ಚಿಕ್ಕಮಗಳೂರು(ಫೆ.11): ಇಂದಿನ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಏನೇ ಆಗಲಿ ಜನಾಭಿಪ್ರಾಯವನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಚುಣಾವಣೆಯಲ್ಲಿ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ತೀರ್ಪು ಎನ್ನುತ್ತಾರೆ. ಸೋತಾಗ ಮಾತ್ರ ಇವಿಎಂ ಮೇಲೆ ಗೂಬೆ ಕೂರಿಸುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ತಪರಾಕಿ ಬಾರಿಸಿದರು.
ತಾವು ಗೆದ್ದಾಗ ಮೋದಿ ವಿರುದ್ಧ ತೀರ್ಪು ಎನ್ನುವುದು, ಸೋತಾಗ ಮಾತ್ರ ಇವಿಎಂ ಮೇಲೆ ಗೂಬೆ ಕೂರಿಸುವುದು ಹಲವರ ಕಾಯಿಲೆ.
ಬಿಜೆಪಿಗೆ ಸೋಲು-ಗೆಲುವು ಹೊಸತೇನಲ್ಲ. ನಮ್ಮದು ವೀರೋಚಿತ ಹೋರಾಟ. ಇಂತಹ ಸೋಲುಗಳನ್ನು ಸಾಕಷ್ಟು ಕಂಡಿದ್ದೇವೆ. ಈ ಬಾರಿ ಜನ ಆಪ್ ಪರ ತೀರ್ಪು ನೀಡಿದ್ಧಾರೆ. ಸ್ಥಳೀಯ ನಾಯಕತ್ವ ಕೊರತೆಯಿಂದಾಗಿ ಚುನಾವಣೆಯಲ್ಲಿ ಸೋಲಬೇಕಾಯ್ತು ಎಂದರು.
ಇನ್ನು, ನಾವು ಪ್ರಜಾಪ್ರಭುತ್ವಕ್ಕೆ ಗೌರವ ನೀಡುತ್ತೇವೆ. ಯಾವತ್ತೂ ಅಪಮಾನಿಸುವ ಕೆಲಸ ಮಾಡಿಲ್ಲ. ದೆಹಲಿಯಲ್ಲಿ ಧೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ. ಕಾಂಗ್ರೆಸ್ ಟೀಕೆ ಮಾಡುವುದು ಬಿಟ್ಟು ಇನ್ನಾದರೂ ಬುದ್ದಿ ಕಲಿಯಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಪ್ರಶಾಂತ್ ಕಿಶೋರ್ ಐ-ಪ್ಯಾಕ್ ಶಕ್ತಿ ಪಡೆಯುವಲ್ಲಿ ಆಪ್ ಸಕ್ಸಸ್; ಕೇಜ್ರಿವಾಲ್ ಹ್ಯಾಟ್ರಿಕ್ ಸಿಎಂ
ಸತತ ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಎರಡನೇ ಬಾರಿಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಆರಂಭದಿಂದಲೂ ದೆಹಲಿ ಗದ್ದುಗೆಗಾಗಿ ಆಪ್ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದರೂ, ಕಾಂಗ್ರೆಸ್ ಮಾತ್ರ ಒಂದೆಜ್ಜೆ ಹಿಂದೆ ಇತ್ತು. ಚುನಾವಣಾ ಪ್ರಚಾರದ ಸಮಯದಿಂದಲೂ ಹಿಂದೆ ಇದ್ದ ಕಾಂಗ್ರೆಸ್ ಕೊನೆಗೂ ಚುನಾವಣೆಯಲ್ಲೀಗ 1 ಸ್ಥಾನವೂ ಗೆಲ್ಲದೆ ಹಿನ್ನಡೆ ಅನುಭವಿಸಿದೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಆಮ್ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಗೆ ಮುಖಭಂಗವಾಗಿದ್ದು, ಎರಡು ಅಂಕಿಗಳಷ್ಟು ಸ್ಥಾನವನ್ನು ಗೆದ್ದಿಲ್ಲ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 60ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರ ಹಿಡಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ