• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಚಿವ ಸಿ.ಟಿ. ರವಿ ಒತ್ತಾಯ

ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಚಿವ ಸಿ.ಟಿ. ರವಿ ಒತ್ತಾಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಚಿವ ಸಿ.ಟಿ.ರವಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಚಿವ ಸಿ.ಟಿ.ರವಿ.

ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಚಿವ ಸಿ.ಟಿ. ರವಿ ಅವರ  ಮನವಿಯನ್ನು ಆಲಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಆಶ್ವಾಸನೆ ನೀಡಿದರು.

  • Share this:

ನವದೆಹಲಿ: ಸತತ ಬರಗಾಲ, ಭಾರೀ ಪ್ರವಾಹ ಹಾಗೂ ರೋಗಗಳಿಂದ ತತ್ತರಿಸಿ ಹೋಗಿರುವ ಚಿಕ್ಕಮಗಳೂರು ಜಿಲ್ಲೆಯ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು  ಮತ್ತು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಒತ್ತಾಯಿಸಿದ್ದಾರೆ.


ಮಂಗಳವಾರ ನವದೆಹಲಿಯಲ್ಲಿ ಕೇಂದ್ರ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದ ಸಚಿವ ಸಿ.ಟಿ. ರವಿ, ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ಹಿತ ಕಾಪಾಡುವಂತೆ ಮನವಿ ಮಾಡಿದರು. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು ಸತತ ಎರಡು ವರ್ಷದಿಂದ ಪ್ರವಾಹ ಉಂಟಾಗಿ ಬೆಳೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇದರಿಂದ ಸಾವಿರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.


ಈ ಹಿಂದೆ  2015-16, 2016-17, 2017-18ರಲ್ಲಿ ಉಂಟಾದ ಸತತ ಬರಗಾಲ ಹಾಗೂ 2019-20 ಹಾಗೂ ಪ್ರಸಕ್ತ ವರ್ಷವೂ  ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿ ಬೆಳೆದು ನಿಂತಿದ್ದ ಕಾಫಿ, ಅಡಿಕೆ, ಮೆಣಸು, ಏಲಕ್ಕಿ, ಬಾಳೆ, ಭತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇವುಗಳ ಜತೆಗೆ ಈ ಬಾರಿ ರಾಜ್ಯದಲ್ಲಿ ಕೋವಿಡ್-19 ಸೋಂಕು ಬಂದ ಪರಿಣಾಮ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಒಂದಾದ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇರುವುದರಿಂದ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಸಿ.ಟಿ.ರವಿ ವಿವರಿಸಿದರು.


ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಅಲ್ಪಾವಧಿ ಬೆಳೆ ಸಾಲ ವಿತರಣೆ, ಕೃಷಿ ಬೆಳೆ ಸಾಲದ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಳ ಮಾಡುವುದು, ಪ್ರಸಕ್ತ ವರ್ಷ ರೈತರಿಗೆ ನೀಡುವ ಸಾಲಕ್ಕೆ ಬಡ್ಡಿ ವಿಧಿಸದಿರುವುದು, ಕಾಫಿ ಮಂಡಳಿಗೆ ಬಾಕಿ ಇರುವ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡುವುದು, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಮತ್ತಿತರ ವಸ್ತುಗಳಿಗೆ ಜಿಎಸ್‍ಟಿಯಿಂದ ವಿನಾಯ್ತಿ ಹಾಗೂ ರಸಗೊಬ್ಬರಗಳಿಗೆ ಸಹಾಯಧನವನ್ನು ಘೋಷಿಸುವಂತೆ ಮನವಿ  ಪತ್ರದಲ್ಲಿ ಒತ್ತಾಯಿಸಿದ್ದಾರೆ.


ವಿಶೇಷವಾಗಿ ಸಣ್ಣ ಕಾಫಿ ಬೆಳೆಗಾರರಿಗೆ ಆದಾಯ ತೆರಿಗೆ ನಿಯಮ 1961ರ ನಿಯಮ 7 ಬಿ(1) ರದ್ದುಗೊಳಿಸುವುದು ಸೇರಿದಂತೆ ಹಲವು ರೀತಿಯ ರಿಯಾಯ್ತಿಗಳನ್ನು ನೀಡಬೇಕು. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಕಾಫಿ ಬೆಳೆಗಾರರಿದ್ದು, ಶೇಕಡಾ 90ರಷ್ಟು ಜನರುನಾಲ್ಕು ಹೆಕ್ಟೇರ್​ಗಿಂತ ಕಡಿಮೆ ಬೆಳೆಗಾರರಿದ್ದಾರೆ. ಪ್ರತಿ ವರ್ಷ ಸುಮಾರು ಒಂದು ಸಾವಿರ ಕೋಟಿಗೂ ಅಧಿಕ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಹೀಗಾಗಿ ಅವರ ಹಿತ ಕಾಪಾಡಬೇಕೆಂದು ಅವರು ಆಗ್ರಹಿಸಿದರು.


ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಚಿವ ಸಿ.ಟಿ. ರವಿ ಅವರ  ಮನವಿಯನ್ನು ಆಲಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಆಶ್ವಾಸನೆ ನೀಡಿದರು. ಹಾಗೂ ಮುಂದಿನ ವಾರ ಕಾಫಿ ಬೆಳೆಗಾರರ ಪ್ರತಿನಿಧಿಗಳ ಜತೆ ವೆಬಿನಾರ್ (ವಿಡಿಯೋ ಕಾನ್ಫರೆನ್ಸ್) ನಡೆಸಲಾಗುವುದು. ನಂತರ ಅಧಿಕಾರಿಗಳ ಜತೆ ಚರ್ಚಿಸಿ ವಿಶೇಷ ಪ್ಯಾಕೇಜ್ ಇಲ್ಲವೇ ಆರ್ಥಿಕ ನೆರವು ಬಿಡುಗಡೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಇದನ್ನು ಓದಿ: ಡಿಜೆ ಹಳ್ಳಿ ಗಲಭೆಯಲ್ಲೂ ಬಿಜೆಪಿ ರಾಜಕೀಯ ಲಾಭಕ್ಕೆ ಮುಂದಾಗಿದೆ, ತನಿಖೆಯ ಹಾದಿ ತಪ್ಪಿಸುತ್ತಿದೆ; ಸಿದ್ದರಾಮಯ್ಯ


ಕಾಫಿ ಬೆಳೆಗಾರರ ಸಂಕಷ್ಟ ತಮಗೆ ಮನವರಿಕೆಯಾಗಿದ್ದು, ಯಾರೊಬ್ಬರೂ ಧೃತಿಗೆಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು