CT Ravi: "ಪ್ರೀತಿಯ ಪಲ್ಲವಿ, ಕನ್ನಡ ಮಂತ್ರದೊಂದಿಗೆ ಮನ ಸೇರಿದ ಕನ್ನಡತಿ!" ಪತ್ನಿಗೆ ಸಿಟಿ ರವಿ ಪ್ರೇಮಪತ್ರ

ಸಿಟಿ ರವಿ (CT Ravi) ಹಾಗೂ ಪಲ್ಲವಿ (Pallavi) ವಿವಾಹ (Marriage) ಬಂಧನಕ್ಕೆ ಒಳಗಾಗಿ ಈಗ 21 ವರ್ಷವಾಗಿದ್ಯಂತೆ. ಈ ಹಿನ್ನೆಲೆಯಲ್ಲಿ ಪತ್ನಿ ಪಲ್ಲವಿ ಅವರಿಗೆ ಫೇಸ್‌ಬುಕ್‌ನಲ್ಲಿ (Facebook) ಸುದೀರ್ಘವಾದ ಪ್ರೇಮ ಪತ್ರವನ್ನ (Love Letter) ಬರೆದಿದ್ದಾರೆ ಸಿಟಿ ರವಿ.

ಸಿಟಿ ರವಿ ಮತ್ತು ಪತ್ನಿ ಪಲ್ಲವಿ

ಸಿಟಿ ರವಿ ಮತ್ತು ಪತ್ನಿ ಪಲ್ಲವಿ

  • Share this:
ಚಿಕ್ಕಮಗಳೂರು: ಬಿಜೆಪಿ ನಾಯಕ (BJP Leader), ಮಾಜಿ ಸಚಿವ (Ex Minister), ಚಿಕ್ಕಮಗಳೂರಿನ (Chikkamagaluru) ಹಾಲಿ ಶಾಸಕ (MLA) ಸಿಟಿ ರವಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸಿಟಿ ರವಿ (CT Ravi) ಹಾಗೂ ಪಲ್ಲವಿ (Pallavi) ವಿವಾಹ (Marriage) ಬಂಧನಕ್ಕೆ ಒಳಗಾಗಿ ಈಗ 21 ವರ್ಷವಾಗಿದ್ಯಂತೆ. ಈ ಹಿನ್ನೆಲೆಯಲ್ಲಿ ಪತ್ನಿ ಪಲ್ಲವಿ ಅವರಿಗೆ ಫೇಸ್‌ಬುಕ್‌ನಲ್ಲಿ (Facebook) ಸುದೀರ್ಘವಾದ ಪ್ರೇಮ ಪತ್ರವನ್ನ (Love Letter) ಬರೆದಿದ್ದಾರೆ ಸಿಟಿ ರವಿ. “ನಾನು ಚತುರ್ಭುಜನಾಗಿ ಇಂದಿಗೆ ಸಾರ್ಥಕ 21 ವಸಂತ ತುಂಬಿತು. ವಿವಾಹ ಬಂಧನವೆೇ ಬೇಡವೆಂದು ಅಂದುಕೊಂಡಿದ್ದ ನನ್ನನ್ನು ತನ್ನೊಲವಿನಿಂದ ಆಕರ್ಷಿಸಿ, ಆವರಿಸಿಕೊಂಡು ನನ್ನ ಮನಸ್ಸನ್ನು ಬದಲಾಯಿಸಿ, ಹಿರೇಮಗಳೂರಿನ ಶ್ರೀ ಕೋದಂಡರಾಮನ ಸನ್ನಿಧಿಯಲ್ಲಿ ಕನ್ನಡದ ಪೂಜಾರಿ ಶ್ರೀ ಕಣ್ಣನ್ ಅವರ ಪೌರೋಹಿತ್ಯದಲ್ಲಿ, ಕನ್ನಡದ ಮಂತ್ರದೊಂದಿಗೆ, ಗುರುಹಿರಿಯರ ಸಮ್ಮುಖದಲ್ಲಿ ನಡೆದ ಸರಳ ವಿವಾಹದಲ್ಲಿ, ಸಪ್ತಪದಿ ತುಳಿದು ನನ್ನ ಬಾಳ ಸಂಗಾತಿಯಾಗಿ ಬಂದವಳು ನನ್ನ ಮನದರಸಿ ಪಲ್ಲವಿ” ಅಂತ ಪತ್ನಿಯನ್ನು ಹಾಡಿ ಹೊಗಳಿದ್ದಾರೆ.  

“ನನ್ನ ಸುಖ-ದುಃಖದಲ್ಲಿ ಭಾಗಿಯಾದವಳು”

ಮನಕದ್ದ ದಿನದಿಂದ ಈ ದಿನದವರೆಗೆ ನನ್ನ ಸುಖ ದುಃಖದಲ್ಲಿ, ಬಾಳ ಏಳಿಗೆಯಲ್ಲಿ ಸಹಭಾಗಿಯಾಗಿ ನನ್ನ ಅರ್ಧಾಂಗಿಯಾಗಿ ಪಲ್ಲವಿ ನನ್ನ ಬದುಕಿನಲ್ಲಿ ಪಲ್ಲವಿಸಿದ್ದಾಳೆ. ನಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಪುತ್ರರತ್ನರನ್ನು (ಸಮರ್ಥ ಸೂರ್ಯ, ಸಾರ್ಥಕ್ ಸೂರ್ಯ) ದಯಪಾಲಿಸಿದ್ದಾಳೆ. ನಮ್ಮದು ಬೇವು-ಬೆಲ್ಲದ ಸಂಸಾರವೇ ಆದರೂ ಭಗವಂತ ನಮಗೆ ಬೆಲ್ಲವನ್ನೇ ಜಾಸ್ತಿ ದಯಪಾಲಿಸಿದ್ದಾನೆ. ಯಾಕೆಂದರೆ ನಮ್ಮ ಮನೆಯಲ್ಲಿ ಎಲ್ಲವೂ ಅವಳದೇ ಕಾರು-ಬಾರು. ನನಗೆ ಮಡದಿ, ಮಕ್ಕಳಿಗೆ ತಾಯಿಯಾಗಿ ಮಾತ್ರ ಅಲ್ಲ ನಮ್ಮೆಲ್ಲಾ ಕಾರ್ಯಕರ್ತರಿಗೆ ಪ್ರೀತಿಯ ಅಕ್ಕನಾಗಿ ನನ್ನ ಸಾರ್ವಜನಿಕ ಜೀವನದ ಒತ್ತಡವನ್ನೂ ಹಂಚಿಕೊಂಡಿದ್ದಾಳೆ” ಅಂತ ಬರೆದಿದ್ದಾರೆ.

“ಎಲ್ಲರನ್ನೂ ಪ್ರೀತಿಯಿಂದ ಕಂಡವಳು”

"ಅಯ್ಯೋ ನನಗೆ ಸಾಕ್ ಆಯ್ತಪ್ಪ ಇನ್ಮುಂದೆ ನಾನು ಎಲ್ಲೂ ಹೋಗಲ್ಲ. ನೀವುಂಟು, ನಿಮ್ಮ ಜನ ಉಂಟು, ಅದು ಹೆಂಗೆ ಸುತ್ತುತ್ತಿರಾ ನನಗೆ ಆಗಲ್ಲ" ಎಂದು ಹುಸಿಕೋಪ ತೋರಿಸಿದರೂ, ನಾನು ಸಂಘಟನೆಯ ಜವಾಬ್ದಾರಿಯಿಂದ ದೇಶ ಪರ್ಯಟನೆ ನಡೆಸುವಾಗ, ನಮ್ಮೂರ ಕಾರ್ಯಕರ್ತರು ಬಂದು "ಅಕ್ಕ, ಅಣ್ಣ ಊರಲ್ಲಿ ಇಲ್ಲ ಕಣಕ್ಕ ನೀನು ಬರಲೇಬೇಕು" ಎಂದಾಗ, ಹೋಗಿಬಂದು ನಾನು ಊರಲ್ಲಿಲ್ಲದ ಕೊರತೆಯನ್ನು ನೀಗಿಸಿದವಳು. ಮನೆಗೆ ಬಂದವರಿಗೆ ಭೇದವೆಣಿಸದೆ ಬಂಧುಗಳು ಎಂದು ಪರಿಗಣಿಸಿ ಪ್ರೀತಿಯಿಂದ ಕಂಡವಳು ಪಲ್ಲವಿ ಅಂತ ಹೊಗಳಿದ್ದಾರೆ.

ಇದನ್ನೂ ಓದಿ: Viral Video: ಬಡವನಾದರೆ ಏನು ಪ್ರಿಯೆ 90 ಸಾವಿರದ ಬೈಕ್ ಕೊಡಿಸುವೆ! ಹೆಂಡತಿಗೆ ಮೊಪೆಡ್ ಗಿಫ್ಟ್ ಕೊಟ್ಟ ಭಿಕ್ಷುಕ

“ಊಟೋಪಚಾರದ ವಿಚಾರದಲ್ಲಿ ಸಾಕ್ಷಾತ್ ಅನ್ನಪೂರ್ಣೆ”

ಇನ್ನು ಊಟೋಪಚಾರದ ವಿಚಾರಕ್ಕೆ ಬಂದರೆ ಆಕೆ ಸಾಕ್ಷಾತ್ ಅನ್ನಪೂರ್ಣೇಶ್ವರಿ, ಅಡುಗೆಯಲ್ಲಿ ಇವಳದ್ದು ನಳಪಾಕ, ಪ್ರವಾಸದಲ್ಲಿರುವಾಗ ಅವಳ ಕೈರುಚಿಯಡುಗೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಹಾಕುವ ಡ್ರೆಸ್ ಗಳ ಆಯ್ಕೆ ಅವಳದ್ದೇ, ಹಲವು ಬಾರಿ ನನ್ನುಡುಗೆ ಸರಿ ಕಾಣುತ್ತಿಲ್ಲವೆಂದು ಹುಸಿಮುನಿಸು ತೋರಿಸಿ ಬದಾಲಾಯಿಸುವವಳೂ ಇವಳೆ. ಹಾಗೆಯೇ ನನ್ನ ರಾಜಕೀಯ ಹೇಳಿಕೆಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ಮಾಡುವ ವಿಮರ್ಶಕಿಯೂ ಅಗಿದ್ದಾಳೆ ಅಂತ ಹೇಳಿದ್ದಾರೆ.

“ನಾನು ಇದುವರೆಗೂ ಒಂದು ಉಡುಗೊರೆ ಕೊಟ್ಟಿಲ್ಲ”

ಇಪ್ಪತ್ತು ವರ್ಷಗಳ ವೈವಾಹಿಕ ಜೀವನದಲ್ಲಿ ನನಗಿದು ಬೇಕು, ನನಗದು ಬೇಕು ಎಂಬ ಬೇಡಿಕೆಯ ಪಟ್ಟಿ ಇಟ್ಟವಳಲ್ಲ ನನ್ನ ಮಡದಿ, ಹಾಗೆಯೇ ಇಂದಿನವರೆಗೂ ಆಕೆಗೊಂದು ಉಡುಗೊರೆ ಕೊಟ್ಟವನೂ ನಾನಲ್ಲ. ನನ್ನ ಗಂಡ ಶಾಸಕ, ಮಂತ್ರಿ ಎಂದು ಮೆರೆದವಳೂ ಅಲ್ಲ. ನನ್ನ ಧರ್ಮಪತ್ನಿಯ ಒಂದೇ ಆಗ್ರಹ ಒಂದಿಡೀ ವರ್ಷದಲ್ಲಿ ಹತ್ತು ದಿನ ಮಡದಿ ಮಕ್ಕಳಿಗಾಗಿ ಮೀಸಲಿಟ್ಟು ಆ ಹತ್ತುದಿನ ಎಲ್ಲಿಯಾದರೂ ಪ್ರವಾಸ ಹೋಗೋಣ ಎಂಬುದು. ಅದನ್ನು ನಾನು ಒಪ್ಪಿಕೊಂಡು ಪ್ರತಿವರ್ಷ ಅಲ್ಲದಿದ್ದರೂ, ಹಲವು ವರ್ಷ ಅದನ್ನು ಈಡೇರಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿದ್ದಾಗ ಎಲ್ಲವನ್ನೂ ಈಡೇರಿಸಲು ಸಾಧ್ಯವೇ?

ಒಂದು ವರ್ಷ ಹೋರಾಟ ,ಇನ್ನೊಂದು ವರ್ಷ ಚುನಾವಣೆ, ಮತ್ತೊಂದು ವರ್ಷ ಮೀಟಿಂಗು, ಆಗ ಅವಳು ನಿಮಗೆ ಕುಟುಂಬಕ್ಕಿಂತ ಪಕ್ಷವೇ ದೊಡ್ಡದು ಎಂದು ಹಿತವಾಗಿ ಕುಟುಕಿದ್ದುಂಟು. ಒಂದು ರೀತಿಯಲ್ಲಿ ಅದು ನಿಜವೂ ಕೂಡಾ,ನಮ್ಮ ಪಕ್ಷ, ಸಂಘಟನೆ ನಮಗೆ ಕಲಿಸಿರುವುದೂ ಅದೇ ಅಲ್ಲವೇ. "ನೇಶನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್" ಎಂಬ ಮೂಲ ಮಂತ್ರ ಹೊಂದಿರುವ ಪಾರ್ಟಿ ನಮ್ಮದು.

“ರುಚಿಗೆ ತಕ್ಕ ಉಪ್ಪಿನಂತೆ ಸರಸದ ಜೊತೆ ವಿರಸವೂ ಇದೆ”

ನಮ್ಮ ಸಾಂಸಾರಿಕ ಜೀವನದಲ್ಲಿ ಸರಸವೆ ಎಲ್ಲ, ವಿರಸವೆ ಇಲ್ಲವೆಂದಿಲ್ಲ, ರುಚಿಗೆ ತಕ್ಕಷ್ಟು ಉಪ್ಪಿನ ಹಾಗೆ ಅದೂ ಇದೆ. ಎಲ್ಲಾ ಸುಖ ಸಂಸಾರಗಳ ಸೂತ್ರದಂತೆ ಆ ಕಡೆಯಿಂದ ಬರುವ ಎಲ್ಲಾ ಅಸ್ತ್ರಗಳಿಗೆ ನನ್ನುತ್ತರ ಮೌನ ಮಾತ್ರ, ಯಾಕೆಂದರೆ ಅವಳು ವಿನಾಕಾರಣ ಜಗಳವಾಡುವವಳಲ್ಲ, ಏನೋ ತಪ್ಪಾಗಿರುತ್ತದೆ ಹಾಗಾಗಿ ಈ ಪ್ರತಿಕ್ರಿಯೆ ಎಂದು ಸುಮ್ಮನಿರುತ್ತೇನೆ.


“ಹುಸಿ ಮುನಿಸು ತೋರುವ ಪಲ್ಲವಿ”

ಇದೆಲ್ಲ ಮುಗಿದ ಮೇಲೆ ನಾನು ಮುಂದಿನ ಜನ್ಮದಲ್ಲೂ ನೀನೇ ನನ್ನ ಸತಿ ಅಂದಾಗ, "ಅಯ್ಯೋ ನನಗೆ ಬೇಡಪ್ಪ ರಾಜಕಾರಣಿಯ ಸಹವಾಸ, ನನಗಂತೂ ಮುಂದಿನ ಜನ್ಮ ಬೇಡವೇ ಬೇಡ ಮುಂದಿನ ಜನ್ಮದಲ್ಲಿ ನಿಮಗೆ ಒಬ್ಬಳು ಗಯ್ಯಾಳಿ ಹೆಂಡತಿ ಸಿಗಬೇಕು" ಅಂದು ಹುಸಿಕೋಪ ತೋರಿಸಿದವಳು.  ನನ್ನ ಮಡದಿ ಪಲ್ಲವಿ, ಸಾರ್ವಜನಿಕ ಜೀವನದ ಇತಿಮಿತಿ ಅರಿತು ಬದುಕುತ್ತಿರುವವಳು, ನನ್ನ ಹೆಸರಿಗೆ ಕೆಟ್ಟ ಹೆಸರು ಬರಬಾರದೆಂದು ಕಳವಳಿಸುತ್ತಿರುವವಳು ಅಂತ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Love Story: ಈ ಜೋಡಿಯ ಒಂದು ಕಪ್ ಚಹಾದಿಂದ ವೈರಲ್ ಆಗ್ತಿದೆ ಇವರಿಬ್ಬರ ಲವ್ ಸ್ಟೋರಿ

“ಮುಂದಿನ ಜನ್ಮದಲ್ಲೂ ನನ್ನ ಮಡದಿಯಾಗಲಿ”

ನನ್ನ ಹೆತ್ತವರ ಪಾಲಿಗೆ ಮಗಳಾಗಿರುವವಳು. ನಮಗಾಗಿ ವ್ರತ ಮಾಡುವವಳು,ತಾನು ಕಷ್ಟಪಡುತ್ತಾ ನಮ್ಮ ಸಂತೋಷಕ್ಕೆ ಸಂಭ್ರಮಿಸುವವಳು. ಮನಸ್ಸಿನಲ್ಲಿ ಏನು ಇಟ್ಟುಕೊಳ್ಳದೆ, ಭಾವನೆಗಳನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಬಿಚ್ಚಿಟ್ಟು ಮನಸ್ಸು ಹಗುರ ಮಾಡಿಕೊಳ್ಳುವವಳು.ಗುಣಸಂಪನ್ನೆ ಮಗಳು, ಸೊಸೆ ,ತಾಯಿ, ಅತ್ತಿಗೆ, ಮಡದಿಯಾಗಿರುವ ಪಲ್ಲವಿಯೇ ಮುಂದಿನ ಜನ್ಮಕ್ಕೂ ನನ್ನ ಮಡದಿಯಾಗಲಿ ಎಂದು ಬಯಸುವುದು ಸಹಜ ಅಲ್ಲವೇ?” ಅಂತ ಫೇಸ್‌ಬುಕ್‌ನಲ್ಲಿ ಬರೆದು, ಫೋಟೋ ಶೇರ್ ಮಾಡಿದ್ದಾರೆ.
Published by:Annappa Achari
First published: