ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ: ಸಚಿವ ಸಂಪುಟ ಸಭೆಯತ್ತ ಎಲ್ಲರ ಚಿತ್ತ


Updated:March 14, 2018, 12:50 AM IST
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ: ಸಚಿವ ಸಂಪುಟ ಸಭೆಯತ್ತ ಎಲ್ಲರ ಚಿತ್ತ

Updated: March 14, 2018, 12:50 AM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇವತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಕುರಿತಾಗಿ ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತೆ ಎಂದು ಹೇಳಲಾಗುತ್ತಿದ್ದು, ಸಂಪುಟ ಸಭೆಯತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ.

ಈ ಮಧ್ಯೆ, ದಾವಣಗೆರೆಯಲ್ಲಿ ಗುರು-ವಿರಕ್ತ ಸ್ವಾಮೀಜಿಗಳ ಜೊತೆ ಸಭೆ ನಡೆಸಿದ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಮಾಜದ ವಿಘಟನೆ ಕಾರಣ ಆದವರಿಗೆ ಮಠಾಧೀಶರು ಬುದ್ದಿ ಕಲಿಸುತ್ತಾರೆ. ಸಮಾಜ ಹೋಳು ಮಾಡಿದರೆ, ಹೋಳು ಮಾಡಿದವರು ಪಾಪಕ್ಕೆ ಹೋಗ್ತಾರೆ ಎಂದು ಕಿಡಿ ಕಾರಿದ್ದಾರೆ.

ಗುರು-ವಿರಕ್ತ ಸ್ವಾಮೀಜಿಗಳಿಂದ ಹೋರಾಟ: ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿ ಇವತ್ತು ಬೃಹತ್ ಪ್ರತಿಭಟನೆ ನಡೆಸಲು ಗುರು-ವಿರಕ್ತ ಸ್ವಾಮೀಜಿಗಳು ನಿರ್ಧರಿಸಿದ್ದಾರೆ. ದಾವಣಗೆರೆಯಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನ ಭೇಟಿಮಾಡಿದ್ದ ಶಿವಾಚಾರ್ಯ ಮಹಾಸ್ವಾಮಿ, ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಹೊಸಪೇಟೆ ಸಂಗನಬಸವ ಗುರುಗಳು, ಮುಂಡರಗಿ ಅನ್ನದಾನೇಶ್ವರ ಶ್ರೀಗಳು ಸೇರಿದಂತೆ 50ಕ್ಕೂ ಹೆಚ್ಚು ಸ್ವಾಮೀಜಿಗಳು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡದಂತೆ ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಿದರು. ಇದೇವೇಳೆ, ಇವತ್ತು ಕ್ಯಾಬಿನೆಟ್ ಸಭೆಗೂ ಮುನ್ನ ಸಿಎಂ ಭೇಟಿಗೆ ನಿರ್ಧರಿಸಿರುವ ಶ್ರೀಗಳು .ನ್ಯಾ.ನಾಗಮೋಹನ್ ಸಮಿತಿ ವರದಿ ತಿರಸ್ಕರಿಸಲು ಮನವಿ ಮಾಡಲಿದ್ದಾರೆ.

ವೀರಶೈವ-ಲಿಂಗಾಯತ ಒಂದೇ: ಇವತ್ತು ಮಹತ್ವದ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೀರಶೈವ ವಟುಗಳ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಬಾಗಲಕೋಟೆಯ ಶಿವಯೋಗ ಮಂದಿರದಲ್ಲಿ ವೀರಶೈವ-ಲಿಂಗಾಯತ ಒಂದೇ ಎನ್ನುವ ನಿಲುವು ಹೊಂದಿರುವ ನಾಡಿನ ವಿವಿಧ ಮಠಾಧೀಶರು ಮಹತ್ವದ ಸಭೆ ನಡೆಸಿ ಎರಡು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.

ನಿರ್ಣಯಗಳು
1. ವೀರಶೈವ-ಲಿಂಗಾಯತ ಮಠಾಧೀಶರ ಮನವಿ ಲೆಕ್ಕಿಸದೇ ಸ್ವತಂತ್ರ ಧರ್ಮದ ಪರ ಇರುವ ಮಠಾಧೀಶರ ಒತ್ತಡಕ್ಕೆ ಮಣಿದು ಶಿಪಾರಸು ಮಾಡಿದಲ್ಲಿ ನಾಡಿನಾದ್ಯಂತ ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ನಿರ್ಣಯ.
Loading...

2. ವೀರಶೈವ-ಲಿಂಗಾಯತ ಧರ್ಮದ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ ಅವರ ನಿಲುವು ನಮ್ಮ ನಿಲುವು ಸಹ ಒಂದೇ ಆಗಿದೆ. ಸಂಪುಟದ ತೀರ್ಮಾನ ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ರೂಪರೇಷೆ ತಯಾರಿಸಲು ಚಿಂತನೆ. ಸರ್ಕಾರ ವರದಿ ಕೈಬಿಟ್ಟಲ್ಲಿ ಹೋರಾಟ ಕೈಬಿಡುವುದಾಗಿ ಸಭೆ ನಿರ್ಣಯ ಕೈಗೊಂಡಿದೆ.

ಪಂಚಪೀಠದ ಸ್ವಾಮೀಜಿಗಳ ಜೊತೆ ಎಂ.ಬಿ. ಪಾಟೀಲ್ ಚರ್ಚೆ: ಮೊನ್ನೆಯಷ್ಟೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಹಾಗೂ ವೀರಶೈವ ಸಚಿವರ ಮಧ್ಯೆ ಜೋರಾಗಿಯೇ ವಾಗ್ವಾದ ನಡೆದಿತ್ತು. ಇದರ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್ ಮಾರ್ಚ್ 12ರಂದು​ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ಬಾಗಲಕೋಟೆಯಲ್ಲಿ ಪಂಚಪೀಠಾಧೀಶರ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಎಂ.ಬಿ. ಪಾಟೀಲ್, ಸ್ವತಂತ್ರ ಧರ್ಮ ವಿಚಾರದಲ್ಲಿ ವೀರಶೈವ ಹಾಗೂ ಲಿಂಗಾಯತರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದರು..ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಸಹ ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ತೀವ್ರ ವಿವಾದಕ್ಕೆ ಎಡೆಮಾಡಿದೆ. ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ. ನಾಗಮೋಹನದಾಸ ನೇತೃತ್ವದ ತಜ್ಞರ ವರದಿಯನ್ನು ಕೇಂದ್ರಕ್ಕೆ ಶಿಪಾರಸು ಮಾಡಲು ಸಿದ್ದತೆ ಮಾಡಿಕೊಂಡಿದೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ