• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಪಕ್ಷದ ಹೊಸ ಜವಾಬ್ದಾರಿ ಹಿನ್ನೆಲೆ, ಸಿ.ಟಿ. ರವಿ ಮಂತ್ರಿಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ

ಪಕ್ಷದ ಹೊಸ ಜವಾಬ್ದಾರಿ ಹಿನ್ನೆಲೆ, ಸಿ.ಟಿ. ರವಿ ಮಂತ್ರಿಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ

ಸಚಿವ ಸಿ ಟಿ ರವಿ

ಸಚಿವ ಸಿ ಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಆ ಜವಾಬ್ದಾರಿ ಸಿಕ್ಕಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡಿದ್ದೇನೆ. ನನ್ನ ಆಲೋಚನೆ ಯಾವಾಗಲೂ ಪಕ್ಷದ ಸಂಘಟನೆಯೇ ಎಂದು ಸಿ.ಟಿ. ರವಿ ಹೇಳಿದ್ದಾರೆ.

 • Share this:

ಬೆಂಗಳೂರು(ಸೆ. 27): ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಿ.ಟಿ. ರವಿ ಅವರು ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಏಕಕಾಲದಲ್ಲಿ ಎರಡು ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಸಿ.ಟಿ. ರವಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಅವರು ಮಾತನಾಡಿರುವುದು ತಿಳಿದುಬಂದಿದೆ. ಅದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ತಾನು ರಾಷ್ಟ್ರದಲ್ಲಿ ಪಕ್ಷದ ಜವಾಬ್ದಾರಿ ನಿರ್ವಹಿಸುತ್ತೇನೆ. ಈಗ ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುತ್ತದೆ ಎಂದು ನಾನು ಖಂಡಿತವಾಗಿ ನಿರೀಕ್ಷೆ ಮಾಡಿರಲಿಲ್ಲ. ಅದಕ್ಕೆ ಆಸೆ ಕೂಡ ಪಟ್ಟಿರಲಿಲ್ಲ. ಇಲ್ಲಿ ನೀಡಲಾಗಿದ್ದ ಮಂತ್ರಿಸ್ಥಾನದ ಜವಾಬ್ದಾರಿಯನ್ನ ನಾನು ನಿರ್ವಹಿಸುತ್ತಿದ್ದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನನಗೆ ಫೋನ್ ಮಾಡಿ ಪಕ್ಷದ ಹೊಸ ಜವಾಬ್ದಾರಿ ಬಗ್ಗೆ ತಿಳಿಸಿ ಯೋಚಿಸಿ ಹೇಳು ಎಂದರು. ನಾನು ಎರಡನೇ ಆಲೋಚನೆ ಇಲ್ಲದೆ ಪಕ್ಷದ ಜವಾಬ್ದಾರಿ ಒಪ್ಪಿಕೊಂಡೆ. ಕರ್ನಾಟಕವನ್ನು ಕೇಂದ್ರೀಕೃತ ಮಾಡಿಕೊಂಡು ರಾಷ್ಟ್ರದಲ್ಲಿ ಪಕ್ಷ ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಸಿ.ಟಿ. ರವಿ ತಿಳಿಸಿದರು.


ಯಾವ ಘಳಿಗೆಯಾದರೂ ನನ್ನ ಆಲೋಚನೆ ಪಕ್ಷದ ಸಂಘಟನೆಗೇ ಆಗಿರುತ್ತದೆ. ನಾನು ಯಾವುದೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದಲ್ಲ. ಈಗ ಸಿಗುತ್ತಿರುವ ಎಲ್ಲಾ ಜವಾಬ್ದಾರಿಗಳು ಹಾಗೂ ಅಧಿಕಾರಗಳು ಪಕ್ಷದ ಕಾರಣಕ್ಕಾಗಿ. ನನ್ನ ಯೋಗಕ್ಷೇಮವನ್ನು ಪಕ್ಷ ನೋಡಿಕೊಳ್ಳುತ್ತದೆ. ಪಕ್ಷವನ್ನ ಬಲಪಡಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ನೂತನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದರು.


ಇದನ್ನೂ ಓದಿ: ರಾಷ್ಟ್ರೀಯ ಯುವ ಮೋರ್ಚಾ​ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ನೇಮಕ; ಹಿರಿಯರಿಗೆ ಕೊಕ್​​, ಹೊಸಬರಿಗೆ ಮನ್ನಣೆ


ಇನ್ನು, ಸಿಎಂ ಭೇಟಿ ವೇಳೆ ಆದ ಮಾತುಕತೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿಟಿ ರವಿ, ತಾನು ಸಿಎಂ ಜೊತೆ ಏನೂ ಚರ್ಚೆ ಮಾಡಿಲ್ಲ. ದೆಹಲಿಗೆ ಯಾವಾಗ ಹೋಗುತ್ತೀಯಾ ಎಂದು ಕೇಳಿದ್ರು. ನಾನು ಗಾಂಧಿ ಜಯಂತಿ ಬಳಿಕ ಹೋಗುತ್ತೇನೆ ಎಂದಿರುವುದಾಗಿ ತಿಳಿಸಿದರು.


ರೈತರು ವಿಷಯ ಅರ್ಥಮಾಡಿಕೊಳ್ಳಬೇಕು: ನಾಳೆ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರಿಂದ ಕರ್ನಾಟಕ ಬಂದ್ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ರೈತರು ರಾಜಕೀಯ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು.


ಹತ್ತಾರು ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬರುತ್ತಾರೆ. ರೈತರಿಗೆ ನ್ಯಾಯಯುತವಾದ ಬೆಲೆ ಸಿಗುತ್ತದೆ. ನಾವು ಬೆಳೆದ ಬೆಳೆಗೆ ನಾವೇ ಬೆಲೆ ಕಟ್ಟಬೇಕು. ಅಂಥ ಕಾಲ ಇದೀಗ ಬರುತ್ತಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದರೂ ಈಗ ಎಪಿಎಂಸಿ ಕಾಯ್ದೆಯನ್ನ ವಿರೋಧಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ಸಿಗರ ಅವಿಶ್ವಾಸ: ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿರುವ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ. ರವಿ, ಈ ಅವಿಶ್ವಾಸ ನಿರ್ಣಯವು ವಿಶ್ವಾಸ ಕಳೆದುಕೊಂಡವರ ಬಡಬಡಿಕೆ ತರಹ ಇತ್ತು. ಅವರಿಗೆ ಜನರ ವಿಶ್ವಾಸ ಇಲ್ಲ. ಆ ಕಾರಣಕ್ಕೆ ಅವಿಶ್ವಾಸ ನಿರ್ಣಯದ ಮೂಲಕ ಅಸ್ತಿತ್ವ ತೋರಿಸಲು ಪ್ರಯತ್ನ ಮಾಡಿದರು ಎಂದರು.


ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ವೈಯಕ್ತಿಕ ಜುಗಲ್​ಬಂದಿ ತರಹ ಕಾಣಿಸುತ್ತಿತ್ತು. ಒಬ್ಬರು ತಬಲ ಭಾರಿಸಿದರೆ ಇನ್ನೊಬ್ಬರು ಹಾರ್ಮೋನಿಯಂ ಹೊಡೀತಿದ್ರು ಎಂದು ಪ್ರವಾಸೋದ್ಯಮ ಸಚಿವರು ವ್ಯಂಗ್ಯ ಮಾಡಿದರು.

top videos


  ವರದಿ: ಕೃಷ್ಣ ಜಿ.ವಿ. 

  First published: