ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Elections) ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ನಾಯಕರ ನಡುವಿನ ವಾಗ್ದಾಳಿ ಜೋರಾಗಿದೆ. ಇಂದು ಕಾಂಗ್ರೆಸ್ ಪಕ್ಷ (Congress) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತರಿಗೆ ಕಾಂಗ್ರೆಸ್ ಮೋಸ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ದಲಿತರಿಗೆ ಮೀಸಲಾತಿ (Reservation) ಹೆಚ್ಚಳ ಮಾಡಿದೆ. ಈ ಹಿಂದೆಯೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ (G Parameshwar) ಹಾಗೂ ಮಾಜಿ ಸಂಸದ ಕೆಹೆಚ್ ಮುನಿಯಪ್ಪರನ್ನು (KH Muniyappa) ಸೋಲಿಸಿದ್ದು ಕಾಂಗ್ರೆಸ್ಸಿಗರೆ. ಆದ್ದರಿಂದ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಇದು ಬಹಿರಂಗ ಸತ್ಯ. ಸಂಕಟವನ್ನ ಎಷ್ಟು ದಿನ ಒಳಗಡೆ ಇಟ್ಟುಕೊಳ್ಳಲು ಆಗುತ್ತೆ ಈಗ ಸಂಕಷ್ಟ ಸ್ಫೋಟಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಪರಮೇಶ್ವರ್ ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದರು?
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು, ಜಿ ಪರಮೇಶ್ವರ್ ಅವರನ್ನು ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದರು? ಹಫ್ತಾ ಪಡೆದವರೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ನಾನೇ ಸೋಲಿಸಿದ್ದು, ನಾನೇ ಸೋಲಿಸಿದ್ದು ಅನ್ನೋ ಮಾತು ಸಿದ್ದರಾಮಯ್ಯ ಎದೆಯೊಳಗಿಂದ ಕೇಳಿಸುತ್ತದೆ. ಸಂಕಟವನ್ನು ಎಷ್ಟು ದಿನ ಒಳಗಡೆ ಇಟ್ಟುಕೊಳ್ಳಲು ಆಗುತ್ತೆ. ಸಂಕಟ ಸ್ಫೋಟ ಆಗಲೇಬೇಕು, ಈಗ ಆಗುತ್ತಿದೆ ಎಂದು ತಿಳಿಸಿದರು.
ಸುಳ್ಳು ಯಾರು ಹೇಳ್ತಾರೆ ಅಂತ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತು!
ಸಿದ್ದರಾಮಯ್ಯ ಅವರಿಗೆ ಸುಳ್ಳು ಯಾರು ಹೇಳುತ್ತಾರೆ ಎಂದು ಚೆನ್ನಾಗಿ ಗೊತ್ತು. ಚಿಕ್ಕಮಗಳೂರಿಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ರದ್ದು ಮಾಡಿ, ದತ್ತಪೀಠಕ್ಕೆ ಮೋಸ ಮಾಡಿದ್ದರು. ಡಿಜೆ ಹಳ್ಳಿ-ಕೆಜೆ ಹಳ್ಳಿ ಗ್ಯಾಂಗಿಗೆ ಸಪೋರ್ಟ್ ಮಾಡಿದ್ದು ಇದೇ ಕಾಂಗ್ರೆಸ್.
ಎಸ್.ಡಿ.ಪಿ.ಐ ಮೇಲಿನ ಕೇಸ್ ಹಿಂಪಡೆದು, ಆ ಬಳಿಕ ಕಾಂಗ್ರೆಸ್ನವರು ನಾವಲ್ಲ ಅಂದವರು. ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟ್ ಬರಲ್ಲ ಎಂದಿದ್ದರು, ಜನ 25 ಸ್ಥಾನ ಕೊಟ್ಟು ನಮ್ಮ ಪಕ್ಷದ ಪ್ರತಿನಿಧಿಗಳನ್ನ ಕಳುಹಿಸಿಕೊಟ್ಟರು. ಅಪ್ಪನ ಆಣೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಲ್ಲ ಅಂದರೂ ಬಿ.ಎಸ್ ಯಡಿಯೂರಪ್ಪ ಸಿಎಂ ಆದ್ರು.
ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡಬೇಕಿತ್ತು!
ಇದೇ ವೇಳೆ ಈಶ್ವರಪ್ಪ ಅವರು ಸಚಿವ ಸ್ಥಾನ ಬೇಡ ಎಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡಬೇಕಿತ್ತು, ಆದರೆ ಅವರ ಜಾಗದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ. ಈಶ್ವರಪ್ಪ ಪಕ್ಷ ಕಟ್ಟಿದ ಹಿರಿಯ ನಾಯಕರಲ್ಲಿ ಒಬ್ಬರು. ಅಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ತನಿಖೆಯಲ್ಲಿ ಅವರ ಪಾತ್ರ ಇಲ್ಲವೆಂದು ಸಾಬೀತಾಗಿದೆ.
ಈಗ ಅವರು ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ, ಅವರಿಗೆ ಕೊಡಬೇಕಿತ್ತು. ಅವರ ಗೌರವಕ್ಕೆ ಯಾವುದೇ ಕುಂದು ಉಂಟಾಗಲ್ಲ. ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಪಕ್ಷದ ಗೆಲುವಿನ ಬಗ್ಗೆ ಸಲಹೆ ನೀಡಿದ್ದಾರೆ. ಅವರು ಯಾವತ್ತೂ ನಮ್ಮ ಹಿರಿಯ ನಾಯಕರಲ್ಲಿ ಒಬ್ಬರು, ಅವರ ಗೌರವಕ್ಕೆ ಕುಂದು ಬರಲು ಅವಕಾಶ ನೀಡಲ್ಲ. ಅವರು ಮಂತ್ರಿ ಆಗಿದ್ದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿಯಲ್ಲಿ ನಾನೂ ಒಬ್ಬ ಎಂದು ತಿಳಿಸಿದರು.
ಇದನ್ನೂ ಓದಿ: Assembly Election: ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ಕೊಡುತ್ತೇನೆ -ಅಭಿಮಾನಿ ಘೋಷಣೆ
ಪಾಕಿಸ್ತಾನದಲ್ಲಿ ಸರ್ವೆ ಮಾಡಿದರೆ 150 ಅಲ್ಲ, 200 ಸ್ಥಾನ ಬರಬಹುದು.
ನಾನು ಪಕ್ಕಾ ಆರ್.ಎಸ್.ಎಸ್. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸಂಘ ಸಂಸ್ಕಾರ, ದೇಶಭಕ್ತಿ ಕಲಿಸುತ್ತೆ, ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ. ನಾವು ಏನು ಹೇಳುತ್ತಿವೋ ಅದನ್ನೇ ಮಾಡೋರು, ಏನ್ ಮಾಡ್ತೀವೋ ಅದನ್ನೇ ಹೇಳುವವರು. ಪಾಕಿಸ್ತಾನದಲ್ಲಿ ಸರ್ವೆ ಮಾಡಿದರೆ 150 ಅಲ್ಲ, 200 ಸ್ಥಾನ ಬರಬಹುದು. ನಮ್ಮ ರಾಜ್ಯ-ದೇಶದಲ್ಲಿ ಬರಲ್ಲ, ಕಾಂಗ್ರೆಸ್ ಗೆ ಮತ ಹಾಕೋರು ದಿನೇ-ದಿನೇ ಕಡಿಮೆ ಆಗುತ್ತಿದೆ. ಇಲ್ಲಿ ಕಾಂಗ್ರೆಸ್ ಡೆಪಾಜಿಟ್ ಉಳಿಸಿಕೊಳ್ಳುವುದು ಕಷ್ಟ ಎಂಬಂತಾಗಿದೆ ಎಂದು ಟೀಕಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ