಗಿರ ಗಿರನೆ ಗಿರಕಿ ಹೊಡೆಯುತ್ತಾ ದೋಲ್ ಚಲಂ ನಡೆಸುತ್ತಿರೋ ಮಣಿಪುರದ ವಿದ್ಯಾರ್ಥಿಗಳು. ಇದೆಲ್ಲಾ ಕಾಫಿನಾಡಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದ ಝಲಕ್.

ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ಮೂಡಬಿದಿರೆಯಲ್ಲಿ "ವಿಶ್ವ ನುಡಿಸಿರಿ ವಿರಾಸತ್" ಅನ್ನು ನಡೆಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅತೀ ಹೆಚ್ಚಿನ ಜನರನ್ನು ನುಡಿಸಿರಿ ಹಾಗೂ ವಿರಾಸತ್​ಗೆ ಸೆಳೆಯೋ ನಿಟ್ಟಿನಲ್ಲಿ ಕಾಫಿನಾಡಲ್ಲಿ ಇಂತಹ ಅಪರೂಪದ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಆಟದ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ವೈಭವದಲ್ಲಿ ಆಳ್ವಾಸ್ ಕಾಲೇಜಿನ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭೆಯನ್ನು ಅನಾವರಣಗೊಳಿಸಿದ್ರು. ಚುಮು ಚುಮು ಚಳಿಯ ನಡುವಲ್ಲೂ ವಿದ್ಯಾರ್ಥಿಗಳಿಂದ ಕೇರಳದ ಮೋಹಿನಿಯಾಟ್ಟಂ, ಕಥಕ್ ಸಮ್ಮೋಹನಂ, ಒಪ್ಪಣಂ, ಪಶ್ಚಿಮ ಬಂಗಾಲದ ಪುರುಲಿಯಾ ಸಿಂಹದ ಬೇಟೆ ನೃತ್ಯ, ಡೋಲುಗಳನ್ನು ಹಿಡಿದು ಕುಣಿದಾಡೋ ಮಣಿಪುರ ದೋಲ್ ಚಲಮ್ ನೃತ್ಯ ನೆರೆದವರು ನಿಬ್ಬೆರಗಾಗುವಂತೆ ಮಾಡಿತು. ಇನ್ನು ವಿದೇಶಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಬಗೆಬಗೆಯ ನೃತ್ಯ ಎಲ್ಲರನ್ನು ಹೊಸತೊಂದು ಲೋಕಕ್ಕೆ ಕರೆದೊಯ್ದಿತ್ತು. ಅದರಲ್ಲೂ ವಿದ್ಯಾರ್ಥಿಗಳು ಕ್ಲಾಸಿಕ್ ಹಾಗೂ ಮಾರ್ಷಲ್ ಆರ್ಟ್ಸ್ ಸಮ್ಮಿಲನಗೊಂಡಿರೊ ಮಣಿಪುರ ಸ್ಟಿಕ್ ಡ್ಯಾನ್ಸ್​ಗಳು ಮನಮೋಹಕವಾಗಿ ಮೂಡಿ ಬಂದವು. ಆಂಧ್ರ ಪ್ರದೇಶದ ಪ್ರಸಿದ್ದವೆನಿಸಿರೋ ಬಂಜಾರ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ ದೇಶಿಯ ಸೊಗಡನ್ನು ಅನಾವರಣಗೊಳಿಸಿತು.

ಇದನ್ನೂ ಓದಿ: ‘ಒಕ್ಕಲಿಗರನ್ನು ಪಾಕಿಸ್ತಾನಿಗಳು ಎಂದು ಅವಮಾನಿಸಿದ ಬಿಜೆಪಿ‘: ಎಚ್​​.ಡಿ ಕುಮಾರಸ್ವಾಮಿ

ಇಷ್ಟು ದಿನ ಕೇವಲ ಟಿವಿಗಳಲ್ಲಷ್ಟೇ ನುಡಿಸಿರಿ, ವಿರಾಸತ್​ನಂತಹ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ  ಕಾಫಿನಾಡಿಗರಿಗೆ, ಆಳ್ವಾಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ವೈಭವ ವಿರಾಸತ್ ಗತವೈಭವವನ್ನು ಮೇಳೈಸುವಂತೆ ಮಾಡಿತ್ತು. ಸಭಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಸುಮಾರು 3 ಗಂಟೆಗಳ ಕಾಲ ಅನೇಕರು ಜಾಗವಿಲ್ಲದೇ ನಿಂತೇ ಕಾರ್ಯಕ್ರಮವನ್ನು ವೀಕ್ಷಿಸಿದರು.

Dance at Nudisiri
ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ


ಇದೇ ಮೊದಲ ಬಾರಿ ನಾನಾ ಪ್ರಕಾರಗಳ ನೃತ್ಯಗಳನ್ನು ಕಣ್ಣಾರೆ ಕಂಡ ಪ್ರೇಕ್ಷಕರು ಕೆಲ ಕಾಲ ಹೊಸತೊಂದು ಲೋಕದಲ್ಲಿ ಸ್ವಚ್ಚಂಧವಾಗಿ ವಿಹರಿಸಿದರು. ಇನ್ನು ಭರತ್ಯನಾಟ್ಯ, ಮಲಗಂಬ ಹಾಗೂ ಹಗ್ಗದ ಮೇಲೆ ನಡೆಯೋ ಕಲಾಪ್ರಕಾರಗಳು ವಿಶೇಷವಾಗಿತ್ತು. ಕೇವಲ ಮೂಡಬಿದಿರೆಗಷ್ಟೇ ಸೀಮಿತವಾಗಿದ್ದ ವಿರಾಸತ್, ನುಡಿಸಿರಿಯಂತಹ ಕಾರ್ಯಕ್ರಮವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಮೊದಲು ರಾಜ್ಯದ ಪ್ರತೀ ಜಿಲ್ಲೆ ಜಿಲ್ಲೆಗೂ ವಿಸ್ತರಿಸಬೇಕೆಂದು ಉದ್ದೇಶದಿಂದ ಕಾಫಿನಾಡಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಾಂಸ್ಕೃತಿಕ ಪರಂಪರೆ, ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸೋ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗೂ ತಲುಪಿಸೋ ಉದ್ದೇಶವನ್ನು ಆಳ್ವಾಸ್ ಪ್ರತಿಷ್ಠಾನ ಹಾಕಿಕೊಂಡಿದೆ. ಒಟ್ಟಿನಲ್ಲಿ ಕಾಫಿನಾಡಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾಫಿನಾಡಿಗರಿಗೆ ವಿಶೇಷ ಅನುಭವನ್ನು ಉಣಬಡಿಸಿದ್ದು ಮಾತ್ರ ಸುಳ್ಳಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
Youtube Video
First published: January 27, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories