ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಕೊಲೆಯ ಕುರುಹು ಹುಡುಕಿಕೊಂಡು ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ಕಡೆಗೆ ಹೋಗಿದ್ದಾರೆ. ಬೆಂಗಳೂರಲ್ಲಿ 9 ತಿಂಗಳ ಹಿಂದೆ ಕೊಲೆಯಾದ ಯುವಕ ಶರತ್ ಶವಕ್ಕಾಗಿ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ನಲ್ಲಿ ಹುಡುಕಾಟ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಮೂಲದ ಶರತ್ ಎಂಬಾತ ಸಾಲ ಪಡೆದು ಹಿಂದಿರಿಗಿಸದ ಹಿನ್ನೆಲೆಯಲ್ಲಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿತ್ತು. ಬಳಿಕ ಆ ಮೃತದೇಹವನ್ನ ದುಷ್ಕರ್ಮಿಗಳು ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ ಎಸೆದು ಪರಾರಿ ಆಗಿದ್ರು. ಸದ್ಯ 9 ತಿಂಗಳ ಹಿಂದಿನ ಕೊಲೆ ಕೇಸ್ನಲ್ಲಿ ಶವ ಹುಡುಕಿಕೊಂಡು ಹೋದವ ಪೊಲೀಸರಿಗೆ ಸಿಕ್ಕಿದ್ದು ಏನು? ಕಬ್ಬನ್ ಪಾರ್ಕ್ ಪೊಲೀಸ್ರು ಮುಂದಿನ ಪ್ಲ್ಯಾನ್ ಏನು? ಅಂತ ನಾವು ಹೇಳ್ತೀವಿ ಓದಿ.
ಹಣ ವಾಪಸ್ ಕೊಡದಿದ್ದಕ್ಕೆ ಉದ್ದೇಶಪೂರ್ವಕ ಕೊಲೆ!
ಅನಾಮಿಕ ಪತ್ರ ಹಾಗು ವೀಡಿಯೋ ನೋಡಿ ಸುಮೋಟೋ ಕೇಸ್ ದಾಖಲು ಮಾಡ್ಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸ್ರು ಕೊಲೆಯಾದ ಶರತ್ ಶವ ಹುಡುಕಿಕೊಂಡು ಚಾರ್ಮಾಡಿ ಘಾಟ್ಗೆ ಹೋಗಿದ್ದಾರೆ. ಸ್ಥಳೀಯರು ಹಾಗು ಮೀನುಗಾರರನ್ನು ಬಳಸಿಕೊಂಡು ಘಾಟ್ಗೆ ಇಳಿದು ಸತ್ತ ಶರತ್ನನ್ನು ಹುಡುಕಾಡಿದ್ದಾರೆ.
ತೀವ್ರವಾಗಿ ಹಲ್ಲೆಗೆ ಒಳಗಾಗಿದ್ದ ಶರತ್, ಸರ್ಕಾರದಿಂದ ಸಬ್ಸಿಡಿಯಲ್ಲಿ ಕಾರು ಕೊಡಿಸುವುದಾಗಿ ಹಣ ವಸೂಲಿ ಮಾಡಿದ್ದ. ಚಿಕ್ಕಬಳ್ಳಾಪುರ, ಯಲಹಂಕ ಭಾಗದಲ್ಲಿ ಲಕ್ಷ ಲಕ್ಷ ಹಣ ಸಂಗ್ರಹಿಸಿ ನಾಮ ಹಾಕಿದ್ರಿಂದ, ಕೋಪಗೊಂಡು ಮಾರ್ಚ್ 21 ಬನಶಂಕರಿಯಿಂದ ಕಿಡ್ನ್ಯಾಪ್ ಮಾಡಿ ಚಿಕ್ಕಬಳ್ಳಾಪುರ ಬಳಿಕ ಫಾರ್ಮ್ಹೌಸ್ನಲ್ಲಿಟ್ಟು ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಮೃತನ ಕುಟುಂಬಸ್ಥರ ಮೇಲೂ ಮೂಡಿದೆ ಅನುಮಾನ!
ಚಿಕ್ಕಬಳ್ಳಾಪುರದ ವೆಂಕಟಚಲಪತಿ ಎಂಬುವರ ತೋಟದಲ್ಲಿ ಹಲ್ಲೆ ಮಾಡಲಾಗಿತ್ತು. ಆ ಬಳಿಕ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಕಾರಿನಲ್ಲಿ ರಕ್ತ ಕಾರಿಕೊಂಡು ಸತ್ತ ಅನ್ನೋದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಎಸಿಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ NDRF ಟೀಂ ಬಳಸಿಕೊಂಡು ಶವ ಹುಡುಕುವ ಪ್ರಯತ್ನ ನಡೆದಿದೆ.
ಕೊಲೆ ಮಾಡಿದ ಆರೋಪಿಗಳಾದ ಓಬಳೇಶ್, ನವೀನ್ ಸಂಕೇತ್, ಗೋವಿಂದ್ ಮತ್ತು ಉದಯ್ ರಾಜ್ ಸೇರಿದಂತೆ ಹತ್ತು ಮಂದಿಯನ್ನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ, ವಿಚಾರಣೆ ಮಾಡ್ತಿದ್ದಾರೆ. ಆದರೆ ಸಾಕ್ಷಿ ಸಿಗುವುದೇ ಅನುಮಾನ ಎನ್ನುವಂತಾಗಿದೆ.
ಇನ್ನು ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಗಲಗುರ್ಕಿ ಚಲಪತಿ ಅಲಿಯಾಸ್ ವೆಂಕಟಾಚಲಪತಿ, ಆತನ ಮಗ ಎ.ವಿ ಶರತ್ ಕುಮಾರ್, ಸ್ನೇಹಿತರಾದ ಕೆ.ಧನುಷ್, ಆರ್.ಶ್ರೀಧರ್, ಹಾಗೂ ಯಲಂಕದ ಎಂ.ವಿ ಮಂಜುನಾಥ್, ಒಬಳೇಶ್, ನವೀನ್ ಸಂಕೇತ್ , ಗೋವಿಂದ್ ಮತ್ತು ಉದಯ್ ರಾಜ್ ಸೇರಿದಂತೆ ಒಟ್ಟಾರೆ 10 ಮಂದಿಯನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧನ ಮಾಡಿದ್ದರು.
ಮೃತ ಶರತ್ನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು, ಆತನ ಮೊಬೈಲ್ನಿಂದ ಪೋಷಕರಿಗೆ ಮೆಸೇಜ್ ಕಳುಹಿಸಿದ್ದರಂತೆ. ನಾನು ದುಡಿಯಲು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಅಂತ ಸಂದೇಶ ಕಳುಹಿಸಿದ್ದರಂತೆ. ಇದನ್ನೇ ನಿಜ ಎಂದು ನಂಬಿದ್ದ ಕುಟುಂಬಸ್ಥರು, ಆತನನ್ನು ಎಲ್ಲೂ ಹುಟುಕಾಟ ನಡೆಸಿರಲಿಲ್ಲವಂತೆ. ಅಲ್ಲದೇ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನು ಕೂಡ ನೀಡಿರಲಿಲ್ಲವಂತೆ.
ಎಷ್ಟೇ ತಿಂಗಳಾದರು ಮಗ ವಾಪಸ್ ಆಗದೇ ಇದ್ದದ್ದು ಹಾಗೂ ಆತನನಿಂದ ಯಾವುದೇ ಪ್ರತಿಕ್ರಿಯೆಬಾರದ ಕಾರಣ ಬನಶಂಕರಿ ಪೊಲೀಸ್ ಠಾಣೆಗೆತೆರಳಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಅನಾಮಧೇಯ ಹೆಸರಿನಲ್ಲಿ ಬಂದ ಪೇನ್ ಡ್ರೈವ್ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸಾಕ್ಷಿಯನ್ನು ನೀಡಿತ್ತು. ಈ ಸಣ್ಣ ಸುಳಿವು ಹಿಡಿದುಕೊಂಡು ಹೋದ ಪೊಲೀಸರಿಗೆ ಆರೋಪಿಗಳನ್ನು ಬಂಧನ ಮಾಡಲು ಸಾಧ್ಯವಾದರೂ, ಸದ್ಯ ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಪತ್ತೆ ಮಾಡುವುದು ದೊಡ್ಡ ಚಾಲೆಂಜ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ